ಕೊರೋನ ವೈರಸ್ ಹರಡುವುದನ್ನು ತಡೆಯುವಲ್ಲಿ ಎನ್95 ಮಾಸ್ಕ್ ಹೆಚ್ಚು ಪರಿಣಾಮಕಾರಿ: ಭಾರತೀಯ ವಿಜ್ಞಾನಿಗಳು
ಹೊಸದಿಲ್ಲಿ, ಆ. 26: ಕೊರೋನ ವೈರಸ್ ಹರಡುವುದನ್ನು ಕಡಿಮೆ ಮಾಡುವಲ್ಲಿ ಎನ್95 ಮಾಸ್ಕ್ ಹೆಚ್ಚು ಪರಿಣಾಮಕಾರಿಯಾಗಬಹುದು ಎಂದು ಇಸ್ರೋದ ವಿಜ್ಞಾನಿ ಸಹಿತ ಸಂಶೋಧಕರ ಅಧ್ಯಯನ ತಿಳಿಸಿದೆ.
ಮಾಸ್ಕ್ ಹಾಕದೇ ಇರುವುದಕ್ಕಿಂತ, ಯಾವುದಾದರೂ ಮಾಸ್ಕ್ ಹಾಕುವುದು ಉತ್ತಮ ಎಂದು ಅದು ಹೇಳಿದೆ. ಕೆಮ್ಮು ಹಾಗೂ ಸೀನುವ ಸಂದರ್ಭ ಹೊರಬರುವ ನೀರ ಹನಿಗಳು ಕೊರೋನದಂತಹ ಸೋಂಕು ರೋಗಗಳು ವರ್ಗಾವಣೆಯಾಗುವ ಪ್ರಮುಖ ಮಾರ್ಗ ಎಂದು ಸಂಶೋಧಕರು ತಿಳಿಸಿದ್ದಾರೆ. ಇಸ್ರೋದ ಪದ್ಮನಾಭ ಪ್ರಸನ್ನ ಸಿಂಹ ಹಾಗೂ ಕರ್ನಾಟಕದ ಶ್ರೀ ಜಯದೇವ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯೋವಾಸ್ಕುಲರ್ ಸಯನ್ಸ್‌ಸ್ ಆ್ಯಂಡ್ ರಿಸರ್ಚ್‌ನ ಪ್ರಸನ್ನ ಸಿಂಹ ಮೋಹನ್ ರಾವ್ ವಿವಿಧ ಮಾಸ್ಕ್‌ಗಳನ್ನು ಹಾಕಿದ ಸಂದರ್ಭ ಕೆಮ್ಮಿನ ಮೂಲಕ ಹೊರಬರುವ ನೀರ ಹನಿಗಳು ಹರಿಯುವಿಕೆಯನ್ನು ಅಧ್ಯಯನ ನಡೆಸಿದ್ದಾರೆ.
‘ಫಿಸಿಕ್ಸ್ ಆಫ್ ಫ್ಲೂಯಿಡ್ಸ್’ ಪತ್ರಿಕೆಯಲ್ಲಿ ಪ್ರಕಟವಾದ ಈ ಅಧ್ಯಯನದಲ್ಲಿ ಕೆಮ್ಮಿನ ಮೂಲಕ ಕೊರೋನ ವೈರಸ್ ಸಮತಲವಾಗಿ ಹರಡುವುದನ್ನು ಕಡಿಮೆ ಮಾಡುವಲ್ಲಿ ಎನ್95 ಮಾಸ್ಕ್‌ಗಳು ಪರಿಣಾಮಕಾರಿಯಾಗಿವೆ ಎಂದು ಹೇಳಿದೆ. ಇದಕ್ಕೆ ಬದಲಾಗಿ ಮಾಸ್ಕ್ ಹಾಕದೇ ಇದ್ದಾಗ ಕೆಮ್ಮಿನಿಂದ ಕೊರೋನ ವೈರಸ್ ಮೂರು ಮೀಟರ್ ವರೆಗೆ ಹರಡಬಹುದು. ಆದರೆ, ಬಳಸಿ ಬಿಸಾಡಬಹುದಾದ ಸಾಮಾನ್ಯ ಮಾಸ್ಕ್ ಬಾಕಿದರೆ, ಇದರ ಹರಡುವಿಕೆಯನ್ನು 0.5 ಮೀಟರ್‌ಗೆ ಇಳಿಕೆ ಮಾಡಬಹುದು ಎಂದು ಅಧ್ಯಯನ ತಿಳಿಸಿದೆ.