ಕೋವಿಡ್ -19 ಸಂತ್ರಸ್ತರಿಗೆ ಸಿಎಂ ಪರಿಹಾರ ನಿಧಿಯಿಂದ ಚಿಕಿತ್ಸಾ ವೆಚ್ಚ ನೀಡಲಿ: ಯು.ಟಿ.ಖಾದರ್

Update: 2020-08-27 07:37 GMT

 ಮಂಗಳೂರು, ಆ.27: ದ.ಕ. ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರಿಗೆ ಸಚಿವರು ಹೇಳಿದಂತೆ ಕೋವಿಡ್ ಚಿಕಿತ್ಸೆಗೆ ನಿಗದಿಯಾದ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ದೊರೆಯುತ್ತಿಲ್ಲ. ಬದಲಾಗಿ ದುಬಾರಿ ಮೊತ್ತ ಪಾವತಿಸಬೇಕಾಗಿದೆ. ಆದ್ದರಿಂದ ಕೊರೋನ ರೋಗಿಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಚಿಕಿತ್ಸಾ ವೆಚ್ಚವನ್ನು ಪಾವತಿಸಬೇಕು ಎಂದು ಶಾಸಕ ಯು.ಟಿ.ಖಾದರ್ ಸುದ್ದಿಗೋಷ್ಠಿಯಲ್ಲಿಂದು ಆಗ್ರಹಿಸಿದ್ದಾರೆ.

ಬಿಜೆಪಿ ಆಡಳಿತದಿಂದ ರಾಜ್ಯಕ್ಕೆ ಸ್ವರ್ಣಯುಗ ಬಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಹೇಳುತ್ತಿದ್ದಾರೆ. ಆದರೆ ಜಿಲ್ಲೆಯಲ್ಲಿ ಜನರು ಆಸ್ಪತ್ರೆಗೆ ಬರಲು ಹೆದರುವ ಪರಿಸ್ಥಿತಿ ನಿರ್ಮಾಣ ವಾಗಿದೆ. ಕಳೆದ ವರ್ಷ ನೆರೆಯಿಂದ ಸಂತ್ರಸ್ತರಾದ ಶೇ.70 ಮಂದಿಗೆ ಇನ್ನೂ  ಪರಿಹಾರ ಲಭಿಸಿಲ್ಲ. ಜಿಎಸ್ ಟಿ ಪಾಲು ಕೇಂದ್ರ ಸರಕಾರ ರಾಜ್ಯಕ್ಕೆ ನೀಡಿಲ್ಲ. ರಾಜ್ಯದ ಸಚಿವರು ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡುತ್ತಿದ್ದಾರೆ. ಪರಿಣಾಮವಾಗಿ ರಾಜ್ಯ-ಜಿಲ್ಲೆಗಳ ನಡುವೆ ಸಮನ್ವಯದ ಕೊರತೆ ಇದೆ. ಕೋವಿಡ್ ನಿಯಂತ್ರಣಕ್ಕೆ ಸ್ಪಷ್ಟ ನಿಲುವು ಸರಕಾರಕ್ಕಿಲ್ಲ. ಪರಿಣಾಮವಾಗಿ ಜನಸಾಮಾನ್ಯರು ತೊಂದರೆಗೀಡಾಗಿದ್ದಾರೆ ಎಂದು ಯು.ಟಿ.ಖಾದರ್ ಟೀಕಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಐವನ್ ಡಿಸೋಜ, ಕವಿತಾ ಸನಿಲ್, ಅಪ್ಪಿ, ಮುಹಮ್ಮದ್ ಕುಂಜತ್ತಬೈಲ್, ಹಬೀಬ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News