ಭಾರತದ ಜಿಡಿಪಿ ಬೆಳವಣಿಗೆಯಾಗದಿದ್ದರೆ ದಶಕದ ಕಾಲ ಆದಾಯ ನಿಶ್ಚಲತೆ, ಜೀವನಮಟ್ಟ ಕುಸಿತದ ಅಪಾಯ

Update: 2020-08-26 15:44 GMT

ಮುಂಬೈ,ಆ.27: ಕೋವಿಡ್-19 ಬಳಿಕ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಭಾರತದ ಜಿಡಿಪಿಯು ವಾರ್ಷಿಕ ಶೇ.8-8.5ರಷ್ಟು ಬೆಳವಣಿಗೆಯಾಗುವ ಅಗತ್ಯವಿದೆ ಮತ್ತು ಇದಕ್ಕಾಗಿ ತುರ್ತು ಕ್ರಮಗಳನ್ನು ಕೈಗೊಳ್ಳದಿದ್ದರೆ ದಶಕದ ಕಾಲ ಆದಾಯ ನಿಶ್ಚಲಗೊಳ್ಳುವ ಮತ್ತು ಜೀವನಮಟ್ಟ ಕುಸಿಯುವ ಅಪಾಯವನ್ನು ದೇಶವು ಎದುರಿಸಬೇಕಾಗುತ್ತದೆ ಎಂದು ಮೆಕಿನ್ಸೆ ಗ್ಲೋಬಲ್ ಇನ್‌ಸ್ಟಿಟ್ಯೂಟ್ (ಎಂಜಿಐ) ತನ್ನ ವರದಿಯಲ್ಲಿ ಎಚ್ಚರಿಕೆಯನ್ನು ನೀಡಿದೆ.

ಉತ್ಪಾದಕತೆಯನ್ನು ಹೆಚ್ಚಿಸಲು ಮತ್ತು ಉದ್ಯೋಗಗಳನ್ನು ಸೃಷ್ಟಿಸಲು ದೇಶವು ಮುಂದಿನ 12-18 ತಿಂಗಳುಗಳಲ್ಲಿ ಹಲವಾರು ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ ಎಂದು ಅದು ಹೇಳಿದೆ.

ಹೆಚ್ಚುತ್ತಿರುವ ನಗರೀಕರಣ ಮತ್ತು ಜನಸಂಖ್ಯಾ ಪ್ರವೃತ್ತಿಗಳನ್ನು ಪರಿಗಣಿಸಿದರೆ 2030ರ ವೇಳೆಗೆ 90 ಮಿಲಿಯನ್ ಹೆಚ್ಚುವರಿ ಕಾರ್ಮಿಕರು ಕೃಷಿಯೇತರ ಉದ್ಯೋಗಗಳ ಅನ್ವೇಷಣೆಯಲ್ಲಿರುತ್ತಾರೆ ಹಾಗೂ 2013 ಮತ್ತು 2018ರ ನಡುವಿನ ಅವಧಿಯಲ್ಲಿ ನಾಲ್ಕು ಮಿಲಿಯನ್ ಲಾಭದಾಯಕ ಕೃಷಿಯೇತರ ಉದ್ಯೋಗಗಳನ್ನು ಸೃಷ್ಟಿಸಿರುವ ಭಾರತವು ಆ ವೇಳೆಗೆ ಈ ಸಂಖ್ಯೆಯನ್ನು ತ್ರಿಗುಣಗೊಳಿಸಿ 12 ಮಿಲಿಯನ್ ಗುರಿಯನ್ನು ಸಾಧಿಸಬೇಕಾಗುತ್ತದೆ ಎಂದಿರುವ ವರದಿಯು, 2020-21ನೇ ಹಣಕಾಸು ವರ್ಷದಲ್ಲಿ ಕೆಲವು ಅಂದಾಜುಗಳಂತೆ ಶೇ.5ಕ್ಕೂ ಅಧಿಕ ಕುಸಿಯಲು ಸಜ್ಜಾಗಿರುವ ಜಿಡಿಪಿಯು ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಮುಂದಿನ ದಶಕದಲ್ಲಿ ವಾರ್ಷಿಕ ಶೇ.8-8.5 ದರದಲ್ಲಿ ಬೆಳೆಯುವ ಅಗತ್ಯವಿದೆ. ಇದನ್ನು ಸಾಧಿಸದಿದ್ದರೆ ತೊಂದರೆಗಳು ಎದುರಾಗಲಿವೆ ಎಂದು ಎಚ್ಚರಿಕೆಯನ್ನು ನೀಡಿದೆ.

