ದೇಶದಲ್ಲಿ ನಶಿಸಿರುವ ಅರಣ್ಯಗಳ ಪುನರುಜ್ಜೀವನಕ್ಕೆ ಖಾಸಗಿ ಸಹಭಾಗಿತ್ವ: ನೀತಿ ಆಯೋಗದ ಯೋಜನೆ
ಹೊಸದಿಲ್ಲಿ,ಆ.27: ಅರಣ್ಯೀಕರಣ ಕಾರ್ಯಕ್ರಮಗಳಲ್ಲಿ ಸರಕಾರಿ-ಖಾಸಗಿ (ಪಿಪಿಪಿ) ಸಹಭಾಗಿತ್ವವನ್ನು ತರಲು ಹಾಗೂ ನಶಿಸಿರುವ ನೈಸರ್ಗಿಕ ಅರಣ್ಯಗಳಲ್ಲಿ ಖಾಸಗಿ ನೆಡುತೋಪುಗಳಿಗೆ ಅವಕಾಶ ಕಲ್ಪಿಸಲು ಪರಿಕಲ್ಪನೆಯನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ನೀತಿ ಆಯೋಗವು ನಿರತವಾಗಿದೆ ಎಂದು ಆನ್‌ಲೈನ್ ಸುದ್ದಿಸಂಸ್ಥೆ ‘ದಿ ಪ್ರಿಂಟ್’ ವರದಿ ಮಾಡಿದೆ.
ಸುದ್ದಿಸಂಸ್ಥೆಗೆ ಲಭ್ಯವಾಗಿರುವ ಆಯೋಗದ ದಾಖಲೆಯಂತೆ ಹಾಲಿ ಜಾರಿಯಲ್ಲಿರುವ ರಾಷ್ಟ್ರೀಯ ಅರಣ್ಯೀಕರಣ ಕಾರ್ಯಕ್ರಮಗಳು ನಿರೀಕ್ಷಿತ ಪರಿಣಾಮಗಳನ್ನು ನೀಡಲು ವಿಫಲವಾಗಿರುವುದರಿಂದ ಈ ಕ್ಷೇತ್ರದಲ್ಲಿ ಪಿಪಿಪಿ ಸಹಭಾಗಿತ್ವವು ಅಗತ್ಯವಾಗಿದೆ ಹಾಗೂ ಹೂಡಿಕೆಗಳನ್ನು ಪುನರುಜ್ಜೀವನಗೊಳಿಸುವ,ಅತ್ಯಾಧುನಿಕ ತಂತ್ರಜ್ಞಾನ ಮತ್ತು ಜ್ಞಾನ ಹಾಗೂ ಸಾಮರ್ಥ್ಯ ಮತ್ತು ಮಾನವ ಶಕ್ತಿಯನ್ನು ಬಳಸಿಕೊಳ್ಳುವ ಅಗತ್ಯವಿದೆ.
ಕಟ್ಟಿಗೆ ಮತ್ತು ಕಟ್ಟಿಗೆಯೇತರ ಅರಣ್ಯ ಉತ್ಪನ್ನಗಳು,ಸಾವಯವ ಕೃಷಿ ಪೂರೈಕೆ ಸರಪಳಿ,ಪರಿಸರ ಮತ್ತು ಅರಣ್ಯ ಶಿಬಿರಗಳು,ಮನರಂಜನಾ ಚಟುವಟಿಕೆ ಇತ್ಯಾದಿಗಳಲ್ಲಿ ಪಿಪಿಪಿ ಮಾದರಿಯನ್ನು ಜಾರಿಗೊಳಿಸಬಹುದಾಗಿದೆ ಎಂದು ಆಯೋಗವು ಸಿದ್ಧಪಡಿಸಿರುವ ಯೋಜನಾ ವರದಿಯಲ್ಲಿ ಸೂಚಿಸಲಾಗಿದೆ.
ನಿಯಮಗಳಂತೆ ಪಬ್ಲಿಕ್ ಲಿಸ್ಟೆಡ್ ಕಂಪನಿಗಳು,ಸಹಕಾರಿ ಸಂಸ್ಥೆಗಳು,ಸಾರ್ವಜನಿಕ ಕ್ಷೇತ್ರದ ಉದ್ಯಮಗಳು,ರಾಜ್ಯ ಸರಕಾರಗಳ ಅರಣ್ಯ ಅಭಿವೃದ್ಧಿ ನಿಗಮಗಳು,ಗ್ರಾಮಸಭೆಗಳು/ಗ್ರಾಮ ಪಂಚಾಯತಿಗಳು ಹಾಗೂ ಜಂಟಿ ಅರಣ್ಯ ವ್ಯವಸ್ಥಾಪನೆ ಸಮಿತಿಗಳು ಅರಣ್ಯೀಕರಣ ಪಾಲುದಾರರಾಗಬಹುದು. ಸ್ವಾಯತ್ತ ಜಿಲ್ಲಾ ಮತ್ತು ಗ್ರಾಮಾಭಿವೃದ್ಧಿ ಮಂಡಳಿಗಳು ಹಾಗೂ ಎನ್‌ಜಿಒಗಳನ್ನೂ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಬಹುದು.
ನೀತಿ ಆಯೋಗದ ಯೋಜನಾ ವರದಿಗೆ ಅಂತಿಮ ಮುದ್ರೆ ಬಿದ್ದರೆ ಖಾಸಗಿ ಕಂಪನಿಗಳೂ ಈ ಪಟ್ಟಿಗೆ ಸೇರ್ಪಡೆಗೊಳ್ಳಲಿವೆ.
ಇದು ಕರಡು ಮಾತ್ರವಾಗಿದ್ದು,ಸರಕಾರದ ಅಂತಿಮ ನೀತಿಯಲ್ಲ ಎಂದು ಪರಿಸರ,ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ವಕ್ತಾರರು ತನ್ನನ್ನು ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ.
ನಶಿಸಿರುವ ಅರಣ್ಯಗಳತ್ತ ಗಮನ ಹರಿಸುವುದನ್ನು ಸ್ವಾಗತಿಸಿರುವ ತಜ್ಞರು,ಖಾಸಗಿಯವರನ್ನು ಅರಣ್ಯೀಕರಣದಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ಆತಂಕವನ್ನು ವ್ಯಕ್ತಪಡಿಸಿದ್ದಾರೆ.