ಟ್ರಂಪ್ ತಂಡದಿಂದ ಭಾರತೀಯ ಅಮೆರಿಕನ್ನರ ಓಲೈಕೆಗೆ ವೀಡಿಯೊ ಬಿಡುಗಡೆ

Update: 2020-08-23 15:39 GMT

ವಾಶಿಂಗ್ಟನ್, ಆ. 23: 20 ಲಕ್ಷಕ್ಕೂ ಅಧಿಕ ಭಾರತೀಯ-ಅಮೆರಿಕನ್ ಮತದಾರರನ್ನು ಓಲೈಸಲು ಮುಂದಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಪ್ರಚಾರ ತಂಡವು, ಮೊದಲ ವೀಡಿಯೊ ಜಾಹೀರಾತೊಂದನ್ನು ಬಿಡುಗಡೆ ಮಾಡಿದೆ. ಈ ವೀಡಿಯೊದಲ್ಲಿ ಪ್ರಧಾನಿ ನರೇಂದ್ರ ಮೋದಿಯ ಭಾಷಣಗಳ ತುಣುಕುಗಳು ಮತ್ತು ಟ್ರಂಪ್ ಅಹ್ಮದಾಬಾದ್‌ನಲ್ಲಿ ಮಾಡಿದ ಐತಿಹಾಸಿಕ ಭಾಷಣದ ಭಾಗಗಳಿವೆ.

ಈ ವರ್ಷದ ಫೆಬ್ರವರಿಯಲ್ಲಿ ಭಾರತಕ್ಕೆ ನೀಡಿದ ಭೇಟಿಯ ವೇಳೆ, ಟ್ರಂಪ್ ಅಹ್ಮದಾಬಾದ್‌ನಲ್ಲಿ ಬೃಹತ್ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ್ದರು. ಟ್ರಂಪ್ ಪತ್ನಿ ಮೆಲಾನಿಯಾ, ಮಗಳು ಇವಾಂಕಾ ಮತ್ತು ಅಳಿಯ ಜ್ಯಾರೆಡ್ ಕಶ್ನರ್ ಈ ಸಂದರ್ಭದಲ್ಲಿ ಟ್ರಂಪ್ ಜೊತೆಗಿದ್ದರು.

‘‘ಅಮೆರಿಕವು ಭಾರತದೊಂದಿಗೆ ಅತ್ಯುತ್ತಮ ಸಂಬಂಧವನ್ನು ಹೊಂದಿದೆ ಹಾಗೂ ನಮ್ಮ ಪ್ರಚಾರ ತಂಡವು ಭಾರತೀಯ ಅಮೆರಿಕನ್ನರ ಅಮೋಘ ಬೆಂಬಲವನ್ನು ಹೊಂದಿದೆ!’’ ಎಂದು ಟ್ರಂಪ್ ವಿಕ್ಟರಿ ಫೈನಾನ್ಸ್ ಕಮಿಟಿಯ ರಾಷ್ಟ್ರೀಯ ಅಧ್ಯಕ್ಷ ಕಿಂಬರ್ಲಿ ಗಿಲ್‌ಫೋಯಲ್ ವೀಡಿಯೊ ಜಾಹೀರಾತನ್ನು ಬಿಡುಗಡೆ ಮಾಡಿದ ಟ್ವೀಟ್‌ನಲ್ಲಿ ಹೇಳಿದ್ದಾರೆ.

ಈ ವೀಡಿಯೊ ಜಾಹೀರಾತು ಕೂಡಲೇ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಜಾಹೀರಾತನ್ನು ಟ್ವಿಟರ್‌ನಲ್ಲಿ 66,000ಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಭಾರತೀಯ ಅಮೆರಿಕನ್ನರೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿರುವ ಹಾಗೂ ಟ್ರಂಪ್ ಪ್ರಚಾರ ತಂಡದ ನೇತೃತ್ವವನ್ನು ವಹಿಸಿರುವ ಅವರ ಮಗ ಡೊನಾಲ್ಡ್ ಟ್ರಂಪ್ ಜೂನಿಯರ್ ಈ ವೀಡಿಯೊವನ್ನು ರೀಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News