ನನ್ನ ಯಶಸ್ಸು ಕೇರಳಕ್ಕೆ ಸಮರ್ಪಣೆ: ವಿವಿ ಪರೀಕ್ಷೆಯಲ್ಲಿ ಟಾಪರ್ ಆದ ಬಿಹಾರದ ವಲಸೆ ಕಾರ್ಮಿಕನ ಪುತ್ರಿ
ಎರ್ನಾಕುಳಂ,ಆ.26: ಹತ್ತೊಂಭತ್ತು ವರ್ಷಗಳ ಹಿಂದೆ ಹೊಟ್ಟೆಪಾಡನ್ನು ಹುಡುಕಿಕೊಂಡು ಸಂಸಾರದೊಂದಿಗೆ ಬಿಹಾರದಿಂದ ಕೇರಳಕ್ಕೆ ಬಂದಿದ್ದ ಕಾರ್ಮಿಕನ ಪುತ್ರಿ ರಾಜ್ಯದ ಮಹಾತ್ಮಾ ಗಾಂಧಿ ವಿವಿಯ ಬಿಎ ಇತಿಹಾಸ ಮತ್ತು ಪುರಾತತ್ವ ಪರೀಕ್ಷೆಯಲ್ಲಿ ಶೇ.85ರಷ್ಟು ಅಂಕಗಳನ್ನು ಗಳಿಸುವ ಮೂಲಕ ಮೊದಲ ರ್ಯಾಂಕ್‌ನ್ನು ತನ್ನ ಮುಡಿಗೇರಿಸಿಕೊಂಡಿದ್ದಾಳೆ. ತನ್ನ ಯಶಸ್ಸನ್ನು ತನಗೆ ವಿದ್ಯಾದಾನ ಮಾಡಿದ ಕೇರಳಕ್ಕೆ ಅರ್ಪಿಸಿದ ಪಾಯಲ್ ಕುಮಾರಿ(21)ಗೆ ಪ್ರಶಂಸೆಗಳ ಮಹಾಪೂರವೇ ಬರುತ್ತಿದೆ.
ತನ್ನ ಸಾಧನೆಯ ಸಂಭ್ರಮದಲ್ಲಿ ಪಾಯಲ್ ತನ್ನ ಕುಟುಂಬವು ತನಗಾಗಿ ಪಟ್ಟಿರುವ ಕಷ್ಟಗಳನ್ನು ಮರೆತಿಲ್ಲ. ತನ್ನ ಯಶಸ್ಸಿನಲ್ಲಿ ತನ್ನ ಹೆತ್ತವರ ಮತ್ತು ತನ್ನನ್ನು ಬೆಂಬಲಿಸಿದ ಶಿಕ್ಷಕ ವೃಂದದ ಪಾಲೂ ಇದೆ ಎನ್ನುತ್ತಾಳೆ ಈಗ ಎರ್ನಾಕುಳಂ ಜಿಲ್ಲೆಯ ಕಳಮಶ್ಶೇರಿ ಬಳಿ ಬಾಡಿಗೆ ಮನೆಯಲ್ಲಿ ಕುಟುಂಬದೊಂದಿಗೆ ವಾಸವಿರುವ ಪಾಯಲ್.
ಆನ್‌ಲೈನ್ ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ಪಾಯಲ್ ತನ್ನ ಸಾಧನೆಯ ಕುರಿತು ಮನಬಿಚ್ಚಿ ಮಾತನಾಡಿದ್ದಾಳೆ.
