'ನಿನ್ನ ಕುಟುಂಬವನ್ನು ಮುಗಿಸುತ್ತೇವೆ': ದಿಲ್ಲಿ ಗಲಭೆಯ ಸಾಕ್ಷಿ ಗರ್ಭಿಣಿಯ ಮನೆ ಮುಂದೆ ಜಮಾಯಿಸುತ್ತಿರುವ ಗೂಂಡಾಗಳು

Update: 2020-08-27 14:07 GMT

ಹೊಸದಿಲ್ಲಿ,ಆ.27: ದಿಲ್ಲಿ ಗಲಭೆಗಳಿಗೆ ಪ್ರತ್ಯಕ್ಷ ಸಾಕ್ಷಿಯಾಗಿರುವ ಈಶಾನ್ಯ ದಿಲ್ಲಿ ನಿವಾಸಿ ರುಬೀನಾ ಬಾನು (35) ಪೊಲೀಸ್ ದೌರ್ಜನ್ಯದ ವಿರುದ್ಧ ದೂರನ್ನು ಸಲ್ಲಿಸಿದ್ದಕ್ಕೆ ಮಾನಸಿಕ ಕಿರುಕುಳ ಮತ್ತು ತನ್ನ ಕುಟುಂಬಕ್ಕೆ ಜೀವ ಬೆದರಿಕೆಯನ್ನು ಎದುರಿಸುತ್ತಿದ್ದಾರೆ. ಬಿಜೆಪಿ ನಾಯಕ ಕಪಿಲ್ ಮಿಶ್ರಾ ಮತ್ತು ಕಾರವಲ್ ನಗರ ಶಾಸಕ ಮೋಹನ ಸಿಂಗ್ ಬಿಷ್ಟ್ ಅವರ ಬೆಂಬಲಿಗರೆನ್ನಲಾದ ದುಷ್ಕರ್ಮಿಗಳ ಪಡೆ ದಿನದ 24 ಗಂಟೆಯೂ ರುಬಿನಾರ ಮನೆಯ ಬಳಿ ಜಮಾಯಿಸುತ್ತಿದ್ದು, ಒಂಭತ್ತು ತಿಂಗಳ ತುಂಬು ಗರ್ಭಿಣಿಯಾಗಿರುವ ಆಕೆಯ ಹೆರಿಗೆಗೆ ವೈದ್ಯರು ನೀಡಿದ್ದ ದಿನಾಂಕವು ಮೀರಿದೆ. ಶಿಶುವು ಗರ್ಭದಲ್ಲಿ ಅಡ್ಡ ಸಿಲುಕಿರುವುದರಿಂದ ಶಸ್ತ್ರಚಿಕಿತ್ಸೆ ಮೂಲಕ ಅದನ್ನು ಹೊರತೆಗೆಯಬೇಕಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ರೌಡಿಗಳ ಬೆದರಿಕೆಯಿಂದಾಗಿ ಆಕೆಗೆ ಆಸ್ಪತ್ರೆಗೆ ಹೋಗಲೂ ಸಾಧ್ಯವಾಗುತ್ತಿಲ್ಲ. ರುಬೀನಾಗೆ ಸೂಕ್ತ ರಕ್ಷಣೆಯನ್ನೊದಗಿಸುವಂತೆ ದಿಲ್ಲಿ ಉಚ್ಚ ನ್ಯಾಯಾಲಯವು ಆದೇಶ ನೀಡಿದೆಯಾದರೂ ಪೊಲೀಸರು ಅದಕ್ಕೆ ಕ್ಯಾರೇ ಎನ್ನುತ್ತಿಲ್ಲ ಎಂದು Thequint.com ವರದಿ ಮಾಡಿದೆ.

