12 ಹಾಗೂ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ಮಕ್ಕಳು ವಯಸ್ಕರಂತೆ ಮಾಸ್ಕ್ ಧರಿಸಬೇಕು: ವಿಶ್ವ ಆರೋಗ್ಯ ಸಂಸ್ಥೆ

Update: 2020-08-23 17:01 GMT

ಝುರಿಕ್, ಆ. 23: ಕೊರೋನ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಲು 12 ಹಾಗೂ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ಮಕ್ಕಳು ವಯಸ್ಕರಂತೆ ಮಾಸ್ಕ್ ಧರಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿದೆ.

 ಆದರೆ, 6 ಹಾಗೂ 11 ವರ್ಷಗಳ ನಡುವಿನ ಮಕ್ಕಳು ಅಪಾಯ ಆಧರಿಸಿದ ವಿಧಾನದಲ್ಲಿ ಮಾಸ್ಕ್ ಧರಿಸಬೇಕು ಎಂದು ಅದು ಹೇಳಿದೆ.

 ಕೊರೋನ ಸೋಂಕು ವ್ಯಾಪಕವಾಗಿ ಹರಡಿರುವ ಪ್ರದೇಶದಲ್ಲಿ 1 ಮೀಟರ್ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗದೇ ಇದ್ದಲ್ಲಿ, ನಿರ್ದಿಷ್ಟವಾಗಿ 12 ಹಾಗೂ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ಮಕ್ಕಳು ಕಡ್ಡಾಯವಾಗಿ ಮಾಸ್ಕ್ ಧರಿಸಲೇ ಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ) ಹಾಗೂ ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನೈಟೆಡ್ ನ್ಯಾಷನ್ಸ್ ಚಿಲ್ಡ್ರನ್ಸ್ ಫಂಡ್-ಯುನಿಸೆಫ್) ಡಬ್ಲುಎಚ್‌ಒನ ವೆಬ್‌ಸೈಟ್‌ನಲ್ಲಿ ಆಗಸ್ಟ್ 21ರ ಸಲಹೆಯಲ್ಲಿ ಹೇಳಿವೆ.

6 ಹಾಗೂ 11 ವರ್ಷಗಳ ನಡುವಿನ ಮಕ್ಕಳು ಮಾಸ್ಕ್ ಧರಿಸಬೇಕೇ ಎಂಬುದು ಒಂದು ಪ್ರದೇಶದಲ್ಲಿ ಕೊರೋನ ಸೋಂಕಿನ ಹರಡುವಿಕೆಯ ತೀವ್ರತೆ, ಮಾಸ್ಕ್ ಧರಿಸುವ ಮಗುವಿನ ಸಾಮರ್ಥ್ಯ, ಮಾಸ್ಕ್‌ನ ಲಭ್ಯತೆ ಹಾಗೂ ವಯಸ್ಕರ ಸಾಕಷ್ಟು ಮೇಲ್ವಿಚಾರಣೆ ಸೇರಿದಂತೆ ಹಲವು ಅಂಶಗಳನ್ನು ಒಳಗೊಂಡಿರುತ್ತದೆ ಎಂದು ಉಭಯ ಸಂಸ್ಥೆಗಳು ತಿಳಿಸಿವೆ.

 ಮಗುವಿನ ಸುರಕ್ಷೆ ಹಾಗೂ ಒಟ್ಟು ಹಿತಾಸಕ್ತಿಯ ಆಧಾರದಲ್ಲಿ 5 ಹಾಗೂ ಅದಕ್ಕಿಂತ ಕೆಳಗಿನ ವರ್ಷದ ಮಕ್ಕಳು ಮಾಸ್ಕ್ ಧರಿಸುವ ಅಗತ್ಯ ಇಲ್ಲ ಎಂದು ವಿಶ್ವಸಂಸ್ಥೆ ಹಾಗೂ ಯುನಿಸೆಫ್ ತಿಳಿಸಿದೆ.

ಕೊರೋನ ವೈರಸ್ ಹರಡುವಲ್ಲಿ ಕಿರಿಯ ಮಕ್ಕಳಿಗಿಂತ ಹಿರಿಯ ಮಕ್ಕಳು ಹೆಚ್ಚು ಸಕ್ರಿಯ ಪಾತ್ರ ವಹಿಸುತ್ತಾರೆ ಎಂದು ಅಧ್ಯಯನ ಹೇಳಿದೆ. ಕೊರೋನ ವೈರಸ್ ಹರಡುವಲ್ಲಿ ಮಕ್ಕಳು ಹಾಗೂ ಹದಿಹರೆಯದವರ ಪಾತ್ರವನ್ನು ಉತ್ತಮವಾಗಿ ಅರ್ಥ ಮಾಡಿಕೊಳ್ಳಲು ಇನ್ನಷ್ಟು ಅಂಕಿ-ಅಂಶಗಳು ಅಗತ್ಯ ಇದೆ ಎಂದು ವಿಶ್ವಸಂಸ್ಥೆ ಹಾಗೂ ಯುನಿಸೆಫ್ ಹೇಳಿದೆ.

ಕೊರೋನ ವೈರಸ್ ಹರಡುವುದನ್ನು ತಡೆಯಲು ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಜೂನ್ 5ರಂದು ಮೊದಲ ಬಾರಿಗೆ ಜನರಿಗೆ ಸಲಹೆ ನೀಡಿತ್ತು. ಆದರೆ, ಮಕ್ಕಳಿಗೆ ನಿರ್ದಿಷ್ಟ ಮಾರ್ಗಸೂಚಿಗಳನ್ನು ನೀಡಿರಲಿಲ್ಲ.

ಭಾರತದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲರೂ ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ. ಈ ತಿಂಗಳ ಆರಂಭದಲ್ಲಿ ಫ್ರಾನ್ಸ್ ಸಾರ್ವಜನಿಕ ಸ್ಥಳದಲ್ಲಿ 11 ವರ್ಷಕ್ಕಿಂತ ಮೇಲಿನ ಮಕ್ಕಳು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News