ಕೋವಿಡ್ ಬಿಕ್ಕಟ್ಟಿನ ಕಾರಣಕ್ಕೆ ಚುನಾವಣೆ ಮುಂದೂಡಿಕೆ ಅಸಾಧ್ಯ: ಸುಪ್ರೀಂಕೋರ್ಟ್
ಹೊಸದಿಲ್ಲಿ, ಆ.28: ಚುನಾವಣೆ ಮುಂದೂಡಿಕೆ ಅಥವಾ ಸ್ಥಗಿತಕ್ಕೆ ಕೊರೋನ ವೈರಸ್ ಬಿಕ್ಕಟ್ಟು ಸೂಕ್ತ ಕಾರಣವಾಗದು ಎಂದು ಇಂದು ತೀರ್ಪು ನೀಡಿರುವ ಸುಪ್ರೀಂಕೋರ್ಟ್ ಈ ತಿಂಗಳಾರಂಭದಲ್ಲಿ ನಡೆಯಬೇಕಿರುವ ಬಿಹಾರ ವಿಧಾನಸಭಾ ಚುನಾವಣೆ ರದ್ದತಿ ಕೋರಿ ಸಲ್ಲಿಸಿರುವ ಅರ್ಜಿಗಳನ್ನು ತಿರಸ್ಕರಿಸಿದೆ.
ಚುನಾವಣೆಯನ್ನು ರದ್ದುಪಡಿಸಲು ಹಾಗೂ ಚುನಾವಣಾ ಆಯೋಗದ ಅಧಿಕಾರದೊಂದಿಗೆ ಮಧ್ಯಪ್ರವೇಶಿಸಲು ಕೋವಿಡ್ ಒಂದು ಸೂಕ್ತ ಕಾರಣವಾಗದು ಎಂದಿರುವ ಸುಪ್ರೀಂಕೋರ್ಟ್,ಬಿಹಾರದ ಚುನಾವಣೆ ದಿನಾಂಕಗಳ ಕುರಿತು ಯಾವುದೇ ಅಧಿಸೂಚನೆ ಪ್ರಕಟಿಸದ ಕಾರಣ ಅರ್ಜಿಗಳನ್ನು ಅಕಾಲಿಕ ಎಂದು ಕರೆಯುವುದಾಗಿ ತಿಳಿಸಿದೆ.
ಮುಖ್ಯ ಚುನಾವಣಾ ಆಯೋಗಕ್ಕೆ ಏನು ಮಾಡಬೇಕೆಂದು ಹೇಳಲು ಈ ನ್ಯಾಯಾಲಯಕ್ಕೆ ಸಾಧ್ಯವಿಲ್ಲ.ಮುಖ್ಯ ಚುನಾವಣಾ ಆಯೋಗವೇ ಎಲ್ಲವನ್ನು ಪರಿಶೀಲಿಸಲಿದೆ .ಚುನಾವಣೆಗೆ ಸಂಬಂಧಿಸಿ ಯಾವುದೇ ಅಧಿಸೂಚನೆ ಹೊರಡಿಸಲಾಗಿಲ್ಲ. ಚುನಾವಣಾ ಆಯೋಗಕ್ಕೆ ಚುನಾವಣೆ ನಡೆಸಬೇಡಿ ಎಂದು ಹೇಗೆ ಹೇಳಲು ಸಾಧ್ಯ?ಚುನಾವಣೆ ಮುಂದೂಡಲು, ರದ್ದುಪಡಿಸಲು ಕೋವಿಡ್ ಸೂಕ್ತ ಕಾರಣವಾಗದು ಎಂದು ನ್ಯಾಯಾಧೀಶರು ಹೇಳಿದ್ದಾರೆ.
ನವೆಂಬರ್‌ನಲ್ಲಿ ನಿಗದಿಯಾಗಿರುವ ಬಿಹಾರ ಚುನಾವಣೆಯನ್ನು ಸ್ಥಗಿತಗೊಳಿಸುವ ಕುರಿತು ಮಧ್ಯಪ್ರವೇಶಿಸುವಂತೆ ಅರ್ಜಿದಾರ ಅವಿನಾಶ್ ಠಾಕೂರ್ ಮನವಿ ಸಲ್ಲಿಸಿದ್ದರು. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜಕೀಯ ಲಾಭಕ್ಕಾಗಿ ಕೊರೋನದ ಹೊರತಾಗಿಯೂ ಚುನಾವಣೆಗೆ ಹಂಬಲಿಸುತ್ತಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಆರ್‌ಜೆಡಿ, ಕಾಂಗ್ರೆಸ್ ಪಕ್ಷಗಳಲ್ಲದೆ, ಜೆಡಿಯು ಮಿತ್ರ ಪಕ್ಷ ಎಲ್‌ಜೆಪಿಯ ನಾಯಕ ಚಿರಾಗ್ ಪಾಸ್ವಾನ್ ಕೂಡ ಬಿಹಾರ ಚುನಾವಣೆ ರದ್ದುಪಡಿಸಬೇಕೆಂದು ಆಗ್ರಹಿಸಿದ್ದರು