ತಾನು ನೆಟ್ಟಿದ್ದ ಮರಕ್ಕೆ ಕೊಡಲಿ ಏಟು: ಅಳಲು ತೋಡಿಕೊಂಡ ಬಾಲಕನಿಗೆ ಸಸ್ಯಗಳನ್ನು ಉಡುಗೊರೆ ನೀಡಿದ ಕೇರಳ ಪೊಲೀಸರು

Update: 2020-08-28 08:08 GMT
ಚಿತ್ರ ಕೃಪೆ: thenewsminute.com

ತಿರುವನಂತಪುರಂ : ಕೇರಳದ ಎರ್ಣಾಕುಳಂ ಜಿಲ್ಲೆಯ ಆರನೇ ತರಗತಿ ಬಾಲಕ ಪವನ್ ನಾಶ್ ತಾನು ನಾಲ್ಕನೇ ತರಗತಿಯಲ್ಲಿರುವಾಗ ಶಾಲೆಯಲ್ಲಿ ತನಗೆ ನೀಡಲಾಗಿದ್ದ ನೆಲ್ಲಿಕಾಯಿ ಗಿಡವನ್ನು ಮನೆಯಂಗಳದಲ್ಲಿ ಪ್ರೀತಿಯಿಂದ ನೆಟ್ಟು ಪೋಷಿಸಿದ್ದ. ಆದರೆ ಇತ್ತೀಚೆಗೆ ಆತ ಮನೆಯಲ್ಲಿಲ್ಲದೇ ಇದ್ದಾಗ ಯಾರೋ ಆತ ಬೆಳೆಸಿದ್ದ ನೆಲ್ಲಿಕಾಯಿ ಮರವನ್ನು  ಕಡಿದು ಬಿಟ್ಟಿದ್ದರಲ್ಲದೆ ಅದರ ಕಾಂಡದ ಒಂದು ಸಣ್ಣ ತುಂಡು ಮಾತ್ರ ಬಾಕಿಯುಳಿದಿತ್ತು. ಮನೆಗೆ ಬಂದಾಗ ತನ್ನ ಪ್ರೀತಿಯ ನೆಲ್ಲಿಕಾಯಿ ಮರ ಕಾಣದೇ ಇದ್ದಾಗ 12 ವರ್ಷದ ಪವನ್ ಅಳಲು ಆರಂಭಿಸಿದ್ದನಲ್ಲದೆ ಯಾರು ಎಷ್ಟೇ ಸಂತೈಸಿದರೂ ಆತ ಸಮಾಧಾನಗೊಂಡಿರಲಿಲ್ಲ. ಆದರೆ ಮರುದಿನ ಅವರ ಮನೆಗೆ ನಿಜರಕ್ಕಲ್ ಪೊಲೀಸ್ ಠಾಣೆಯ ಅಧಿಕಾರಿಗಳು ಒಂಬತ್ತು ಗಿಡಗಳೊಂದಿಗೆ ಆಗಮಿಸಿದಾಗ ಮನೆಯವರಿಗೆ ಅಚ್ಚರಿ.

ಬಾಲಕ ಹಿಂದಿನ ದಿನ ಕೇರಳ ಸರಕಾರದ ಮಕ್ಕಳ ಸಹಾಯವಾಣಿ ಚಿರಿ (ನಗು) ಸಂಖ್ಯೆಗೆ ಕರೆ ಮಾಡಿ ತನ್ನ ನೋವು ತೋಡಿಕೊಂಡಿದ್ದ. ಚಿರಿ ಸಿಬ್ಬಂದಿ ಈ ವಿಚಾರ ತಮ್ಮ ಹಿರಿಯಾಧಿಕಾರಿಗಳಿಗೆ ತಿಳಿಸಿದ್ದರು. ಇದು ಕೇರಳ ಐಜಿಪಿ ಪಿ ವಿಯನ್ ಅವರ ಕಿವಿಗೂ ಬಿದ್ದು ಅವರ ಸೂಚನೆಯಂತೆ ಪೊಲೀಸರು ಪವನ್ ನಿವಾಸಕ್ಕೆ ಆಗಮಿಸಿ ನೆಲ್ಲಿಕಾಯಿ ಸಹಿತ ಪೇರಳೆ ಹಾಗೂ ಹುಣಸೆಹಣ್ಣಿನ ಗಿಡಗಳನ್ನು ಆತನಿಗೆ ಉಡುಗೊರೆಯಾಗಿ ನೀಡಿದರು.

ಅಷ್ಟೇ ಅಲ್ಲದೆ ಈ ಸುದ್ದಿ ತಿಳಿದ ಕೊಚ್ಚಿಯ ಸ್ಮಾರ್ಟ್ ಕ್ರೌಡ್ ಎಂಬ ಸಿಸಿಟಿವಿ ಸಂಸ್ಥೆ ಆತನ ಮನೆಗೆ ಸಿಸಿಟಿವಿಯನ್ನು ಉಚಿತವಾಗಿ ನೀಡಿದೆ. ಇನ್ನು ಮುಂದೆ ಪವನ್ ಪೋಷಿಸಿದ ಗಿಡಗಳಿಗೆ ಯಾರೂ ಹಾನಿಯೆಸಗದಂತೆ ಈ ಸಿಸಿಟಿವಿ ಕಣ್ಗಾವಲಿಡಲಿದೆ.

ಅಷ್ಟಕ್ಕೂ ಪವನ್‍ಗೆ ಚಿರಿ ಸಹಾಯವಾಣಿಯ ಸಂಖ್ಯೆ ಹೇಗೆ ದೊರಕಿತ್ತು ಎಂಬ ಕಥೆಯೂ ಸ್ವಾರಸ್ಯಕರ. ಆತ ತನ್ನ ಅಕ್ಕನ ಫೋನ್ ಪಡೆದು ಅದರಲ್ಲಿ ಸ್ಟೂಡೆಂಟ್ಸ್ ಪೊಲೀಸ್ ಕೆಡೆಟ್ ಆಗಿರುವ ಹಾಗೂ ಪ್ರೊಫೈಲ್ ಪಿಕ್ಚರಿನಲ್ಲಿ ಪೊಲೀಸ್ ಸಮವಸ್ತ್ರ ಧರಿಸಿರುವ ಆಕೆಯ ಶಿಕ್ಷಕರ ಫೋಟೋ ನೋಡಿ ಪವನ್ ಅವರಿಗೆ ಕರೆ ಮಾಡಿದ್ದ. ಅವರು ಚಿರಿ ದೂರವಾಣಿ ಸಂಖ್ಯೆಯನ್ನು ಆತನಿಗೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News