ಫೇಸ್‌ಬುಕ್‌ಗೆ ಕೇಂದ್ರದ ಜಾಹೀರಾತುಗಳಿಲ್ಲ: ಗೂಗಲ್ ಮತ್ತು ಟ್ವಿಟರ್‌ಗೆ ದಕ್ಕಿದ ಭಾಗ್ಯ
ಹೊಸದಿಲ್ಲಿ,ಆ.27: ಭಾರತದಲ್ಲಿ ತನ್ನ ಉದ್ಯಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಬಿಜೆಪಿ ನಾಯಕರ ದ್ವೇಷಭಾಷಣಗಳ ಬಗ್ಗೆ ಜಾಣಕುರುಡು ಪ್ರದರ್ಶಿಸುತ್ತಿರುವುದಕ್ಕಾಗಿ ವ್ಯಾಪಕ ಟೀಕೆಗೆ ಗುರಿಯಾಗಿರುವ ಫೇಸ್‌ಬುಕ್ ಮೋದಿ ಸರಕಾರದ ನೂತನ ಸಾಮಾಜಿಕ ಮಾಧ್ಯಮ ಜಾಹೀರಾತು ನೀತಿಯಡಿ ಸರಕಾರಿ ಜಾಹೀರಾತುಗಳನ್ನು ಪಡೆಯಲು ಅರ್ಹ ಕಂಪನಿಗಳ ಪಟ್ಟಿಯಲ್ಲಿಲ್ಲ ಎಂದು Theprint.in ಸುದ್ದಿಸಂಸ್ಥೆಯು ವರದಿ ಮಾಡಿದೆ.
ನೂತನ ನೀತಿಯನ್ನು ಮೇ ತಿಂಗಳಿನಲ್ಲಿಯೇ ರೂಪಿಸಲಾಗಿತ್ತು ಮತ್ತು ಇತ್ತೀಚಿಗೆ ವಾಲ್‌ಸ್ಟ್ರೀಟ್ ಜರ್ನಲ್ ವರದಿಯೊಂದನ್ನು ಪ್ರಕಟಿಸಿದ ಬಳಿಕ ಭಾರತದಲ್ಲಿ ದ್ವೇಷಭಾಷಣಗಳನ್ನು ಫೇಸಬುಕ್ ಹೇಗೆ ನಿರ್ವಹಿಸುತ್ತಿದೆ ಎಂಬ ಬಗ್ಗೆ ವಿವಾದ ಸೃಷ್ಟಿಯಾಗುವ ಮುನ್ನವೇ ಅರ್ಹ ಕಂಪನಿಗಳನ್ನು ಪಟ್ಟಿಗೆ ಸೇರಿಸುವ ಪ್ರಕ್ರಿಯೆ ನಡೆದಿತ್ತು.
ಪಟ್ಟಿಯಲ್ಲಿ ಫೇಸ್‌ಬುಕ್ ಹೆಸರಿಲ್ಲವಾದರೂ ಗೂಗಲ್ ಮತ್ತು ಟ್ವಿಟರ್ ಸ್ಥಾನವನ್ನು ಪಡೆದುಕೊಂಡಿವೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಸಾಮಾಜಿಕ ಮಾಧ್ಯಮಗಳಿಗೆ ಸರಕಾರಿ ಜಾಹೀರಾತುಗಳ ನೀಡಿಕೆಗಾಗಿ ಮಾರ್ಗಸೂಚಿಯನ್ನು ರೂಪಿಸಲು ಈ ನೀತಿಯನ್ನು ಅಂತಿಮಗೊಳಿಸಿತ್ತು.
ಕಂಪನಿಗಳನ್ನು ಜಾಹೀರಾತುಗಳಿಗೆ ಅರ್ಹವಾಗಿಸುವ ಮಾನದಂಡಗಳನ್ನು ಈ ನೀತಿಯು ನಿಗದಿಗೊಳಿಸಿದೆ ಮತ್ತು ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲು ಆಸಕ್ತ ಕಂಪನಿಗಳು ಅರ್ಜಿಗಳನ್ನು ಸಲ್ಲಿಸಬೇಕಾಗುತ್ತದೆ. ಫೇಸ್‌ಬುಕ್‌ಗೆ ಪಟ್ಟಿ ಸಿದ್ಧಗೊಳಿಸುವ ಪ್ರಕ್ರಿಯೆಯ ಬಗ್ಗೆ ಗೊತ್ತಿಲ್ಲದಿರಬಹುದು ಮತ್ತು ಅವಕಾಶವನ್ನು ತಪ್ಪಿಸಿಕೊಂಡಿರಬಹುದು ಎಂದು ಸಚಿವಾಲಯದ ಮೂಲಗಳು ಹೇಳಿವೆ. ನೂತನ ನೀತಿಯಡಿ ಪಟ್ಟಿಯಲ್ಲಿ ಗೂಗಲ್ ಮತ್ತು ಟ್ವಿಟರ್ ಸೇರ್ಪಡೆಗೊಂಡಿರುವುದನ್ನು ಸಚಿವಾಲಯದ ವಕ್ತಾರರು ದೃಢಪಡಿಸಿದರಾದರೂ, ಫೇಸ್‌ಬುಕ್ ಪಟ್ಟಿಯಲ್ಲೇಕೆ ಸ್ಥಾನ ಪಡೆದಿಲ್ಲ ಎಂಬ ಬಗ್ಗೆ ಅವರು ವಿವರಿಸಲಿಲ್ಲ.
ನೂತನ ನೀತಿಗೆ ಮುನ್ನ ಯಾವುದೇ ಸಾಮಾಜಿಕ ಮಾಧ್ಯಮ ವೇದಿಕೆಗಳು ಕೇಂದ್ರ ಸರಕಾರದಿಂದ ನೇರವಾಗಿ ಜಾಹೀರಾತುಗಳನ್ನು ಪಡೆಯಲು ಅರ್ಹವಾಗಿರಲಿಲ್ಲ. ಆದರೆ ಸರಕಾರವು ತನ್ನ ಅಭಿಯಾನಗಳ ಪ್ರಚಾರಕ್ಕಾಗಿ ನೇಮಿಸಿಕೊಳ್ಳುವ ಖಾಸಗಿ ಸಂಸ್ಥೆಗಳು ತಮ್ಮ ಹರವನ್ನು ವಿಸ್ತರಿಸಿಕೊಳ್ಳಲು ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸಿಕೊಳ್ಳುತ್ತಿದ್ದವು.