ಫೈಝರ್ ಸಿದ್ಧಗೊಳಿಸಿರುವ ಕಡಿಮೆ ಅಡ್ಡಪರಿಣಾಮಗಳ ಕೋವಿಡ್ ಲಸಿಕೆ ಅಂತಿಮ ಹಂತದ ಪರೀಕ್ಷೆಗೆ ಸಜ್ಜು

Update: 2020-08-21 17:12 GMT

ಹೊಸದಿಲ್ಲಿ,ಆ.21: ಅಮೆರಿಕದ ಬಹುರಾಷ್ಟ್ರೀಯ ಔಷಧಿ ತಯಾರಿಕೆ ಕಂಪನಿ ಫೈಝರ್ ಮತ್ತು ಅದರ ಜರ್ಮನ್ ಪಾಲುದಾರ ಬಯೊ ಎನ್‌ಟೆಕ್ ಅತ್ಯಂತ ಕಡಿಮೆ ಅಡ್ಡಪರಿಣಾಮಗಳನ್ನು ಬೀರುವ ಕೋವಿಡ್-19 ಲಸಿಕೆಯನ್ನು ಅಭಿವೃದ್ಧಿಗೊಳಿಸಿದ್ದು,ಅದನ್ನು ಅಂತಿಮ ಹಂತದ ಪರೀಕ್ಷೆಗೊಳಪಡಿಸಲು ಸಜ್ಜಾಗಿವೆ.

ಫೈಝರ್‌ನ ಸಂಶೋಧಕರು ತಾವು ಅಭಿವೃದ್ಧಿಗೊಳಿಸಿರುವ ಎರಡು ಲಸಿಕೆಗಳ ಆರಂಭಿಕ ಹಂತದ ಪರೀಕ್ಷೆಯ ದತ್ತಾಂಶಗಳನ್ನು ಹೋಲಿಸಿದ್ದು,ರೋಗ ನಿರೋಧಕ ಶಕ್ತಿಯನ್ನು ಪುನಃಶ್ಚೇತನಗೊಳಿಸುವಲ್ಲಿ ಎರಡೂ ಲಸಿಕೆಗಳು ಸಮಾನವಾಗಿ ಸಮರ್ಥವಾಗಿವೆ ಮತ್ತು ಗಂಭೀರ ಅಡ್ಡಪರಿಣಾಮಗಳನ್ನು ಉಂಟು ಮಾಡಿಲ್ಲ ಎಂದು ಆನ್‌ಲೈನ್ ವರದಿಯೊಂದು ತಿಳಿಸಿದೆ.

  ಆದರೆ ಈ ಪೈಕಿ ಒಂದು ಲಸಿಕೆಯನ್ನು ಚುಚ್ಚುಮದ್ದಿನ ಮೂಲಕ ನೀಡಿದಾಗ,ವಿಶೇಷವಾಗಿ ವಯಸ್ಸಾದವರಲ್ಲಿ ಜ್ವರ,ತಲೆನೋವು,ಚಳಿ ಅಥವಾ ಸ್ನಾಯು ನೋವಿನಂತಹ ಅಷ್ಟೇನೂ ತೀವ್ರವಲ್ಲದ ಅಡ್ಡಪರಿಣಾಮಗಳು ಕಂಡುಬಂದಿದ್ದವು. ಇವು ತಾತ್ಕಾಲಿಕವಾಗಿದ್ದರೂ ಅಹಿತಕರವಾಗಿದ್ದವು ಎಂದು ವರದಿಯು ಹೇಳಿದೆ.

ಫೈಝರ್‌ನ ಪ್ರಮುಖ ಲಸಿಕೆಯ ಅಂತಿಮ ಹಂತದ ಪರೀಕ್ಷೆಗೆ ಚಾಲನೆ ನೀಡಲಾಗಿದ್ದು,ಇದಕ್ಕಾಗಿ ಸಂಶೋಧಕರು ಅಮೆರಿಕ ಮತ್ತು ಇತರ ದೇಶಗಳಲ್ಲಿ ಸುಮಾರು 30,000 ಜನರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದು ಪರೀಕ್ಷೆಯ ಅಂತಿಮ ಹಂತವನ್ನು ತಲುಪಿರುವ ವಿಶ್ವದ ಕೆಲವೇ ಲಸಿಕೆಗಳಲ್ಲೊಂದಾಗಿದೆ.

 ವ್ಯಾಪಕ ಬಳಕೆ ಮತ್ತು ವಿತರಣೆಗಾಗಿ ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆಯನ್ನು ಅಭಿವೃದ್ಧಿಗೊಳಿಸಲು ಸಾಮಾನ್ಯವಾಗಿ ಹಲವಾರು ವರ್ಷಗಳು ಬೇಕಾಗುತ್ತವೆ. ಮುಂದಿನ ವರ್ಷ ಈ ಲಸಿಕೆ ನೀಡಿಕೆ ಸಾಧ್ಯವಾಗಬಹುದು ಎಂದು ಅಮೆರಿಕದ ಆರೋಗ್ಯ ಅಧಿಕಾರಿಗಳು ಆಶಯ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News