ಸುಳ್ಳುಗಳು, ತಪ್ಪು ಮಾಹಿತಿಗಳಿಂದ ತುಂಬಿದ ‘ದಿಲ್ಲಿ ರಯಟ್ಸ್ 2020’ ಪುಸ್ತಕ

Update: 2020-08-27 14:03 GMT

ಹೊಸದಿಲ್ಲಿ, ಜ.27: ಕಳೆದ ಫೆಬ್ರವರಿಯಲ್ಲಿ 50ಕ್ಕೂ ಅಧಿಕ ಜೀವಗಳನ್ನು ಬಲಿ ತೆಗೆದುಕೊಂಡು ಸಾವಿರಾರು ಜನರನ್ನು ನಿರ್ವಸಿತರನ್ನಾಗಿ ಮಾಡಿದ್ದ ಈಶಾನ್ಯ ದಿಲ್ಲಿ ಹಿಂಸಾಚಾರದ ಕುರಿತು ‘ಗಂಭೀರ ಸಂಶೋಧನಾ ದಾಖಲೆ ’ಎಂದು ಬಣ್ಣಿಸಲಾಗಿರುವ ‘ದಿಲ್ಲಿ ರಯಟ್ಸ್ 2020: ದಿ ಅನ್‌ಟೋಲ್ಡ್ ಸ್ಟೋರಿ ’ಪುಸ್ತಕದ ಬಿಡುಗಡೆಯನ್ನು ಪ್ರಕಾಶನ ಸಂಸ್ಥೆ ಬ್ಲೂಮ್ಸ್‌ಬರಿ ಇಂಡಿಯಾ ಆ.22ರಂದು ರದ್ದುಗೊಳಿಸಿದ್ದು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ಯಗಳ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ. ಪುಸ್ತಕ ಪ್ರಕಾಶನವನ್ನು ಹಿಂದೆಗೆದುಕೊಳ್ಳುವ ಮೂಲಕ ಬ್ಲೂಮ್ಸ್‌ಬರಿ ಸೆನ್ಸಾರ್‌ಶಿಪ್‌ಗೆ ಮುಂದಾಗಿದೆ ಎಂದು ಹಲವರು ಆರೋಪಿಸಿದ್ದಾರೆ. ಮೋನಿಕಾ ಅರೋರಾ,ಸೋನಾಲಿ ಚಿತಲಕರ್ ಮತ್ತು ಪ್ರೇರಣಾ ಮಲ್ಹೋತ್ರಾ ಅವರು ಬರೆದಿರುವ ಈ ಪುಸ್ತಕವನ್ನು ಈಗ ಗರುಡ ಪ್ರಕಾಶನವು ಪ್ರಕಟಿಸುತ್ತಿದೆ.

ಆನ್‌ಲೈನ್‌ನಲ್ಲಿ ಬಿಡುಗಡೆ ಕಾರ್ಯಕ್ರಮವನ್ನು ಪ್ರಕಟಿಸಿದ ಬಳಿಕ ಈ ಪುಸ್ತಕ ಸುದ್ದಿಯಾಗಿದ್ದು ಇಲ್ಲಿ ಗಮನಾರ್ಹವಾಗಿದೆ. ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅವರು ಕಾರ್ಯಕ್ರಮದಲ್ಲಿ ಗೌರವ ಅತಿಥಿಯಾಗಿ ಭಾಗವಹಿಸಬೇಕಿತ್ತು. ದಿಲ್ಲಿ ಗಲಭೆಗೆ ಪ್ರಚೋದನೆಯಲ್ಲಿ ಮಿಶ್ರಾ ಪಾತ್ರವಿತ್ತು ಎಂದು ಹಲವಾರು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ,ಆದರೆ ಮಿಶ್ರಾ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಇಲ್ಲ ಎಂದು ದಿಲ್ಲಿ ಪೊಲೀಸರು ಹೇಳಿದ್ದಾರೆ.

theQuint.com ಸುದ್ದಿ ಜಾಲತಾಣ ಗೆ ಬ್ಲೂಮ್ಸ್‌ಬರಿ ಪ್ರಕಟಿಸಲಿದ್ದ ಪುಸ್ತಕದ ಕರಡು ಪ್ರತಿಯು ಲಭ್ಯವಾಗಿದ್ದು,ಪರಿಶೀಲಿಸಿದಾಗ ಅದು ಸತ್ಯಕ್ಕೆ ದೂರವಾದ ಅಂಶಗಳು,ತಪ್ಪುಗಳು,ಆಧಾರವಿಲ್ಲದ ಹೇಳಿಕೆಗಳು ಮತ್ತು ಒಳಸಂಚು ಸಿದ್ಧಾಂತಗಳಿಂದ ತುಂಬಿರುವುದು ಬೆಳಕಿಗೆ ಬಂದಿದೆ.

