ಕೇಂದ್ರ ಸರಕಾರದ ಅನುಮತಿಯಿಲ್ಲದೆ ಕೇಂದ್ರ ಸಚಿವ ಠಾಕೂರ್ ವಿರುದ್ಧ ಎಫ್ಐಆರ್ ಇಲ್ಲ ಎಂದ ದಿಲ್ಲಿ ಕೋರ್ಟ್

Update: 2020-08-27 18:25 GMT

 ಹೊಸದಿಲ್ಲಿ, ಆ.28: ದಿಲ್ಲಿಯ ಶಾಹೀನ್‌ ಬಾಗ್‌ ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆ ವಿರೋಧಿಸಿ ದ್ವೇಷ ಭಾಷಣದ ಮಾಡಿದ್ದ ಆರೋಪದಲ್ಲಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಹಾಗೂ ಬಿಜೆಪಿ ಸಂಸದ ಪರ್ವೇಶ್ ವರ್ಮಾ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಲು ಕೋರಿ ಸಿಪಿಎಂ ನಾಯಕಿ ಬೃಂದಾ ಕಾರಟ್ ಸಲ್ಲಿಸಿದ್ದ ಅರ್ಜಿಯನ್ನು ದಿಲ್ಲಿಯ ನ್ಯಾಯಾಲಯವು ಬುಧವಾರ ತಳ್ಳಿಹಾಕಿದೆ.

ಕಾನೂನು ಪ್ರಕಾರ ಕೇಂದ್ರ ಸಚಿವ ಹಾಗೂ ಸಂಸದರ ವಿರುದ್ಧ ಎಫ್‌ಐಆರ್ ದಾಖಲಿಸುವುದಕ್ಕೆ ಕೇಂದ್ರ ಸರಕಾರದ ಅನುಮತಿ ಅಗತ್ಯವಿರುವುದರಿಂದ ಕಾರಟ್ ಅವರ ಅರ್ಜಿಯನ್ನು ತಿರಸ್ಕರಿಸಿರುವುದಾಗಿ ಅವರು ಹೇಳಿದ್ದಾರೆ.

 ಠಾಕೂರ್ ಹಾಗೂ ವರ್ಮಾ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ದಿಲ್ಲಿ ಪೊಲೀಸರಿಗೆ ಸೂಚನೆ ನೀಡಬೇಕೆಂದು ಕೋರಿ ಬೃಂದಾ ಕಾರಟ್ ಹಾಗೂ ಕೆ.ಎಂ. ತಿವಾರಿ ದಿಲ್ಲಿ ಪೊಲೀಸರಿಗೆ ದೂರು ನೀಡಿದ್ದರು.

‘‘ ಆರೋಪಕ್ಕೆ ಸಂಬಂಧಿಸಿ ಪ್ರತಿವಾದಿಗಳ ಮೇಲೆ ಕಾನೂನುಕ್ರಮ ಕೈಗೊಳ್ಳಲು ದೂರುದಾರರು, ಸಂಬಂಧಪಟ್ಟ ಪ್ರಾಧಿಕಾರ (ಕೇಂದ್ರ ಸರಕಾರ)ದಿಂದ ಅನುಮತಿಯನ್ನು ಪಡೆದಿಲ್ಲ. ಹೀಗಾಗಿ ಈ ದೂರನ್ನು ವಜಾಗೊಳಿಸಲಾಗಿದೆ’’ ಎಂದು ನ್ಯಾಯಾಲಯ ತಿಳಿಸಿದೆ.

‘‘ ಸಿಎಎ ಪ್ರತಿಭಟನೆಯ ವಿರುದ್ಧ ಠಾಕೂರ್ ಹಾಗೂ ವರ್ಮಾ ಜನರನ್ನು ಪ್ರಚೋದಿಸಿದ್ದರು. ಇದರ ಪರಿಣಾಮವಾಗಿ ದಿಲ್ಲಿಯ ಎರಡು ಪ್ರತಿಭಟನಾ ಸ್ಥಳಗಳಲ್ಲಿ ಗುಂಡು ಹಾರಾಟದ ಘಟನೆಗಳು ನಡೆದಿದ್ದವು’’ ಎಂದು ಕಾರಟ್ ದೂರಿನಲ್ಲಿ ಹೇಳಿದ್ದರು.

  ಠಾಕೂರ್ ಹಾಗೂ ವರ್ಮಾ ವಿರುದ್ಧ ತಾನು ದಿಲ್ಲಿ ಪೊಲೀಸ್ ಆಯುಕ್ತ ಹಾಗೂ ಸಂಸತ್ ‌ಭವನ ರಸ್ತೆಯ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದರೂ, ಅವರು ಅದಕ್ಕೆ ಪ್ರತಿಕ್ರಿಯಿಸಿಲ್ಲವೆಂದು ಕಾರಟ್ ಆಪಾದಿಸಿದ್ದರು.

    ಅನುರಾಗ್ ಠಾಕೂರ್ ಅವರು ಜನವರಿ 27ರಂದು ಪಾಲ್ಗೊಂಡಿದ್ದ ಸಾರ್ವಜನಿಕ ರ್ಯಾಲಿಯಲ್ಲಿ, ಸಿಎಎ ವಿರೋಧಿ ಪ್ರತಿಭಟನಕಾರರ ವಿರುದ್ಧ ಭಾಷಣ ಮಾಡಿದ್ದು, ‘‘ ದೇಶದ್ರೋಹಿಗಳಿಗೆ ಗುಂಡಿಕ್ಕಿ’’ ಎಂದು ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದ್ದರು ಎಂದು ಕಾರಟ್ ಆಪಾದಿಸಿದ್ದರು. ಸಂಸದ ವರ್ಮ ಕೂಡಾ ಜನವರಿ 28ರಂದು ಸಿಎಎ ವಿರೋಧಿ ಪ್ರತಿಭಟನಕಾರರ ವಿರುದ್ಧ ನಿಂದನಾತ್ಮಕ ಭಾಷಣ ಮಾಡಿದ್ದರು ಎಂದು ದೂರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News