ಇಂಗ್ಲೆಂಡ್-ಪಾಕಿಸ್ತಾನ 3ನೇ ಟೆಸ್ಟ್ ನೀರಸ ಡ್ರಾ
ಸೌತಾಂಪ್ಟನ್, ಆ.26: ಮ್ಯಾಂಚೆಸ್ಟರ್‌ನಲ್ಲಿ ಇಂಗ್ಲೆಂಡ್ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಮೂರನೇ ಟೆಸ್ಟ್ ಪಂದ್ಯ ಕೆಟ್ಟ ಹವಾಮಾನದ ಕಾರಣದಿಂದಾಗಿ ಡ್ರಾದಲ್ಲಿ ಕೊನೆಗೊಂಡಿದೆ. ಮೊದಲ ಟೆಸ್ಟ್‌ನಲ್ಲಿ 3 ವಿಕೆಟ್‌ಗಳ ಅಂತರದಲ್ಲಿ ಜಯ ಗಳಿಸಿದ್ದ ಇಂಗ್ಲೆಂಡ್ 3 ಪಂದ್ಯಗಳ ಸರಣಿಯನ್ನು 1-0 ಅಂತರದಲ್ಲಿ ವಶಪಡಿಸಿಕೊಂಡಿದೆ.
3 ಟೆಸ್ಟ್‌ಗಳ ಸರಣಿಯಲ್ಲಿ ಸೌತಾಂಪ್ಟನ್‌ನಲ್ಲಿ ನಡೆದ ಕೊನೆಯ ಎರಡು ಟೆಸ್ಟ್ ಪಂದ್ಯಗಳು ಕೆಟ್ಟ ಹವಾಮಾನದಿಂದಾಗಿ ಡ್ರಾನಲ್ಲಿ ಕೊನೆಗೊಂಡಿವೆೆ.ಇಂಗ್ಲೆಂಡ್‌ನ ವೇಗಿ ಜೇಮ್ಸ್ ಆ್ಯಂಡರ್ಸನ್ 600 ಟೆಸ್ಟ್ ವಿಕೆಟ್ ಪಡೆದ ಮೊದಲ ವೇಗದ ಬೌಲರ್ ಎನಿಸಿಕೊಂಡರು.
ಮಂಗಳವಾರ ಪಾಕ್ ತಂಡದ ನಾಯಕ ಅಝರ್ ಅಲಿ(31ರನ್) ವಿಕೆಟ್ ಉಡಾಯಿಸುವ ಮೂಲಕ ಆ್ಯಂಡರ್ಸನ್ 600ನೇ ವಿಕೆಟ್ ಪೂರೈಸಿದ್ದರು. ಅಂತಿಮ ಪಂದ್ಯ ಮಳೆಯಿಂದಾಗಿ ತಡವಾಗಿ ಆರಂಭಗೊಂಡಿತ್ತು. ಮೊದಲ ಇನಿಂಗ್ಸ್‌ನಲ್ಲಿ 8 ವಿಕೆಟ್ ನಷ್ಟದಲ್ಲಿ 583 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿದ್ದ ಇಂಗ್ಲೆಂಡ್ ತಂಡವು ಪಾಕಿಸ್ತಾನವನ್ನು ಪ್ರಥಮ ಇನಿಂಗ್ಸ್‌ನಲ್ಲಿ 273ಕ್ಕೆ ನಿಯಂತ್ರಿಸಿ 310 ರನ್‌ಗಳ ಭಾರೀ ಮುನ್ನಡೆ ಸಾಧಿಸಿತ್ತು. ಫಾಲೋ ಆನ್ ಎದುರಿಸಿದ ಪಾಕಿಸ್ತಾನ ತನ್ನ 2ನೇ ಇನಿಂಗ್ಸ್‌ನಲ್ಲಿ 4 ವಿಕೆಟ್‌ಗೆ 187 ರನ್ ಗಳಿಸಿತ್ತು. ಅಂತಿಮ ದಿನದಂದು 27.1 ಓವರ್‌ಗಳ ಬ್ಯಾಟಿಂಗ್ ಮಾತ್ರ ಸಾಧ್ಯವಾಯಿತು. ಆ್ಯಂಡರ್ಸನ್ ದಾಖಲೆಗೆ ಮಳೆ ಅಡ್ಡಿಪಡಿಸಲಿಲ್ಲ. ಮೊದಲ ಇನಿಂಗ್ಸ್‌ನಲ್ಲಿ 56ಕ್ಕೆ 5 ವಿಕೆಟ್‌ಗಳನ್ನು ಪಡೆದಿದ್ದ ಆ್ಯಂಡರ್ಸನ್ ಎರಡನೇ ಇನಿಂಗ್ಸ್‌ನಲ್ಲಿ 45ಕ್ಕೆ 2 ವಿಕೆಟ್ ಪಡೆದರು. ಅಂತಿಮ ದಿನದ ಪಂದ್ಯದಲ್ಲಿ ಯಾವುದೇ ನಾಟಕೀಯ ತಿರುವು ಕಂಡು ಬರಲಿಲ್ಲ. ಪಾಕಿಸ್ತಾನದ ಬಾಬರ್ ಆಝಮ್ ಔಟಾಗದೆ 63 ರನ್ ಗಳಿಸಿ ತಂಡವನ್ನು ಆಧರಿಸಿದರು. ಇಂಗ್ಲೆಂಡ್ ಮತ್ತು ಪಾಕಿಸ್ತಾನ ಮೂರು ಪಂದ್ಯಗಳ ಟ್ವೆಂಟಿ -20 ಸರಣಿಯನ್ನು ಶುಕ್ರವಾರ ಪ್ರಾರಂಭಿಸಲಿವೆ.