ಪುಸ್ತಕದ ಆರಂಭದ ಪುಟಗಳಲ್ಲಿಯೇ ಮೊದಲ ಪ್ರಮುಖ ತಪ್ಪು ನುಸುಳಿದೆ. ಮಾಜಿ ಐಪಿಎಸ್ ಅಧಿಕಾರಿ ಪಿ.ಸಿ.ಡೋಗ್ರಾ ಅವರು ತನ್ನ ಮುನ್ನುಡಿಯಲ್ಲಿ ಜವಾಹರಲಾಲ ನೆಹರು ಅವರು ‘ನಾನು ಸಂಸ್ಕೃತಿಯಿಂದ ಮುಸ್ಲಿಂ ಮತ್ತು ಜನ್ಮದ ತಪ್ಪಿನಿಂದಾಗಿ ಮಾತ್ರ ಹಿಂದು ಆಗಿದ್ದೇನೆ’ ಎಂದು ತನ್ನನ್ನು ಬಣ್ಣಿಸಿಕೊಂಡಿದ್ದರು ಎಂಬ ಅವರದಲ್ಲದ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ. ಆದರೆ ಈ ಮಾತನ್ನು ನೆಹರು ಎಂದೂ ಹೇಳಿರಲೇ ಇಲ್ಲ. ವಾಸ್ತವದಲ್ಲಿ ಹಿಂದು ಮಹಾಸಭಾದ ನಾಯಕನೋರ್ವ ನೆಹರು ಅವರನ್ನು ಆ ರೀತಿಯಾಗಿ ಬಣ್ಣಿಸಿದ್ದ.

ಪುಸ್ತಕವು ಈ ಹಿಂದೆಯೇ ತಿರಸ್ಕರಿಸಲ್ಪಟ್ಟಿರುವ ಇಂತಹ ಹಲವಾರು ತಪ್ಪು ಮಾಹಿತಿಗಳನ್ನೊಳಗೊಂಡಿದೆ ಎಂದು theQuint.com ತನ್ನ ತನಿಖಾ ವರದಿಯಲ್ಲಿ ಹೇಳಿದೆ.

ಸಿಎಎ ವಿರುದ್ಧ ಪ್ರತಿಭಟನೆಯಿಂದಾಗಿ ದೇಶಾದ್ಯಂತ ಸುದ್ದಿಯಾಗಿದ್ದ ದಿಲ್ಲಿಯ ಶಾಹೀನ್ ಬಾಗ್‌ನಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆಗಳನ್ನು ಕೂಗಲಾಗಿತ್ತು ಮತ್ತು 2026ರಲ್ಲಿ ಜೆಎನ್‌ಯುದಲ್ಲಿ ಭಾರತ ವಿರೋಧಿ ಘೋಷಣೆಗಳು ಮೊಳಗಿದ್ದವು ಎಂಬಂತಹ ಹೇಳಿಕೆಗಳು ಇಂತಹ ತಪ್ಪುಮಾಹಿತಿಗಳಲ್ಲಿ ಸೇರಿವೆ. ಮೊದಲ ಹೇಳಿಕೆಯನ್ನು ಸಮರ್ಥಿಸುವ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಮತ್ತು ಎರಡನೇ ಹೇಳಿಕೆ ಈಗಲೂ ವಿಚಾರಣಾಧೀನ ವಿಷಯವಾಗಿದೆ.

 370ನೇ ವಿಧಿಯ ರದ್ದತಿ, ಅಯೋಧ್ಯೆ ತೀರ್ಪು, ಪೌರತ್ವ ಕಾಯ್ದೆಯ ಅಂಗೀಕಾರ ಸೇರಿದಂತೆ ಸರಕಾರವು ಕೈಗೊಂಡ ನಿರ್ಧಾರಗಳಿಂದ ಮುಸ್ಲಿಮರನ್ನು ಕಾಡುತ್ತಿದ್ದ ಅಭದ್ರತೆಯ ಭಾವನೆಗಳನ್ನು ಶಾಹೀನ್‌ಬಾಗ್ ಪ್ರತಿಭಟನೆಯು ದುರುಪಯೋಗಿಸಿಕೊಂಡಿತ್ತು ಎಂಬ ವಾದವನ್ನು ಪುಸ್ತಕದುದ್ದಕ್ಕೂ ಲೇಖಕರು ಮಂಡಿಸಿದ್ದಾರೆ. ಆದರೆ ಈ ವಾದದಲ್ಲಿ ಎಳ್ಳಷ್ಟೂ ತಿರುಳಿಲ್ಲ. ಸಿಎಎ ತಾರತಮ್ಯಕಾರಿಯಾಗಿದೆ ಮತ್ತು ಸಂವಿಧಾನದ 14ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ಹಲವಾರು ಕಾನೂನು ತಜ್ಞರು ಈಗಾಗಲೇ ಹೇಳಿದ್ದಾರೆ.

