ಗಡಿ ಭದ್ರತಾ ಪಡೆ ಮೇಲ್ದರ್ಜೀಕರಣ: 436 ಡ್ರೋನ್, ಡ್ರೋನ್ ನಿಗ್ರಹ ವ್ಯವಸ್ಥೆ ಪಡೆಯಲಿರುವ ಬಿಎಸ್‌ಎಫ್

Update: 2020-08-23 16:59 GMT

ಹೊಸದಿಲ್ಲಿ, ಆ. 23: ಗಡಿ ಕಣ್ಗಾವಲಿಗೆ 436 ಸಣ್ಣ, ಅತಿಸೂಕ್ಷ್ಮ ಡ್ರೋನ್‌ಗಳಿಗೆ ಅನುಮತಿ ಹಾಗೂ ಪಂಜಾಬ್, ಜಮ್ಮುಕಾಶ್ಮೀರದಲ್ಲಿರುವ ಭಯೋತ್ಪಾದಕರಿಗೆ ಪೂರೈಸಲು ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯುವ ಯಾವುದೇ ಡ್ರೋನ್ ಅನ್ನು ಹೊಡೆದುರುಳಿಸಲು ಗಡಿಯಲ್ಲಿ ಡ್ರೋನ್ ನಿಗ್ರಹ ವ್ಯವಸ್ಥೆಯೊಂದಿಗೆ ಗಡಿ ಭದ್ರತಾ ಪಡೆಯ ತಾಂತ್ರಿಕ ಮೇಲ್ಜರ್ಜೀಕರಣ ಆರಂಭಗೊಂಡಿದೆ.

ಸಮಗ್ರ ಸಂಯೋಜಿತ ಗಡಿ ನಿರ್ವಹಣಾ (ಸಿಐವಿಎಂ) ಯೋಜನೆ ಅಡಿ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ಗಡಿಯಲ್ಲಿ ಗಡಿ ಭದ್ರತಾ ಪಡೆಯ 1923 ಗಡಿ ಠಾಣೆಗಳಲ್ಲಿ ಸೆನ್ಸಾರ್, ಸಿಸಿಟಿವಿ ಅಳವಡಿಕೆ ಹಾಗೂ ಗಡಿ ಮಾಹಿತಿ ಪಡೆಯಲು ಡ್ರೋನ್‌ಗಳ ಬಳಕೆ, ಗಡಿಯಾಚೆಯಿಂದ ಯಾವುದೇ ಶಸ್ತ್ರಾಸ್ತ್ರಗಳನ್ನು ಸಾಗಾಟ ಮಾಡುವ ಡ್ರೋನ್‌ಗಳನ್ನು ಹೊಡೆದುರುಳಿಸುವ ಡ್ರೋನ್ ನಿಗ್ರಹ ವ್ಯವಸ್ಥೆಯನ್ನು 1500ಕ್ಕೂ ಅಧಿಕ ಗಡಿ ಠಾಣೆಗಳು ಸೇರಿದಂತೆ ವಲಯ ಕೇಂದ್ರಗಳಲ್ಲಿ ವ್ಯವಸ್ಥೆಗೊಳಿಸಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಸಣ್ಣ ಹಾಗೂ ಮೈಕ್ರೋ ಡ್ರೋನ್‌ಗಳ ವೆಚ್ಚ ಸುಮಾರು 88 ಕೋಟಿ ರೂಪಾಯಿ ಆಗಲಿದೆ. ಪಾಕಿಸ್ತಾನದದೊಂದಿಗೆ ಪಂಜಾಬ್ ಹಂಚಿಕೊಂಡಿರುವ ಅತಿ ಸೂಕ್ಷ್ಮ ಗಡಿಯಲ್ಲಿ ನಡೆಯುತ್ತಿರುವ ಈ ದೇಶಿ ನಿರ್ಮಿತ ಡ್ರೋನ್ ನಿಗ್ರಹ ವ್ಯವಸ್ಥೆಗೆ ಭದ್ರತಾ ಸಂಸ್ಥೆಗೆ ಗಡಿ ಭದ್ರತಾ ಪಡೆ ನೆರವು ನೀಡುತ್ತಿದೆ ಎಂದು ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

 ಕಳೆದ ಒಂದು ವರ್ಷದಿಂದ ಪಾಕಿಸ್ತಾನ ಪಂಜಾಬ್‌ನ ಖಲಿಸ್ಥಾನಿ ಭಯೋತ್ಪಾದಕರು ಹಾಗೂ ಜಮ್ಮುಕಾಶ್ಮೀರದ ಭಯೋತ್ಪಾದಕರಿಗೆ ಚೀನಾದ ವಾಣಿಜ್ಯ ಡ್ರೋನ್ ಬಳಸಿ ಅಸಾಲ್ಟ್ ರೈಫಲ್ಸ್, ಪಿಸ್ಟೂಲ್, ಗ್ರೇನೆಡ್‌ಗಳನ್ನು ರವಾನೆ ಮಾಡುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News