ಕಾಂಗ್ರೆಸ್ ಅಧ್ಯಕ್ಷೆ ಸ್ಥಾನದಿಂದ ಕೆಳಗಿಳಿಯಲು ಸಿದ್ಧ ಎಂದ ಸೋನಿಯಾ ಗಾಂಧಿ: ವರದಿ
ಹೊಸದಿಲ್ಲಿ: ಪಕ್ಷದಲ್ಲಿನ ಆಂತರಿಕ ಬಿಕ್ಕಟ್ಟನ್ನು ಉಲ್ಲೇಖಿಸಿ, ನಾಯಕತ್ವದ ವಿಚಾರದಲ್ಲಿ ಪಕ್ಷದ ಹಿರಿಯ ನಾಯಕರು ಬರೆದಿರುವ ಪತ್ರಕ್ಕೆ ಉತ್ತರಿಸಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ತಾನು ಹಂಗಾಮಿ ಅಧ್ಯಕ್ಷೆ ಸ್ಥಾನದಿಂದ ಕೆಳಗಿಳಿಯಲು ಸಿದ್ಧ. ಪಕ್ಷವು ಒಟ್ಟಾಗಿ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಬಹುದು ಎಂದು ಹೇಳಿದ್ದಾರೆಂದು ವರದಿಯಾಗಿದೆ.
ಹಂಗಾಮಿ ಅಧ್ಯಕ್ಷರಾಗಿ ತನ್ನ ಅವಧಿ ಮುಗಿದಿದ್ದು, ಈ ಸ್ಥಾನದಿಂದ ಕೆಳಗಿಳಿಯಲು ಸಿದ್ಧವಾಗಿದ್ದೇನೆ ಎಂದು ಸೋನಿಯಾ ಗಾಂಧಿಯವರು ನಾಯಕರ ಪತ್ರಕ್ಕೆ ಪ್ರತಿಕ್ರಿಯಿಸಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ indiatoday.in ವರದಿ ಮಾಡಿದೆ.
ಸೋಮವಾರ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆ ನಡೆಯಲಿದೆ. ಈ ಸಭೆಯಲ್ಲಿ ಸೋನಿಯಾ ಗಾಂಧಿಯವರು ಅಧಿಕೃತವಾಗಿ ರಾಜೀನಾಮೆ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ, “ಸೋನಿಯಾ ಗಾಂಧಿ ಯಾವ ನಾಯಕರೊಂದಿಗೂ ಮಾತನಾಡಿಲ್ಲ. ಯಾವುದೇ ಪತ್ರವನ್ನೂ ಬರೆದಿಲ್ಲ, ನಾವು ಈ ವರದಿಯನ್ನು ಸಂಪೂರ್ಣವಾಗಿ ಅಲ್ಲಗಳೆಯುತ್ತೇವೆ” ಎಂದಿದ್ದಾರೆ.