ಲೇಖಕರು ಈ ವಾದಗಳನ್ನು ತಮ್ಮ ಪುಸ್ತಕದಲ್ಲಿ ಸೇರಿಸಿದ್ದಾರೆ,ಅದೂ ಸಿಎಎ ಭಾರತೀಯ ಪ್ರಜೆಗಳಿಗೆ ಅನ್ವಯಿಸುವುದಿಲ್ಲವಾದ್ದರಿಂದ ಅದು ತಾರತಮ್ಯದಿಂದ ಕೂಡಿದೆ ಮತ್ತು ವಿಧಿ 14ರ ಉಲ್ಲಂಘನೆಯಾಗಿದೆ ಎಂಬ ವಾದಕ್ಕೆ ಯಾವುದೇ ಆಧಾರವಿಲ್ಲ ಎಂದು ಪ್ರತಿಪಾದಿಸಲು ಮಾತ್ರ ಎಂದು theQuint.com  ಬೆಟ್ಟು ಮಾಡಿದೆ.

‘ಎಡಪಂಥೀಯರ ಸಂಚಿನ ’ ಕುರಿತು ಹೇಳಿರುವ ಲೇಖಕರು,ಜಾಮಿಯಾದಲ್ಲಿ ಗುಂಪೊಂದನ್ನು ಉದ್ದೇಶಿಸಿ ಮಾತನಾಡಿದ್ದ ಸಾಮಾಜಿಕ ಕಾರ್ಯಕರ್ತ ಹರ್ಷ ಮಂದರ್ ಅವರು ತನಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಶ್ವಾಸವಿಲ್ಲ ಎಂದು ಹೇಳಿದ್ದರು ಎಂದು ಉಲ್ಲೇಖಿಸಿದ್ದಾರೆ.

ಇದು ಸಂದರ್ಭಾತೀತವಾಗಿ ತೆಗೆದುಕೊಳ್ಳಲಾಗಿರುವ ಹೇಳಿಕೆಯಾಗಿದ್ದು, ಬಿಜೆಪಿಯ ಐಟಿ ಘಟಕದ ಮುಖ್ಯಸ್ಥ ಅಮಿತ್ ಮಾಳವೀಯರಂತಹವರು ಇದನ್ನು ಶೇರ್ ಮಾಡಿಕೊಂಡಿದ್ದರು. ಈ ದಾರಿ ತಪ್ಪಿಸುವ ಟ್ವೀಟ್‌ನ್ನು ಮಾಳವೀಯ ಇನ್ನಷ್ಟೇ ಡಿಲೀಟ್ ಮಾಡಬೇಕಿದೆ. theQuint  ಸೇರಿದಂತೆ ವಿವಿಧ ಸಂಸ್ಥೆಗಳು ಈ ಹೇಳಿಕೆಯ ಸತ್ಯಾಸತ್ಯೆಯನ್ನು ಖಚಿತಪಡಿಸಿಕೊಂಡಿವೆ.

ಪುಸ್ತಕವು ಸಿಎಎ ವಿರೋಧಿ ಪ್ರತಿಭಟನೆಗಳನ್ನು ಖಂಡಿಸಿ ತನ್ನ ವಾದವನ್ನು ಸಮರ್ಥಿಸಿಕೊಳ್ಳಲು ಆಧಾರವಿಲ್ಲದ ಹೇಳಿಕೆಗಳನ್ನು ಅತಿಯಾಗಿ ನೆಚ್ಚಿಕೊಂಡಿದೆ ಎಂದು ತನಿಖಾ ವರದಿಯು ಬೆಟ್ಟು ಮಾಡಿದೆ.

ಆಪ್ ಶಾಸಕ ಅಮಾನತುಲ್ಲಾ ಖಾನ್ ಮತ್ತು ಮಾಜಿ ಕೌನ್ಸಿಲರ್ ತಾಹಿರ್ ಹುಸೇನ್ ಅವರನ್ನು ಕುರಿತು ಪುಸ್ತಕದಲ್ಲಿ ಸಾಕಷ್ಟು ಟೀಕೆಗಳಿವೆ, ಆದರೆ ಬಿಜೆಪಿ ನಾಯಕರಾದ ಅನುರಾಗ್ ಠಾಕೂರ್ ಮತ್ತು ಪ್ರವೇಶ ವರ್ಮಾ ಅವರ ಭಾಷಣಗಳು ಪುಸ್ತಕದಲ್ಲಿ ನುಸುಳದಂತೆ ಎಚ್ಚರಿಕೆ ವಹಿಸಿರುವುದು ಢಾಳಾಗಿ ಎದ್ದು ಕಾಣುತ್ತಿದೆ ಎಂದು ವರದಿಯು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News