ಅಗ್ರಸ್ಥಾನ ಕಾಯ್ದುಕೊಂಡ ಕೊಹ್ಲಿ, ರೋಹಿತ್

Update: 2020-08-26 18:14 GMT

►ಐಸಿಸಿ ಏಕದಿನ ರ್ಯಾಂಕಿಂಗ್

ದುಬೈ, ಆ.26: ಐಸಿಸಿ ಏಕದಿನ ರ್ಯಾಂಕಿಂಗ್‌ನಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪ ನಾಯಕ ರೋಹಿತ್ ಶರ್ಮಾ ಕ್ರಮವಾಗಿ ಮೊದಲ ಹಾಗೂ ಎರಡನೇ ಸ್ಥಾನವನ್ನು ಉಳಿಸಿಕೊಳ್ಳುವುದರೊಂದಿಗೆ ತಮ್ಮ ಪ್ರಾಬಲ್ಯ ಕಾಯ್ದುಕೊಂಡಿದ್ದಾರೆ.

ದುಬೈನಲ್ಲಿ ಬುಧವಾರ ಏಕದಿನ ಹಾಗೂ ಟೆಸ್ಟ್ ರ್ಯಾಂಕಿಂಗ್ ಪಟ್ಟಿ ಬಿಡುಗಡೆ ಮಾಡಲಾಗಿದೆ. ಆಸ್ಟ್ರೇಲಿಯದ ‘ರನ್ ಯಂತ್ರ’ ಖ್ಯಾತಿಯ ಸ್ಟೀವನ್ ಸ್ಮಿತ್ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನದಲ್ಲಿ ಮುಂದುವರಿದಿದ್ದು, ಕೊಹ್ಲಿ, ಸ್ಮಿತ್ ಅವರ ಸಹ ಆಟಗಾರ ಮಾರ್ನಸ್ ಲ್ಯಾಬುಶೆನ್ ಆನಂತರದ ಸ್ಥಾನದಲ್ಲಿದ್ದಾರೆ.

ಟಿ-20 ರ್ಯಾಂಕಿಂಗ್‌ನಲ್ಲಿ ಭಾರತದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಕೆ.ಎಲ್.ರಾಹುಲ್ ಎರಡನೇ ಸ್ಥಾನದಲ್ಲಿದ್ದು, ಪಾಕಿಸ್ತಾನದ ಬಾಬರ್ ಆಝಂ ಮೊದಲ ಹಾಗೂ ಆಸ್ಟ್ರೇಲಿಯದ ನಾಯಕ ಆ್ಯರೊನ್‌ಫಿಂಚ್ ಮೂರನೇ ಸ್ಥಾನದಲ್ಲಿದ್ದಾರೆ.

ಏಕದಿನ ಬೌಲಿಂಗ್ ರ್ಯಾಂಕಿಂಗ್‌ನಲ್ಲಿ ಭಾರತದ ವೇಗದ ಬೌಲರ್ ಜಸ್‌ಪ್ರಿತ್ ಬುಮ್ರಾ ನಂ.1 ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯದ ವೇಗದ ಬೌಲರ್ ಪ್ಯಾಟ್ ಕಮಿನ್ಸ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಅಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ ಟಿ-20ಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ತಂಡಗಳ ಪೈಕಿ ಭಾರತ ಏಕದಿನ ಕ್ರಿಕೆಟ್‌ನಲ್ಲಿ 2ನೇ ರ್ಯಾಂಕಿನಲ್ಲಿದ್ದರೆ, ಟೆಸ್ಟ್ ಹಾಗೂ ಟಿ-20 ಮಾದರಿ ಕ್ರಿಕೆಟ್‌ನಲ್ಲಿ ಮೂರನೇ ಸ್ಥಾನದಲ್ಲಿದೆ.

 ಪಾಕ್ ವಿರುದ್ಧ ಸೌತಾಂಪ್ಟನ್‌ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಝ್ಯ್‌ಕ್ ಕ್ರಾಲಿ 267 ರನ್ ಸಿಡಿಸಿದ್ದರೆ, ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ಏಳು ವಿಕೆಟ್‌ಗಳ ಗೊಂಚಲು ಪಡೆದಿದ್ದರು. ಇಂಗ್ಲೆಂಡ್ ಪರ 10ನೇ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿರುವ ಕ್ರಾಲಿ ರ್ಯಾಂಕಿಂಗ್‌ನಲ್ಲಿ 53 ಸ್ಥಾನಗಳ ಭಡ್ತಿ ಪಡೆದು ಜೀವನಶ್ರೇಷ್ಠ 28ನೇ ಸ್ಥಾನ ತಲುಪಿದರು. ಸರಣಿ ಆರಂಭಕ್ಕೆ ಮೊದಲು 95ನೇ ರ್ಯಾಂಕಿನಲ್ಲಿದ್ದ ಕ್ರಾಲಿ ಸರಣಿಯಲ್ಲಿ ಒಟ್ಟು 320 ರನ್ ಗಳಿಸಿ ಗಮನ ಸೆಳೆದರು.

 ಮತ್ತೊಂದೆಡೆ ಆ್ಯಂಡರ್ಸನ್ ಅಗ್ರ-10ಕ್ಕೆ ವಾಪಸಾಗಿದ್ದಾರೆ. ಮಾಜಿ ನಂ.1 ಬೌಲರ್ ಆ್ಯಂಡರ್ಸನ್ 6 ಸ್ಥಾನ ಭಡ್ತಿ ಪಡೆದು 8ನೇ ಸ್ಥಾನ ತಲುಪಿದರು. ಪಾಕ್ ವಿರುದ್ಧ ಸರಣಿಯ 3ನೇ ಪಂದ್ಯದಲ್ಲಿ 29ನೇ ಬಾರಿ ಐದು ವಿಕೆಟ್ ಗೊಂಚಲು ಪಡೆದ ಆ್ಯಂಡರ್ಸನ್ 2ನೇ ಇನಿಂಗ್ಸ್ ನಲ್ಲಿ ಅಝರ್ ಅಲಿ ವಿಕೆಟ್ ಪಡೆದು 600 ವಿಕೆಟ್‌ಗಳನ್ನು ಕಬಳಿಸಿದ ಮೊದಲ ವೇಗದ ಬೌಲರ್ ಎನಿಸಿಕೊಂಡರು.

ಮೂರನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 141 ರನ್ ಗಳಿಸಿ ಫಾರ್ಮ್‌ಗೆ ವಾಪಸಾಗಿರುವ ಪಾಕ್ ನಾಯಕ ಅಝರ್ ಅಲಿ 11 ಸ್ಥಾನ ಭಡ್ತಿ ಪಡೆದು 23ನೇ ಸ್ಥಾನ ತಲುಪಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News