ತನ್ನ ಕುಟುಂಬ ಕೇರಳಕ್ಕೆ ವಲಸೆ ಬಂದಾಗಿನ ಆರಂಭದ ದಿನಗಳ ಹೋರಾಟಗಳನ್ನು ಸ್ಮರಿಸಿಕೊಂಡ ಪಾಯಲ್, “ಅಂದು ನಮಗೆ ಒಂದೇ ಒಂದು ಶಬ್ದ ಮಲಯಾಳಂ ಗೊತ್ತಿರಲಿಲ್ಲ,ಜೊತೆಗೆ ಇಲ್ಲಿ ಯಾರದ್ದೂ ಪರಿಚಯವಿರಲಿಲ್ಲ, ಎಲ್ಲಿಗೆ ಹೋಗಬೇಕು ಎನ್ನುವುದೂ ಗೊತ್ತಿರಲಿಲ್ಲ. ಮೊದಮೊದಲು ತೊಂದರೆಗಳು ಎದುರಾಗಿದ್ದವಾದರೂ ಅವು ನಾವು ನಿರ್ವಹಿಸಲಾಗದಷ್ಟು ಕಠಿಣವಿರಲಿಲ್ಲ. ನಮ್ಮ ಬಗ್ಗೆ ಪ್ರತಿಯೊಬ್ಬರೂ ಕರುಣೆ ಹೊಂದಿದ್ದರು ಮತ್ತು ನಮಗೆ ಯಾವುದೇ ನೆರವು ನೀಡಲು ಸಿದ್ಧರಿದ್ದರು. ನಮ್ಮ ಬಳಿ ಹಣವಿದೆಯೇ ಇಲ್ಲವೇ, ನಮಗೆ ಮಲಯಾಳಂ ಭಾಷೇ ಗೊತ್ತಿದೆಯೇ ಇಲ್ಲವೇ ಎನ್ನುದ್ಯಾವುದೂ ಅವರಿಗೆ ಮುಖ್ಯವಾಗಿರಲಿಲ್ಲ. ನಮ್ಮನ್ನು ತಮ್ಮ ಸಮಾನರಾಗಿಯೇ ಅವರು ಪರಿಗಣಿಸಿದ್ದರು. ಕೇರಳ ನನಗೆ ತುಂಬ ಆಪ್ತವಾಗಿರುವುದು ಇದೇ ಕಾರಣಕ್ಕೆ” ಎಂದು ಹೇಳಿದಳು.
ಪಾಯಲ್ ಮತ್ತು ಆಕೆಯ ಒಡಹುಟ್ಟಿದವರು ಈಗ ಮಳಯಾಳಂ ಭಾಷೆಯಲ್ಲಿ ಅತ್ಯಂತ ಸ್ಫುಟವಾಗಿ ಮಾತನಾಡುತ್ತಾರೆ,ಆದರೆ ಮನೆಯಲ್ಲಿ ಮಾತೃಭಾಷೆ ಹಿಂದಿಗೇ ಆದ್ಯತೆ ನೀಡುತ್ತಾರೆ.
ಕುಮಾರ್ ಕುಟುಂಬ ಬಡತನದಲ್ಲಿಯೇ ಜೀವನ ಸಾಗಿಸಿತ್ತು. ಕಾಲೇಜಿನ ವಾರ್ಷಿಕ ಶುಲ್ಕ 3,000 ರೂ.ಗಳನ್ನೂ ಕಟ್ಟುವುದು ಕಷ್ಟವಾಗಿದ್ದ ದಿನಗಳನ್ನೂ ಪಾಯಲ್ ಕಂಡಿದ್ದಾಳೆ. ಒಂದು ಹಂತದಲ್ಲಿ ಆಕೆ ತನ್ನ ಒಡಹುಟ್ಟಿದವರಿಗಾದರೂ ಒಳ್ಳೆಯ ಭವಿಷ್ಯ ದೊರೆಯಲಿ ಎಂದು ವಿದ್ಯಾಭ್ಯಾಸವನ್ನು ತೊರೆಯುವ ಮನಸ್ಸನ್ನೂ ಮಾಡಿದ್ದಳು. ಆದರೆ ತನ್ನ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಲೇಬೇಕೆಂದು ಹಠಕ್ಕೆ ಬಿದ್ದಿದ್ದ ಕುಮಾರ್ ಹಲವಾರು ಕೆಲಸಗಳನ್ನು ಮಾಡಿ ಕುಟುಂಬದ ತುತ್ತಿನ ಚೀಲಗಳನ್ನು ತುಬಿಸುವ ಜೊತೆಗೆ ಮಕ್ಕಳ ವಿದ್ಯಾಭಾಸದ ಖರ್ಚನ್ನೂ ನಿಭಾಯಿಸುತ್ತಿದ್ದ. ಕಷ್ಟಗಳು ಒಂದರ ಮೇಲೊಂದರಂತೆ ಬಂದಾಗಲೂ ಆತ, ಇದನ್ನೆಲ್ಲ ಮನಸ್ಸಿಗೆ ಹಚ್ಚಿಕೊಳ್ಳಬೇಡ, ಕೇವಲ ನಿನ್ನ ವ್ಯಾಸಂಗದ ಬಗ್ಗೆ ಮಾತ್ರ ಗಮನ ಹರಿಸು ಎಂದು ಪಾಯಲ್‌ಗೆ ಉತ್ತೇಜಿಸುತ್ತಿದ್ದರು.
