ಜರ್ಮನಿ ಆಸ್ಪತ್ರೆಗೆ ರಶ್ಯ ಪ್ರತಿಪಕ್ಷ ನಾಯಕ ಕೊನೆಗೂ ಸ್ಥಳಾಂತರ

Update: 2020-08-23 15:48 GMT
Photo: twitter.com/navalny

ಬರ್ಲಿನ್ (ಜರ್ಮನಿ), ಆ. 23: ಒಂದು ಇಡೀ ದಿನ ಕಾಯಿಸಿದ ಬಳಿಕ, ವಿಷಪ್ರಾಶನಕ್ಕೊಳಗಾಗಿರುವರೆನ್ನಲಾದ ರಶ್ಯ ಪ್ರತಿಪಕ್ಷ ನಾಯಕ ಅಲೆಕ್ಸೀ ನವಾಲ್ನಿಯನ್ನು ಚಿಕಿತ್ಸೆಗಾಗಿ ಜರ್ಮನಿಗೆ ಕರೆದುಕೊಂಡು ಹೋಗಲು ರಶ್ಯದಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆ ಕೊನೆಗೂ ಅನುಮತಿ ನೀಡಿದೆ ಹಾಗೂ ಜರ್ಮನಿ ರಾಜಧಾನಿ ಬರ್ಲಿನ್‌ನ ಆಸ್ಪತ್ರೆಯೊಂದರಲ್ಲಿ ಅವರ ಸ್ಥಿತಿ ಈಗ ಸ್ಥಿರವಾಗಿದೆ ಎಂದು ಜರ್ಮನಿಯ ಸರಕಾರೇತರ ಸಂಸ್ಥೆ (ಎನ್‌ಜಿಒ) ‘ಸಿನೇಮಾ ಫಾರ್ ಪೀಸ್’ ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದೆ.

ಇದೇ ಸರಕಾರೇತರ ಸಂಸ್ಥೆಯು ರಶ್ಯ ಪ್ರತಿಪಕ್ಷ ನಾಯಕನನ್ನು ಜರ್ಮನಿಗೆ ಕರೆತರಲು ವಿಶೇಷ ವಿಮಾನ ಆ್ಯಂಬುಲೆನ್ಸನ್ನು ಕಳುಹಿಸಿಕೊಟ್ಟಿತ್ತು.

‘‘ನವಾಲ್ನಿಯ ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದೆ’’ ಎಂದು ಅವರನ್ನು ಹೊತ್ತ ವಿಮಾನ ಆ್ಯಂಬುಲೆನ್ಸ್ ಬರ್ಲಿನ್‌ನ ಟೆಗೆಲ್ ವಿಮಾನ ನಿಲ್ದಾಣದಲ್ಲಿ ಇಳಿದ ಬಳಿಕ ‘ಸಿನೇಮಾ ಫಾರ್ ಪೀಸ್’ನ ಮುಖ್ಯಸ್ಥ ಜಾಕ ಬಿಝಿಲ್ಝ್ ತಿಳಿಸಿದರು.

ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ರ ಕಟು ಟೀಕಾಕಾರರ ಪೈಕಿ ಒಬ್ಬರಾಗಿರುವ 44 ವರ್ಷದ ವಕೀಲ ಹಾಗೂ ಭ್ರಷ್ಟಾಚಾರ ವಿರೋಧಿ ಹೊರಾಟಗಾರ ನವಾಲ್ನಿ ಗುರುವಾರ ವಿಮಾನವೊಂದರಲ್ಲಿ ಸೈಬೀರಿಯದಿಂದ ರಾಜಧಾನಿ ಮಾಸ್ಕೋಗೆ ಪ್ರಯಾಣಿಸುತ್ತಿದ್ದಾಗ ಒಮ್ಮೆಲೆ ಅಸ್ವಸ್ಥರಾಗಿ ಪ್ರಜ್ಞಾಹೀನ ಸ್ಥಿತಿಗೆ ಜಾರಿದ್ದರು. ಬಳಿಕ ವಿಮಾನವು ಓಮ್‌ಸ್ಕ್ ಎಂಬ ನಗರದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು.