ಪೊಲೀಸರು ಮತ್ತು ಬಿಜೆಪಿ ನಾಯಕರ ಬೆಂಬಲಿಗರಿಂದ ತಾನು ಅನುಭವಿಸುತ್ತಿರುವ ಸಂಕಷ್ಟಗಳನ್ನು ರುಬೀನಾ ಸುದ್ದಿ ಜಾಲತಾಣ theQuint.comನ ವರದಿಗಾರರ ಎದುರು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಫೆ.24ರಿಂದ ಈಶಾನ್ಯ ದಿಲ್ಲಿಯ ಚಾಂದ್‌ ಬಾಗ್ ‌ನಲ್ಲಿ ಸಿಎಎ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದ ಸ್ಥಳದಲ್ಲಿ ಆರಂಭಗೊಂಡಿದ್ದ ಪೊಲೀಸ್ ಕ್ರೌರ್ಯ ಮತ್ತು ಗಲಭೆಗಳಿಗೆ ಪ್ರತ್ಯಕ್ಷ ಸಾಕ್ಷಿಯಾಗಿರುವ ರುಬೀನಾ ಮಾ.19ರಂದು ಈದ್ಗಾ ರಿಲೀಫ್ ಕ್ಯಾಂಪ್ ‌ನಲ್ಲಿಯ ಪೊಲೀಸ್ ಹೆಲ್ಪ್ ಡೆಸ್ಕ್‌ ನಲ್ಲಿ ದೂರನ್ನು ಸಲ್ಲಿಸಿದಾಗಿನಿಂದ ದಿಲ್ಲಿ ಪೊಲೀಸರು ಮತ್ತು ಮಿಶ್ರಾ ಹಾಗೂ ಬಿಷ್ಟ್ ಅವರ ಬೆಂಬಲಿಗರಿಂದ ಕಿರುಕುಳ ಮತ್ತು ಜೀವಬೆದರಿಕೆಯನ್ನು ಎದುರಿಸುತ್ತಿದ್ದಾರೆ. ದೂರಿನ ಪ್ರತಿಯ ಮೇಲೆ ದಯಾಳಪುರ ಪೊಲೀಸ್ ಠಾಣೆಯ ಮೊಹರಿದೆ.

ರುಬೀನಾ ತನ್ನ ದೂರಿನಲ್ಲಿ ಎಸಿಪಿ ಅನುಜ್ ಕುಮಾರ್, ದಯಾಳಪುರ ಪೊಲೀಸ್ ಠಾಣಾಧಿಕಾರಿ ತಾಲ್ಕೇಶ್ವರ, ಕಪಿಲ್ ಮಿಶ್ರಾ ಹಾಗೂ ಬಿಷ್ಟ್ ಬೆಂಬಲಿಗರನ್ನು ಹೆಸರಿಸಿದ್ದಾರೆ.

ಅನುಜ್ ಕುಮಾರ್ ದೂರವಾಣಿಯಲ್ಲಿ ಮಿಶ್ರಾರಿಂದ ಆದೇಶಗಳನ್ನು ಸ್ವೀಕರಿಸುತ್ತಿದ್ದರು ಮತ್ತು ಸಾಧ್ಯವಿದ್ದಷ್ಟು ಜನರನ್ನು ಕೊಲ್ಲುವುದಾಗಿ ಅವರಿಗೆ ಭರವಸೆ ನೀಡಿದ್ದರು ಎಂದು ರುಬಿನಾ ದೂರಿನಲ್ಲಿ ಆರೋಪಿಸಿದ್ದಾರೆ.

 “ಟೆಂಟ್‌ನೊಳಗೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವ ನಮಗೇಕೆ ತೊಂದರೆ ನೀಡುತ್ತೀರಿ” ಎಂದು ತಾನು ಅನುಜ್ ಕುಮಾರ್ ಅವರನ್ನು ಪ್ರಶ್ನಿಸಿದ್ದೆ. ತನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಅವರು, “ಮಿಶ್ರಾ ಮತ್ತು ಅವರ ಸಂಗಡಿಗರು ಇಂದೇ ಇಲ್ಲಿಯೇ ನಿಮಗೆ ಬದುಕಿನಿಂದ ಮುಕ್ತಿ ನೀಡಲಿದ್ದಾರೆ”  ಎಂದು ಬೆದರಿಕೆಯೊಡ್ಡಿದ್ದರು. ಇದರ ಬೆನ್ನಿಗೇ ಪೊಲೀಸರು ತಾನೂ ಸೇರಿದಂತೆ ಪ್ರತಿಭಟನಾಕಾರರ ಮೇಲೆ ಬರ್ಬರ ಹಲ್ಲೆ ನಡೆಸಿದ್ದರು. ಆಗ ಮೂರು ತಿಂಗಳ ಗರ್ಭಿಣಿಯಾಗಿದ್ದ ತನ್ನ ಮೇಲೆ ದೊಣ್ಣೆ , ಕಲ್ಲು ಮತ್ತು ರೈಫಲ್ ಮೊನೆಯಿಂದ ಹಲ್ಲೆ ನಡೆಸಲಾಗಿತ್ತು. ಕುಸಿದು ಬಿದ್ದಿದ್ದ ತನ್ನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಚಿಕಿತ್ಸೆಯನ್ನು ನಿರಾಕರಿಸಲಾಗಿತ್ತು. ಚಿಕಿತ್ಸೆ ನೀಡದಂತೆ ತಮಗೆ ಮೇಲಿನಿಂದ ಆದೇಶವಿದೆ ಎಂದು ಆಸ್ಪತ್ರೆ ಸಿಬ್ಬಂದಿಗಳು ತಿಳಿಸಿದ್ದರು ಎಂದು ರುಬೀನಾ ದೂರಿನಲ್ಲಿ ತಿಳಿಸಿದ್ದಾರೆ.

