×
Ad

3ನೇ ಟೆಸ್ಟ್: ಪಾಕ್‌ಗೆ ಅಝರ್ ಆಸರೆ

Update: 2020-08-23 23:11 IST

ಸೌತಾಂಪ್ಟನ್, ಆ.23: ಇಂಗ್ಲೆಂಡ್ ವಿರುದ್ಧ ಮೂರನೇ ಟೆಸ್ಟ್‌ನಲ್ಲಿ ಆರಂಭಿಕ ಆಘಾತಕ್ಕೆ ಒಳಗಾಗಿರುವ ಪಾಕಿಸ್ತಾನ ತಂಡ ನಾಯಕ ಅಝರ್ ಅಲಿ(ಔಟಾಗದೆ 82 ರನ್)ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಚೇತರಿಸಿಕೊಂಡಿದೆ.

ಇಂಗ್ಲೆಂಡ್‌ನ ಮೊದಲ ಇನಿಂಗ್ಸ್ 8ಕ್ಕೆ 583ರನ್‌ಗೆ ಉತ್ತರಿಸಹೊರಟಿರುವ ಪಾಕಿಸ್ತಾನ ತಂಡ ಮೂರನೇ ದಿನದಾಟದ ಟೀ ವಿರಾಮದ ವೇಳೆಗೆ ಮೊದಲ ಇನಿಂಗ್ಸ್‌ನಲ್ಲಿ 60 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 158 ರನ್ ಗಳಿಸಿದೆ. ಪಾಕಿಸ್ತಾನ ತಂಡ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್(4-42)ಬೌಲಿಂಗ್ ದಾಳಿಗೆ ತತ್ತರಿಸಿ ಒಂದು ಹಂತದಲ್ಲಿ 30 ರನ್‌ಗೆ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ಜೊತೆಯಾದ ಅಲಿ ಹಾಗೂ ಫವಾದ್ ಆಲಂ(21) ಐದನೇ ವಿಕೆಟ್ ಜೊತೆಯಾಟದಲ್ಲಿ 45 ರನ್ ಸೇರಿಸಿದರು. ಆದರೆ ಈ ಜೋಡಿಯನ್ನು ಬೆಸ್ ಬೇರ್ಪಡಿಸಿದರು. ಆಲಂ ಔಟಾಗುವ ಮೊದಲು 74 ಎಸೆತಗಳಲ್ಲಿ 1 ಬೌಂಡರಿ ಸಹಿತ 21 ರನ್ ಗಳಿಸಿದರು.

ಪಾಕ್ ತಂಡ 75 ರನ್‌ಗೆ 5 ವಿಕೆಟ್ ಕಳೆದುಕೊಂಡಿದ್ದಾಗ ಜೊತೆಯಾದ ಅಲಿ ಹಾಗೂ ಮುಹಮ್ಮದ್ ರಿಝ್ವಾನ್(22 ರನ್,63 ಎಸೆತ, 2 ಬೌಂಡರಿ)ಆರನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 83 ರನ್ ಸೇರಿಸಿ ತಂಡವನ್ನು ಆಧರಿಸಿದರು. ಟೀ ವಿರಾಮದ ವೇಳೆಗೆ ಪಾಕ್ 5 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿದೆ. ಇಂಗ್ಲೆಂಡ್‌ನ ಮೊದಲ ಇನಿಂಗ್ಸ್ ಗಿಂತ ಇನ್ನೂ 425 ರನ್ ಹಿನ್ನಡೆಯಲ್ಲಿದೆ.

ಪಾಕ್ ಪರ ಪ್ರತಿರೋಧ ಒಡ್ಡುತ್ತಿರುವ ಅಲಿ 174 ಎಸೆತಗಳ ಇನಿಂಗ್ಸ್‌ನಲ್ಲಿ 12 ಬೌಂಡರಿಗಳನ್ನು ಬಾರಿಸಿದ್ದಾರೆ.

42 ರನ್‌ಗೆ ನಾಲ್ಕು ವಿಕೆಟ್‌ಗಳನ್ನು ಕಬಳಿಸಿರುವ ಆ್ಯಂಡರ್ಸನ್ ಇನ್ನು ಮೂರು ವಿಕೆಟ್‌ಗಳನ್ನು ಉರುಳಿಸಿದರೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 600 ವಿಕೆಟ್ ಕಿತ್ತ ಸಾಧನೆ ಮಾಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News