ನವಾಲ್ನಿ ವಿಮಾನ ನಿಲ್ದಾಣದಲ್ಲಿ ಸೇವಿಸಿದ ಚಹಾದಲ್ಲಿ ವಿಷ ಸೇರ್ಪಡೆಯಾಗಿರುವ ಸಾಧ್ಯತೆ ಇದೆ ಎಂದು ಅವರ ಸಹಾಯಕರು ಭಾವಿಸಿದ್ದಾರೆ. ಅದೇ ವೇಳೆ, ಅವರ ದೇಹದಲ್ಲಿ ಯಾವುದೇ ರೀತಿಯ ವಿಷ ಪದಾರ್ಥದ ಲೇಶವೂ ಪತ್ತೆಯಾಗಿಲ್ಲ ಎಂದು ರಶ್ಯದ ವೈದ್ಯರು ಹೇಳಿಕೊಂಡಿದ್ದಾರೆ.

ರಶ್ಯದ ಆಸ್ಪತ್ರೆಯಿಂದ ಬಿಡಿಸಿಕೊಳ್ಳಲು ದೊಡ್ಡ ಸಮರ!

ಅಲೆಕ್ಸೀ ನವಾಲ್ನಿಯನ್ನು ಓಮ್‌ಸ್ಕ್ ನಗರದ ಆಸ್ಪತ್ರೆಯಿಂದ ಬಿಡಿಸಿಕೊಳ್ಳುವುದು ಅವರ ಬೆಂಬಲಿಗರು ಮತ್ತು ಕುಟುಂಬ ಸದಸ್ಯರಿಗೆ ಬಹು ದೊಡ್ಡ ಸವಾಲೇ ಆಗಿತ್ತು. ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು, ಅವರನ್ನು ಬಿಡುಗಡೆ ಮಾಡಲು ನಿರಾಕರಿಸಿದ್ದರು. ಅವರ ಕುಟುಂಬ ಸದಸ್ಯರು ಮತ್ತು ಸಿಬ್ಬಂದಿ ಎಷ್ಟೇ ಮನವಿ ಮಾಡಿಕೊಂಡರೂ ವೈದ್ಯರು ತಮ್ಮ ನಿರ್ಧಾರ ಬದಲಿಸಿರಲಿಲ್ಲ.

ನವಾಲ್ನಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಅವರು ಕೃತಕ ಉಸಿರಾಟ ವ್ಯವಸ್ಥೆಯ ಮೂಲಕ ಉಸಿರಾಡುತ್ತಿದ್ದಾರೆ ಹಾಗೂ ಅವರ ಪರಿಸ್ಥಿತಿ ತೀರಾ ಅಸ್ಥಿರವಾಗಿದ್ದು ಅವರನ್ನು ಹೊರಗೆ ಕಳುಹಿಸಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದರು.

ಜರ್ಮನಿಯಿಂದ ಬಂದ ವಿಮಾನ ಆ್ಯಂಬುಲೆನ್ಸ್ ಶುಕ್ರವಾರ ಬೆಳಗ್ಗೆ ರಶ್ಯದ ಓಮ್‌ಸ್ಕ್ ನಗರದಲ್ಲಿ ಇಳಿದಿತ್ತು ಹಾಗೂ ಶುಕ್ರವಾರ ತಡರಾತ್ರಿಯ ಬಳಿಕ ಅದು ನವಾಲ್ನಿಯನ್ನು ಹೊತ್ತು ವಾಪಸ್ ಪ್ರಯಾಣ ಬೆಳೆಸಿತು. ಅವರಿಗೆ ಚಕಿತ್ಸೆ ನೀಡಲು ಜರ್ಮನಿ ಚಾನ್ಸಲರ್ ಆ್ಯಂಜೆಲಾ ಮರ್ಕೆಲ್ ಘೋಷಿಸಿದ ಬಳಿಕ, ವಿಮಾನ ಆ್ಯಂಬುಲೆನ್ಸನ್ನು ಕಳುಹಿಸಿಕೊಡಲಾಗಿತ್ತು.

ಜರ್ಮನಿಯಿಂದ ಬಂದ ವೈದ್ಯರು ನವಾಲ್ನಿಯನ್ನು ಪರೀಕ್ಷಿಸಿದ ಬಳಿಕ ಹಾಗೂ ಅವರ ಸಾಗಾಟದ ಹೊಣೆಯನ್ನು ‘ಸಿನೇಮಾ ಫಾರ್ ಪೀಸ್’ ಸಂಸ್ಥೆಯು ಹೊತ್ತ ಬಳಿಕ ಅಂತಿಮವಾಗಿ ಅವರನ್ನು ಕಳುಹಿಸಿಕೊಡಲು ರಶ್ಯ ವೈದ್ಯರು ಅನುಮತಿ ನೀಡಿದರು.