‘ನನ್ನ ಹೆತ್ತವರಿಗೆ ಚೆನ್ನಾಗಿ ಓದಲು ಸಾಧ್ಯವಾಗಿರಲಿಲ್ಲ. ಆದರೆ ಶಿಕ್ಷಣದ ಮಹತ್ವ ಅವರಿಗೆ ಚೆನ್ನಾಗಿ ತಿಳಿದಿತ್ತು. ನಮಗೆ ಅತ್ಯುತ್ತಮ ಶಿಕ್ಷಣವನ್ನು ಕೊಡಿಸಲು ಅವರು ಬಯಸಿದ್ದರು. ಇದಕ್ಕಾಗಿ ಅವರು ನಿಜಕ್ಕೂ ತುಂಬ ಕಷ್ಟಪಟ್ಟಿದ್ದಾರೆ. ಅವರ ಹೋರಾಟ ನನಗೆ ನೋವನ್ನುಂಟು ಮಾಡುತ್ತಿತ್ತು. ಆದರೆ ಅವರು ನಾನು ಓದಿನತ್ತ ಗಮನ ಹರಿಸುವಂತೆ ನೋಡಿಕೊಂಡಿದ್ದರು ’ಎಂದು ಪಾಯಲ್ ಹೇಳಿದಳು.
ಪಾಯಲ್ ಮತ್ತು ಆಕೆಯ ಹೆತ್ತವರ ಶ್ರಮ ವ್ಯರ್ಥವಾಗಿರಲಿಲ್ಲ. 10ನೇ ತರಗತಿಯಲ್ಲಿ ಶೇ.83 ಅಂಕಗಳನ್ನು ಗಳಿಸಿದ್ದ ಪಾಯಲ್ 12ನೇ ತರಗತಿಯಲ್ಲಿ ಶೇ.95 ಅಂಕಗಳನ್ನು ಗಳಿಸಿದ್ದಳು.
ಆದರೆ ಕೆಲವು ಕಷ್ಟಗಳು ನಿಜಕ್ಕೂ ಅಷ್ಟೊಂದು ಸುಲಭದಲ್ಲಿ ಬಗೆಹರಿಯುವಂಥದ್ದಾಗಿರಲಿಲ್ಲ. ಹಲವಾರು ಬಾರಿ ಕಾಲೇಜಿನ ಶುಲ್ಕಗಳನ್ನು ಕಟ್ಟಲು ತುಂಬ ವಿಳಂಬವಾಗುತ್ತಿತ್ತು. ಪಾಯಲ್‌ಳ ಸಾಮರ್ಥ್ಯ ಗೊತ್ತಿದ್ದ ಕಾಲೇಜಿನ ಅಧಿಕಾರಿಗಳಿಗೆ ಮತ್ತು ಶಿಕ್ಷಕರಿಗೆ ಇದು ಕಳವಳವನ್ನುಂಟು ಮಾಡಿತ್ತು. ಅವಳ ಸಂಕಷ್ಟ ಗೊತ್ತಾದ ಬಳಿಕ ಆಕೆಗೆ ನೆರವಾಗಲು ಅವರು ನಿರ್ಧರಿಸಿದ್ದರು.