ಮಾ.19 ಮತ್ತು ಜು.30ರಂದು,ಹೀಗೆ ಎರಡು ಬಾರಿ ಪೊಲೀಸರಿಗೆ ದೂರು ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳದಿದ್ದರಿಂದ ರುಬಿನಾ, ತನ್ನ ದೂರಿನ ಮೇಲೆ ಎಫ್‌ಐಆರ್ ದಾಖಲಿಸುವಂತೆ ನಿರ್ದೇಶನ ಹಾಗೂ ತನಗೆ ಮತ್ತು ತನ್ನ ಕುಟುಂಬಕ್ಕೆ ರಕ್ಷಣೆಯನ್ನು ಕೋರಿ ದಿಲ್ಲಿ ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು.

ತನ್ಮಧ್ಯೆ, “ನಿನ್ನ ಹೆಂಡತಿಗೆ ದೂರನ್ನು ಹಿಂದೆಗೆದುಕೊಳ್ಳುವಂತೆ ತಿಳಿಸು,ಇಲ್ಲದಿದ್ದರೆ ನಿನ್ನ ಕುಟುಂಬದ ಎಲ್ಲರ ಕಥೆ ಮುಗಿಸುತ್ತೇವೆ” ಎಂದು ಗೂಂಡಾಗಳು ತನ್ನ ಪತಿಗೂ ಬೆದರಿಕೆಯೊಡ್ಡಿದ್ದಾರೆ ಎಂದು ರುಬಿನಾ ಆರೋಪಿಸಿದರು.

ರುಬಿನಾರ ದೂರಿನ ಬಗ್ಗೆ ವಿಚಾರಣೆ ನಡೆಸಲಾಗುವುದು ಮತ್ತು ಆಕೆಗೆ ರಕ್ಷಣೆ ನೀಡಲಾಗುವುದು ಎಂದು ದಿಲ್ಲಿ ಪೊಲೀಸರ ಪರ ವಕೀಲರು ನ್ಯಾಯಾಲಯಕ್ಕೆ ಲಿಖಿತವಾಗಿ ತಿಳಿಸಿದ ಬಳಿಕ ಆಕೆ ಜು.7ರಂದು ತನ್ನ ಅರ್ಜಿಯನ್ನು ಹಿಂದೆಗೆದುಕೊಂಡಿದ್ದರು. ಅದಾಗಿ 20 ದಿನಗಳು ಕಳೆದಿದ್ದರೂ ದೂರಿನ ವಿಚಾರಣೆಯು ನಡೆದಿಲ್ಲ,ಆಕೆಗೆ ರಕ್ಷಣೆಯನ್ನೂ ಒದಗಿಸಲಾಗಿಲ್ಲ. ತನ್ಮಧ್ಯೆ ಆ.23ರಂದು ರುಬಿನಾರ ಮನೆಗೆ ಬಂದಿದ್ದ ಪೊಲೀಸರು ಆಕೆಯ 15ರ ಹರೆಯದ ಪುತ್ರನನ್ನು ದಂಗೆ ಸಂಬಂಧಿತ ಪ್ರಕರಣದಲ್ಲಿ ಬಂಧಿಸುವುದಾಗಿ ಬೆದರಿಕೆಯನ್ನೂ ಒಡ್ಡಿಹೋಗಿದ್ದಾರೆ ಎಂದು Thequint.com ವರದಿ ಮಾಡಿದೆ.

ಕೃಪೆ: Thequint.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News