ದಾವೂದ್ ಇಬ್ರಾಹೀಂ ವಾಸಿಸುವುದು ಕರಾಚಿಯಲ್ಲಿ: ಕೊನೆಗೂ ಒಪ್ಪಿಕೊಂಡ ಪಾಕಿಸ್ತಾನ!

Update: 2020-08-23 15:24 GMT

ಇಸ್ಲಾಮಾಬಾದ್, ಆ. 23: 1993ರ ಮುಂಬೈ ಸರಣಿ ಬಾಂಬ್ ಸ್ಫೋಟಗಳ ಪ್ರಮುಖ ಆರೋಪಿ ಹಾಗೂ ಭೂಗತ ಪಾತಕಿ ದಾವೂದ್ ಇಬ್ರಾಹೀಂ ಕರಾಚಿಯಲ್ಲಿ ವಾಸಿಸುತ್ತಿದ್ದಾನೆ ಎನ್ನುವುದನ್ನು ಹಲವು ವರ್ಷಗಳ ನಿರಾಕರಣೆಯ ಬಳಿಕ ಪಾಕಿಸ್ತಾನ ಒಪ್ಪಿಕೊಂಡಿದೆ.

ಭಯೋತ್ಪಾದಕರಿಗೆ ಆರ್ಥಿಕ ನೆರವು ನೀಡುವ ಸಂಘಟನೆಗಳ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳದಿರುವುದಕ್ಕಾಗಿ ‘ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್’ನಿಂದ ದಂಡನೆಗೆ ಒಳಗಾಗುವುದರಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಪಾಕಿಸ್ತಾನವು 88 ನಿಷೇಧಿತ ಭಯೋತ್ಪಾದಕ ಗುಂಪುಗಳ ಪಟ್ಟಿಯೊಂದನ್ನು ಬಿಡುಗಡೆಗೊಳಿಸಿದ್ದು, ಆ ಪಟ್ಟಿಯಲ್ಲಿ ದಾವೂದ್ ಇಬ್ರಾಹೀಮ್‌ನ ಹೆಸರಿದೆ.

ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಭಯೋತ್ಪಾದಕ ಗುಂಪುಗಳು ಮತ್ತು ಹಫೀಝ್ ಸಯೀದ್, ಮಸೂದ್ ಅಝರ್ ಮತ್ತು ದಾವೂದ್ ಇಬ್ರಾಹೀಮ್ ಸೇರಿದಂತೆ ಅವುಗಳ ನಾಯಕರ ವಿರುದ್ಧ ಆರ್ಥಿಕ ದಿಗ್ಬಂಧನಗಳನ್ನು ವಿಧಿಸಿರುವುದಾಗಿ ಪಾಕಿಸ್ತಾನ ಹೇಳಿದೆ. ಅವರು ಹೊಂದಿರುವ ಸೊತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಹಾಗೂ ಅವರ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವಂತೆ ಆದೇಶ ನೀಡಲಾಗಿದೆ ಎಂದು ಅದು ತಿಳಿಸಿದೆ.

ಭಯೋತ್ಪಾದಕರಿಗೆ ಹಣಕಾಸು ಪೂರೈಸುವವರ ಮೇಲೆ ನಿಗಾ ಇಡುವ, ಪ್ಯಾರಿಸ್‌ ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ 2018 ಜೂನ್‌ನಲ್ಲಿ ಪಾಕಿಸ್ತಾನವನ್ನು ಬೂದು ಪಟ್ಟಿಗೆ ಸೇರಿಸಿತ್ತು. ಇದು ಕಪ್ಪುಪಟ್ಟಿಗಿಂತ ಹಿಂದಿನ ಹಂತವಾಗಿದೆ. ಈ ಹಂತದಲ್ಲಿ ತನ್ನ ವರ್ತನೆಗಳನ್ನು ಸುಧಾರಿಸಲು ಪಾಕಿಸ್ತಾನಕ್ಕೆ ಅವಕಾಶವೊಂದನ್ನು ನೀಡಲಾಗುತ್ತದೆ. ಮುಂದಿನ ಹಂತವಾಗಿರುವ ಕಪ್ಪು ಪಟ್ಟಿಗೆ ಪಾಕಿಸ್ತಾನ ಸೇರ್ಪಡೆಗೊಂಡರೆ ಅಂತರ್‌ರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಮತ್ತು ದೇಶಗಳು ಪಾಕಿಸ್ತಾನದೊಂದಿಗೆ ಯಾವುದೇ ಹಣಕಾಸು ವ್ಯವಹಾರಗಳನ್ನು ನಡೆಸಲು ಸಾಧ್ಯವಾಗವುದಿಲ್ಲ.

2019ರ ಕೊನೆಯ ವೇಳೆಗೆ, ಉಗ್ರ ಸಂಘಟನೆಗಳ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳುವಂತೆ ಎಫ್‌ಎಟಿಎಫ್ ಪಾಕಿಸ್ತಾನಕ್ಕೆ ತಾಕೀತು ಮಾಡಿತ್ತು. ಆದೆ, ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಈ ಗಡುವನ್ನು ವಿಸ್ತರಿಸಲಾಗಿತ್ತು.

ಮುಂಬೈ ಭಯೋತ್ಪಾದಕ ದಾಳಿಯ ರೂವಾರಿ ಹಾಗೂ ಜಮಾಅತುದಅವಾ (ಜೆಯುಡಿ) ಮುಖ್ಯಸ್ಥ ಹಫೀಝ್ ಸಯೀದ್, ಜೈಶೆ ಮುಹಮ್ಮದ್ ಮುಖ್ಯಸ್ಥ ಮಸೂದ್ ಅಝರ್ ಮತ್ತು ಭೂಗತ ಪಾತಕಿ ದಾವೂದ್ ಇಬ್ರಾಹೀಂ ಮುಂತಾದವರ ವಿರುದ್ಧ ಆರ್ಥಿಕ ದಿಗ್ಬಂಧನಗಳನ್ನು ವಿಧಿಸುವ ಎರಡು ಅಧಿಸೂಚನೆಗಳನ್ನು ಪಾಕಿಸ್ತಾನ ಸರಕಾರ ಆಗಸ್ಟ್ 18ರಂದು ಹೊರಡಿಸಿದೆ.

ಪಾಕಿಸ್ತಾನಿ ಅಧಿಕಾರಿಗಳ ಪ್ರಕಾರ, ದಾವೂದ್ ಇಬ್ರಾಹೀಂ‌ನ ವಿಳಾಸ ‘‘ವೈಟ್ ಹೌಸ್, ಸೌದಿ ಮಸೀದಿ ಸಮೀಪ, ಕ್ಲಿಫ್ಟನ್, ಕರಾಚಿ, ಪಾಕಿಸ್ತಾನ’’. ಅವನು ‘ಹೌಸ್ ನಂಬರ್ 37, 30ನೇ ರಸ್ತೆ, ಡಿಫೆನ್ಸ್ ಹೌಸಿಂಗ್ ಅಥಾರಿಟಿ, ಕರಾಚಿ’ ಎಂಬ ವಿಳಾಸದಲ್ಲಿ ಇನ್ನೊಂದು ಕಟ್ಟಡ ಮತ್ತು ‘ಕರಾಚಿಯ ನೂರಾಬಾದ್‌ನ ಗುಡ್ಡಗಾಡು ಪ್ರದೇಶದಲ್ಲಿ ಅರಮನೆಯಂಥ ಬಂಗಲೆ’ಯನ್ನು ಹೊಂದಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News