ಕೊರೋನ ಸೋಂಕು: ವೈದ್ಯಕೀಯ ಕಾರ್ಯವಿಧಾನದ ವಿವರ ಒದಗಿಸಲು ಮಾನವ ಹಕ್ಕು ಆಯೋಗದ ಸೂಚನೆ
ಹೊಸದಿಲ್ಲಿ, ಆ.27: ಕೊರೋನ ಸೋಂಕಿನಿಂದ ಉದ್ಭವಿಸಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಅನುಸರಿಸಲಾಗುತ್ತಿರುವ ವೈದ್ಯಕೀಯ ಕಾರ್ಯವಿಧಾನ ಹಾಗೂ ವೈದ್ಯಕೀಯ ಮೂಲಸೌಕರ್ಯದ ಮಾಹಿತಿ ಒದಗಿಸುವಂತೆ ಸೂಚಿಸಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದೆ.
ವೈದ್ಯಕೀಯ ಮೂಲಸೌಕರ್ಯದ ವಿವರ ಹಾಗೂ ಕೊರೋನ ಸೋಂಕಿನಿಂದ ಉದ್ಭವಿಸಿರುವ ಪರಿಸ್ಥಿತಿಯನ್ನು ನಿರ್ವಹಿಸಲು ಅನುಸರಿಸುತ್ತಿರುವ ವೈದ್ಯಕೀಯ ಕಾರ್ಯವಿಧಾನದ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿ ಎಲ್ಲಾ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಜೈಲಿನ ಮಹಾನಿರ್ದೇಶಕರು ಹಾಗೂ ಇನ್‌ಸ್ಪೆಕ್ಟರ್ ಜನರಲ್‌ಗೆ ಪತ್ರ ಬರೆಯಲಾಗಿದೆ ಎಂದು ಆಯೋಗದ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ. ದೇಶದಲ್ಲಿ ಗುರುವಾರ ಬೆಳಗ್ಗಿನವರೆಗಿನ 24 ಗಂಟೆಗಳ ಅವಧಿಯಲ್ಲಿ 75,760 ಸೋಂಕಿನ ಪ್ರಕರಣ ದಾಖಲಾಗುವುದರೊಂದಿಗೆ ಕೊರೋನ ಸೋಂಕಿತರ ಸಂಖ್ಯೆ 33 ಲಕ್ಷದ ಗಡಿ ದಾಟಿದೆ. ಅಲ್ಲದೆ ಇದೇ ಅವಧಿಯಲ್ಲಿ 1,023 ಸಾವಿನ ಪ್ರಕರಣ ದಾಖಲಾಗಿದ್ದು, ಕೊರೋನ ಸೋಂಕಿನಿಂದ ಮೃತರ ಸಂಖ್ಯೆ 60,472ಕ್ಕೆ ತಲುಪಿದೆ.
ಗುರುವಾರ ಬೆಳಗ್ಗಿನವರೆಗಿನ ಮಾಹಿತಿಯಂತೆ, ದೇಶದಲ್ಲಿ ಕೊರೋನ ಸೋಂಕಿತರ ಒಟ್ಟು ಸಂಖ್ಯೆ 33,10,235ಕ್ಕೆ ತಲುಪಿದ್ದು ಇದರಲ್ಲಿ 7,25,991 ಸಕ್ರಿಯ ಪ್ರಕರಣಗಳಾಗಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.