ಸುಧಾರಣೆಗಳ ಕುರಿತಂತೆ ಎಂಜಿಐ ತಯಾರಿಕೆ, ರಿಯಲ್ ಎಸ್ಟೇಟ್, ಕೃಷಿ, ಆರೋಗ್ಯ ರಕ್ಷಣೆ ಮತ್ತು ಚಿಲ್ಲರೆ ವ್ಯಾಪಾರ ಕ್ಷೇತ್ರಗಳತ್ತ ಹೆಚ್ಚಿನ ಗಮನ, ಬೆಲೆಗಳನ್ನು ಶೇ.25ರಷ್ಟು ತಗ್ಗಿಸಲು ಹೆಚ್ಚು ಜಮೀನು ಲಭ್ಯವಾಗಿಸುವಿಕೆ,ಹೊಂದಿಸಬಹುದಾದ ಕಾರ್ಮಿಕ ಮಾರುಕಟ್ಟೆಗಳ ಸೃಷ್ಟಿ, ಗ್ರಾಹಕರಿಗೆ ಹೊರೆಯನ್ನು ತಗ್ಗಿಸಲು ವಿದ್ಯುತ್ ದರಗಳನ್ನು ಶೇ.20ಕ್ಕೂ ಅಧಿಕ ತಗ್ಗಿಸಲು ದಕ್ಷ ವಿದ್ಯುತ್ ವಿತರಣೆಗೆ ಕ್ರಮ ಮತ್ತು 30 ಉನ್ನತ ಸರಕಾರಿ ಉದ್ಯಮಗಳ ಖಾಸಗೀಕರಣವನ್ನು ಪ್ರತಿಪಾದಿಸಿದೆ.

 ಹಣಕಾಸು ಕ್ಷೇತ್ರ ಕುರಿತು ವರದಿಯು ಸುಧಾರಣೆಗಳು ಮತ್ತು ವಿತ್ತೀಯ ಮೂಲಗಳನ್ನು ಕ್ರಮಬದ್ಧಗೊಳಿಸುವುದು 2.4 ಲಕ್ಷ ಕೋಟಿ ಅಮೆರಿಕನ್ ಡಾಲರ್‌ಗಳ ಹೂಡಿಕೆಯನ್ನು ತರಬಲ್ಲದು, ಇದೇ ವೇಳೆ ಬಂಡವಾಳ ವೆಚ್ಚವನ್ನು ಸುಮಾರು ಶೇ.3.5ರಷ್ಟು ತಗ್ಗಿಸುವ ಮೂಲಕ ಉದ್ಯಮಗಳಿಗೆ ಉತ್ತೇಜನ ನೀಡಬಹುದು ಎಂದಿದೆ. ನಿರುತ್ಪಾದಕ ಆಸ್ತಿಗಳನ್ನು ನಿರ್ವಹಿಸಲು ‘ಬ್ಯಾಡ್ ಬ್ಯಾಂಕ್’ ಸೃಷ್ಟಿಗೆ ಅದು ಒತ್ತು ನೀಡಿದೆ.

ಶೇ.60ರಷ್ಟು ಸುಧಾರಣೆಗಳನ್ನು ರಾಜ್ಯಗಳು ಮತ್ತು ಉಳಿದ ಶೇ.40ರಷ್ಟು ಸುಧಾರಣೆಗಳನ್ನು ಕೇಂದ್ರ ಕೈಗೊಳ್ಳಬೇಕಾಗುತ್ತದೆ ಎಂದಿರುವ ವರದಿಯು,ತಯಾರಿಕೆ ಮತ್ತು ನಿರ್ಮಾಣ ಕ್ಷೇತ್ರಗಳು ಆರ್ಥಿಕ ಪ್ರಗತಿ ಹಾಗೂ ಹೆಚ್ಚಿನ ಉದ್ಯೋಗಗಳಿಗೆ ಹೆಚ್ಚು ಅವಕಾಶಗಳನ್ನು ಒದಗಿಸುತ್ತವೆ ಎಂದು ಬೆಟ್ಟು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News