‘ವಿಷಪ್ರಾಶನಕ್ಕೊಳಗಾದ’ ರಶ್ಯ ಪ್ರತಿಪಕ್ಷ ನಾಯಕನನ್ನು ಬೇರೆಡೆ ಸಾಗಿಸಲು ಆಸ್ಪತ್ರೆ ನಿರಾಕರಣೆ: ವಕ್ತಾರೆ ಆರೋಪ

Update: 2020-08-21 16:48 GMT

ಓಮ್‌ಸ್ಕ್ (ರಶ್ಯ), ಆ. 21: ರಶ್ಯದ ಪ್ರತಿಪಕ್ಷ ನಾಯಕ ಹಾಗೂ ಆ ದೇಶದ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ರ ಕಟು ಟೀಕಾಕಾರ ಅಲೆಕ್ಸೀ ನವಾಲ್ನಿಯನ್ನು ಉತ್ತಮ ಸೌಲಭ್ಯವಿರುವ ಇನ್ನೊಂದು ಆಸ್ಪತ್ರೆಗೆ ಸಾಗಿಸಲು ಪ್ರಸಕ್ತ ಅವರಿಗೆ ಚಿಕಿತ್ಸೆ ನೀಡುತ್ತಿರುವ ಸೈಬೀರಿಯದ ಆಸ್ಪತ್ರೆಯೊಂದು ನಿರಾಕರಿಸುತ್ತಿದೆ ಎಂದು ಅವರ ವಕ್ತಾರೆ ಶುಕ್ರವಾರ ಆರೋಪಿಸಿದ್ದಾರೆ.

ವಿಷ ಬೆರೆಸಲ್ಪಟ್ಟಿದೆ ಎಂದು ಭಾವಿಸಲಾದ ಚಹಾವನ್ನು ಕುಡಿದ ಬಳಿಕ ತೀವ್ರ ಅಸ್ವಸ್ಥರಾಗಿರುವ ನವಾಲ್ನಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ಹೋರಾಟದಲ್ಲಿದ್ದಾರೆ.

ಪ್ರತಿಪಕ್ಷ ನಾಯಕನ ಪರಿಸ್ಥಿತಿ ಅಸ್ಥಿರವಾಗಿದೆ ಹಾಗೂ ಇಂಥ ಪರಿಸ್ಥಿತಿಯಲ್ಲಿ ಇನ್ನೊಂದು ಆಸ್ಪತ್ರೆಗೆ ಅವರನ್ನು ಕರೆದೊಯ್ಯುವುದು ಸಮಂಜಸವಲ್ಲ ಎಂಬುದಾಗಿ ಆಸ್ಪತ್ರೆ ಭಾವಿಸಿದೆ ಎಂದು ಆಸ್ಪತ್ರೆಯ ಮುಖ್ಯ ವೈದ್ಯರು ಶುಕ್ರವಾರ ಹೇಳಿದ್ದಾರೆ ಎಂದು ಅವರ ವಕ್ತಾರೆ ಕಿರಾ ಯಾರ್ಮಿಶ್ ಹೇಳಿದರು.

ಅವರನ್ನು ಚಿಕಿತ್ಸೆಗಾಗಿ ಜರ್ಮನಿಗೆ ಸಾಗಿಸುವ ಯೋಜನೆ ಸಿದ್ಧವಾಗಿದ್ದು, ಅಲ್ಲಿಂದ ಪರಿಣತ ವೈದ್ಯರ ತಂಡದೊಂದಿಗೆ ವಿಮಾನ ಆ್ಯಂಬುಲೆನ್ಸ್ ಬರಲಿದೆ ಎಂದು ಅವರು ತಿಳಿಸಿದರು.

‘‘ನವಾಲ್ನಿಯನ್ನು ಸಾಗಿಸಲು ಆಸ್ಪತ್ರೆಯು ನಿಷೇಧ ಹೇರಿರುವುದು, ವೈದ್ಯರು ಹಾಗೂ ವಂಚಕ ಅಧಿಕಾರಿಗಳು ಅವರ ಮೇಲೆ ನಡೆಸುತ್ತಿರುವ ಕೊಲೆಯತ್ನವಾಗಿದೆ’’ ಎಂದು ಸಾಮಾಜಿಕ ಮಾಧ್ಯಮದಲ್ಲಿ ಯಾರ್ಮಿಶ್ ಬರೆದಿದ್ದಾರೆ.

ದೇಹದಲ್ಲಿ ವಿಷದ ಲವಲೇಶವೂ ಇಲ್ಲ: ವೈದ್ಯ

ರಶ್ಯದ ಪ್ರತಿಪಕ್ಷ ನಾಯಕ ಅಲೆಕ್ಸೀ ನವಾಲ್ನಿಗೆ ವಿಷಪ್ರಾಶನವಾಗಿದೆ ಎನ್ನುವುದಕ್ಕೆ ಯಾವುದೇ ಪುರಾವೆ ವೈದ್ಯರಿಗೆ ಸಿಕ್ಕಿಲ್ಲ ಎಂದು ಅವರು ಚಿಕಿತ್ಸೆ ಪಡೆಯುತ್ತಿರುವ ಸೈಬೀರಿಯದ ಆಸ್ಪತ್ರೆಯ ಉಪ ಮುಖ್ಯ ವೈದ್ಯ ಅನಾತೊಲಿ ಕಲಿನಿಚೆಂಕೊ ಶುಕ್ರವಾರ ಹೇಳಿದ್ದಾರೆ.

‘‘ಈವರೆಗೆ ಅವರ ರಕ್ತ ಮತ್ತು ಮೂತ್ರದಲ್ಲಿ ಯಾವುದೇ ವಿಷವನ್ನು ಪತ್ತೆಹಚ್ಚಲಾಗಿಲ್ಲ. ವಿಷದ ಲವಲೇಶವೂ ಅವರ ದೇಹದಲ್ಲಿಲ್ಲ’’ ಎಂದು ಓಮ್‌ಸ್ಕ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದರು.

‘‘ವಿಷ ಅಂಶವನ್ನು ಪತ್ತೆಹಚ್ಚಲು ನಾವು ಈಗಲೂ ಪ್ರಯತ್ನಿಸುತ್ತಿದ್ದೇವೆ. ಆದರೆ ರೋಗಿಯು ವಿಷಪ್ರಾಶನಕ್ಕೆ ಒಳಗಾಗಿದ್ದಾರೆ ಎಂದು ನಾವು ನಂಬುವುದಿಲ್ಲ’’ ಎಂದರು.

‘‘ರೋಗಿಯ ಸ್ಥಿತಿ ಅಸ್ಥಿರವಾಗಿದೆ. ಹಾಗಾಗಿ, ಪ್ರಯಾಣ ಮಾಡದಿರುವುದು ಉತ್ತಮ’’ ಎಂದು ಅವರು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News