ಯುರೋಪಿಯನ್ ಮಾನವಹಕ್ಕು ನ್ಯಾಯಾಲಯಕ್ಕೆ ಬೆಂಬಲಿಗರ ಮನವಿ

ಅಲೆಕ್ಸೀ ನವಾಲ್ನಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲು ಓಮ್‌ಸ್ಕ್ ಆಸ್ಪತ್ರೆಯ ವೈದ್ಯರು ನಿರಾಕರಿಸುವುದು ಮುಂದುವರಿದಂತೆಯೇ, ಅವರ ಪತ್ನಿ ಯೂಲಿಯಾ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ಗೆ ನೇರವಾಗಿ ಮನವಿ ಮಾಡಿದರು. ಅದೇ ವೇಳೆ, ಈ ವಿಷಯದಲ್ಲಿ ರಶ್ಯ ಸರಕಾರದ ಜೊತೆ ವ್ಯವಹರಿಸುವಂತೆ ನವಾಲ್ನಿಯ ಬೆಂಬಲಿಗರು ಯುರೋಪಿಯನ್ ಮಾನವಹಕ್ಕು ನ್ಯಾಯಾಲಯಕ್ಕೆ ಮನವಿ ಮಾಡಿದರು.

ಅದರ ಬಳಿಕವಷ್ಟೇ, ಅಂದರೆ ಶುಕ್ರವಾರ ರಾತ್ರಿಯ ವೇಳೆಗೆ ನವಾಲ್ನಿಯನ್ನು ಆಸ್ಪತ್ರೆಯಿಂದ ಸಾಗಿಸಲು ಅವರು ಚಿಕಿತ್ಸೆ ಪಡೆಯುತ್ತಿದ್ದ ವೈದ್ಯರು ಅನುಮತಿ ನೀಡಿದರು.

ಬಳಿಕ, ವಿಮಾನ ಆ್ಯಂಬುಲೆನ್ಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ನವಾಲ್ನಿ ಪತ್ನಿ ಯೂಲಿಯಾ ಇನ್‌ಸ್ಟಾಗ್ರಾಂನಲ್ಲಿ ಸಂದೇಶವೊಂದನ್ನು ಹಾಕಿ, ‘ಹೋರಾಟ’ಕ್ಕಾಗಿ ಬೆಂಬಲಿಗರಿಗೆ ಧನ್ಯವಾದ ಸಲ್ಲಿಸಿದರು. ‘‘ನಿಮ್ಮ ಬೆಂಬಲವಿಲ್ಲದಿರುತ್ತಿದ್ದರೆ, ನಮಗೆ ಅವರನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ’’ ಎಂಬುದಾಗಿ ಅವರು ಬರೆದರು.

ವಿಷಪ್ರಾಶನಕ್ಕೆ ಒಳಗಾದವರ ಪಟ್ಟಿಗೆ ಇನ್ನೊಂದು ಸೇರ್ಪಡೆ

ವಿಷಪ್ರಾಶನದಿಂದಾಗಿ ಗಂಭೀರ ಅಸ್ವಸ್ಥತೆಗೆ ಒಳಗಾದ ಅಥವಾ ಮೃತಪಟ್ಟ ರಶ್ಯ ಸರಕಾರದ ಟೀಕಾಕಾರರ ಉದ್ದನೆಯ ಪಟ್ಟಿಯಲ್ಲಿ ಅಲೆಕ್ಸೀ ನವಾಲ್ನಿಯದು ಹೊಸ ಸೇರ್ಪಡೆ.

‘‘ನಂಬಿಕಸ್ತ ವೈದ್ಯರಿರುವ ಸ್ವತಂತ್ರ ಆಸ್ಪತ್ರೆಯೊಂದರಲ್ಲಿ ನವಾಲ್ನಿಗೆ ಚಿಕಿತ್ಸೆ ನೀಡಲು ನಾನು ಬಯಸಿದ್ದೇನೆ’’ ಎಂದು ಅವರ ಪತ್ನಿ ಯೂಲಿಯಾ ಪತ್ರಕರ್ತರೊಂದಿಗೆ ಮಾತನಾಡುತ್ತಾ ಹೇಳಿದರು.