“ನಾವು ಬಿಹಾರದಲ್ಲಿಯೇ ಇದ್ದಿದ್ದರೆ ನಮ್ಮ ಪಾಡು ಏನಾಗುತ್ತಿತ್ತೋ ಗೊತ್ತಿಲ್ಲ. ಆದರೆ ಕೇರಳಕ್ಕೆ ವಲಸೆ ಬಂದಿದ್ದು ನಮ್ಮ ಬದುಕನ್ನೇ ಬದಲಿಸಿದೆ. ಇಲ್ಲಿಯ ಮೂಲಸೌಕರ್ಯ ಮಾತ್ರವಲ್ಲ,ಇಲ್ಲಿಯ ಸಂಸ್ಕೃತಿಯೂ ಅಷ್ಟೇ ಚೆನ್ನಾಗಿದೆ. ಇಲ್ಲಿ ಹೆಣ್ಣುಮಕ್ಕಳಿಗೆ ಹೆಚ್ಚಿನ ಸ್ವಾತಂತ್ರ್ಯವಿದೆ. ಓದಲು,ಉದ್ಯೋಗ ಮಾಡಲು,ಚೆನ್ನಾಗಿ ಬದುಕಲು ಅವರಿಗೆ ಪ್ರೋತ್ಸಾಹಿಸಲಾಗುತ್ತಿದೆ. ಕತ್ತಲೆಯಾದ ಬಳಿಕವೂ ನಾನು ಇಲ್ಲಿನ ರಸ್ತೆಗಳಲ್ಲಿ ತಿರುಗಾಡಬಲ್ಲೆ ಮತ್ತು ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ನನ್ನ ಹೆತ್ತವರು ಕಳವಳ ಪಡುವ ಅಗತ್ಯವೇ ಇಲ್ಲ” ಎಂದು ಪಾಯಲ್ ಕೇರಳವನ್ನು ಕೊಂಡಾಡಿದಳು.
ತಾನು ಬಿಎ ತರಗತಿಯಲ್ಲಿ ಪುರಾತತ್ವ ಶಾಸ್ತ್ರ ವಿಷಯವನ್ನು ಆಯ್ದುಕೊಂಡಿದ್ದರ ಕುರಿತು ಪಾಯಲ್, “ನನಗೆ ಈ ವಿಷಯದಲ್ಲಿ ತುಂಬ ಆಸಕ್ತಿಯಿದೆ. ಹೆಚ್ಚಿನ ವಿದ್ಯಾರ್ಥಿಗಳು ಈ ಕ್ಷೇತ್ರವನ್ನು ಏಕೆ ಇಷ್ಟಪಡುತ್ತಿಲ್ಲ ಎನ್ನುವುದು ನನಗೆ ಗೊತ್ತಿಲ್ಲ. ಇದು ಮೆಡಿಕಲ್ ಅಥವಾ ಇಂಜಿನಿಯರಿಂಗ್‌ನಷ್ಟೇ ಮೌಲಿಕ ಕ್ಷೇತ್ರವಾಗಿದೆ,ವಿದೇಶಗಳಲ್ಲೂ ಉದ್ಯೋಗಾವಕಾಶಗಳಿವೆ” ಎಂದು ಹೇಳಿದಳು.
ಪಾಯಲ್ ತನ್ನ ಶಿಕ್ಷಣವನ್ನು ಮುಂದುವರಿಸಲು ನಿರ್ಧರಿಸಿದ್ದಾಳೆ. ದಿಲ್ಲಿಯ ಜೆಎನ್‌ಯುದಲ್ಲಿ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರದಲ್ಲಿ ಸ್ನಾತಕೋತ್ತರ ಕೋರ್ಸ್‌ಗಾಗಿ ಈಗಾಗಲೇ ಅರ್ಜಿಯನ್ನು ಸಲ್ಲಿಸಿದ್ದಾಳೆ. ಜೊತೆಗೆ ಲೋಕಸೇವಾ ಆಯೋಗದ ನಾಗರಿಕ ಸೇವೆಗಳ ಪರೀಕ್ಷೆಗೆ ಬರೆಯುವ ಕನಸೂ ಅವಳಲ್ಲಿದೆ.
ಕೃಪೆ: onmanorama.com