ಟ್ರಂಪ್ ‘ಕ್ರೂರಿ’, ‘ಸುಳ್ಳುಗಾರ’ ಎಂದ ಸಹೋದರಿ

Update: 2020-08-23 15:43 GMT

ವಾಶಿಂಗ್ಟನ್, ಆ. 23: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಅವರ ಅಕ್ಕ ಮರ್ಯಾನ್ ಟ್ರಂಪ್ ಬಾರಿ, ‘ಕ್ರೂರಿ ಹಾಗೂ ಸುಳ್ಳುಗಾರ’ ಎಂಬುದಾಗಿ ಬಣ್ಣಿಸಿದ್ದಾರೆ ಹಾಗೂ ಅವರು ನೈತಿಕತೆಯಿಲ್ಲದ ವ್ಯಕ್ತಿಯಾಗಿದ್ದು ಅವರನ್ನು ನಂಬುವಂತಿಲ್ಲ ಎಂದು ಹೇಳಿದ್ದಾರೆ.

ಮರ್ಯಾನ್‌ರ ಈ ಮಾತುಗಳನ್ನು ಅವರ ತಮ್ಮನ ಮಗಳು ಮೇರಿ ಎಲ್. ಟ್ರಂಪ್ ರಹಸ್ಯವಾಗಿ ಧ್ವನಿಮುದ್ರಿಸಿಕೊಂಡಿದ್ದು, ಶನಿವಾರ ಅವುಗಳನ್ನು ಬಹಿರಂಗಗೊಳಿಸಿದ್ದಾರೆ.

ಮೇರಿ ಟ್ರಂಪ್ ಕಳೆದ ತಿಂಗಳು ಅಧ್ಯಕ್ಷರನ್ನು ಕುರಿತ ಪುಸ್ತಕವೊಂದನ್ನು ಪ್ರಕಟಿಸಿದ್ದು, ಅದರಲ್ಲಿ ಟ್ರಂಪ್ ಬಗ್ಗೆ ಅವರ ಕುಟುಂಬ ಸದಸ್ಯರು ಹೊಂದಿರುವ ಋಣಾತ್ಮಕ ಧೋರಣೆಗಳ ಬಗ್ಗೆ ಬರೆದಿದ್ದಾರೆ. ಈ ಪುಸ್ತಕದ ಪ್ರಕಟನೆಯನ್ನು ತಡೆಯಲು ಡೊನಾಲ್ಡ್ ಟ್ರಂಪ್‌ರ ಕಳೆದ ವಾರ ನಿಧನರಾದ ತಮ್ಮ ರಾಬರ್ಟ್ ಟ್ರಂಪ್ ನ್ಯಾಯಾಲಯಕ್ಕೆ ಹೋಗಿದ್ದರು. ಆದರೆ, ಅವರು ತನ್ನ ಪ್ರಯತ್ನದಲ್ಲಿ ಯಶಸ್ವಿಯಾಗಲಿಲ್ಲ.

ಫೆಡರಲ್ ನ್ಯಾಯಾಧೀಶೆಯಾಗಿದ್ದ ಮರ್ಯಾನ್ ಟ್ರಂಪ್ ಬಾರಿ, ತನ್ನ ತಮ್ಮನ ವಲಸೆ ನೀತಿಯನ್ನು ಖಂಡಿಸಿದ್ದಾರೆ. ಅವರ ವಲಸೆ ನೀತಿಯಿಂದಾಗಿ ಹಲವು ಮಕ್ಕಳು ಗಡಿಯಲ್ಲಿ ತಮ್ಮ ಹೆತ್ತವರಿಂದ ಬೇರ್ಪಡಬೇಕಾಯಿತು ಹಾಗೂ ಬಂಧನ ಕೇಂದ್ರಗಳಲ್ಲಿ ವಾಸಿಸಬೇಕಾಯಿತು ಎಂದು ಅವರು ಹೇಳಿದ್ದಾರೆ.

‘‘ಟ್ರಂಪ್ ತನ್ನ ಬುಡವನ್ನು ಬಲಪಡಿಸಿಕೊಳ್ಳಲು ಮಾತ್ರ ಬಯಸುತ್ತಾರೆ. ಅವರು ಯಾವುದೇ ತತ್ವಗಳಿಲ್ಲದ ಮನುಷ್ಯ’’ ಎಂದು ಮರ್ಯಾನ್ ಹೇಳಿದ್ದಾರೆ. ‘‘ದೇವರೇ, ಅವರ ಅಸಂಬದ್ಧ ಟ್ವೀಟ್‌ಗಳೋ, ಸುಳ್ಳುಗಳೋ!’’ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News