‘‘ಅಲೆಕ್ಸೀಯ ಪ್ರಾಣ ಮತ್ತು ಆರೋಗ್ಯಕ್ಕಾಗಿನ ಹೋರಾಟ ಈಗಷ್ಟೇ ಆರಂಭವಾಗಿದೆ... ಕನಿಷ್ಠ ಈಗ ನಾವು ಮೊದಲ ಹೆಜ್ಜೆಯನ್ನಾದರೂ ಇಟ್ಟಿದ್ದೇವೆ’’ ಎಂದು ಅವರ ವಕ್ತಾರೆ ಯಾರ್ಮಿಶ್ ಟ್ವೀಟ್ ಮಾಡಿದ್ದಾರೆ.

ವಿಷ ಮರೆಮಾಚಿಸಲು ವೈದ್ಯರು ಸಮಯ ತೆಗೆದುಕೊಂಡರೇ?

ನವಾಲ್ನಿಯನ್ನು ಜರ್ಮನಿಗೆ ಕರೆದೊಯ್ಯಲು ಆರಂಭದಲ್ಲಿ ರಶ್ಯ ಅನುಮತಿ ನಿರಾಕರಿಸಿರುವುದು, ಅವರ ದೇಹದಲ್ಲಿರುವ ವಿಷ ಪದಾರ್ಥವನ್ನು ಮರೆಮಾಚಿಸಲು ಸಮಯ ತೆಗೆದುಕೊಳ್ಳುವುದಕ್ಕಾಗಿ ಎಂದು ಅವರ ವಕ್ತಾರೆ ಅವರ ವಕ್ತಾರೆ ಯಾರ್ಮಿಶ್ ಆರೋಪಿಸಿದ್ದಾರೆ. ಈ ಅವಧಿಯಲ್ಲಿ, ಅವರ ದೇಹದಲ್ಲಿನ ವಿಷ ಪದಾರ್ಥವನ್ನು ಪತ್ತೆಹಚ್ಚುವುದು ಅಸಾಧ್ಯವಾಗುವಂತೆ ವೈದ್ಯರು ಮಾಡಿದ್ದಾರೆ ಹಾಗೂ ಆ ಮೂಲಕ ಅವರ ಜೀವಕ್ಕೆ ಗಂಭೀರ ಬೆದರಿಕೆ ಒಡ್ಡಿದ್ದಾರೆ ಎಂದು ಅವರು ಹೇಳಿದರು.

‘ಉಗ್ರರ ಬಂಧನದಿಂದ ಒತ್ತೆಯಾಳು ಬಿಡುಗಡೆಯಾದಂತೆ ಅನಿಸಿತು’

ರಶ್ಯ ಪ್ರತಿಪಕ್ಷ ನಾಯಕ ಅಲೆಕ್ಸೀ ನವಾಲ್ನಿ ಚಿಕಿತ್ಸೆಗಾಗಿ ರಶ್ಯದ ಹೊರಗೆ ಹೋದ ಬಳಿಕ ಅವರ ಹೆಚ್ಚಿನ ಬೆಂಬಲಿಗರು ನಿರಾಳರಾಗಿದ್ದಾರೆ.

‘‘ಸುದೀರ್ಘ ಮಾತುಕತೆಯ ಬಳಿಕ, ಭಯೋತ್ಪಾದಕರು ಒತ್ತೆಯಾಳುವೊಬ್ಬರನ್ನು ಬಿಡುಗಡೆ ಮಾಡಿದಂತೆ ನನಗೆ ಅನಿಸಿತು’’ ಎಂದು ರಶ್ಯದ ಇನ್ನೋರ್ವ ಪ್ರತಿಪಕ್ಷ ನಾಯಕ ಇಲ್ಯಾ ಯಾಶಿನ್ ಹೇಳಿದ್ದಾರೆ.

‘‘ಈ ಪೋಲಾದ ಸಮಯವು ಅವರ ಜೀವಕ್ಕೆ ಎರವಾಗದು ಎಂದು ನಂಬಲು ನಾನು ಬಯಸುತ್ತೇನೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News