×
Ad

ಜೆಇಇ, ನೀಟ್ ಪರೀಕ್ಷೆ ಕುರಿತ ತೀರ್ಪು ಮರುಪರಿಶೀಲನೆ ಕೋರಿ ಸುಪ್ರೀಂ ಮೊರೆ ಹೋದ 6 ರಾಜ್ಯಗಳು

Update: 2020-08-28 13:18 IST

ಹೊಸದಿಲ್ಲಿ, ಆ.28: ಕೊರೋನ ವೈರಸ್ ಅಟ್ಟಹಾಸದ ನಡುವೆಯೂ ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್ ಹಾಗೂ ಐಐಟಿಗೆ ಪ್ರವೇಶ ಪಡೆಯಲು ಜೆಇಇ ಪರೀಕ್ಷೆ ನಡೆಸುವುದಕ್ಕೆ ಕೇಂದ್ರ ಸರಕಾರಕ್ಕೆ ಅನುಮತಿ ನೀಡಿರುವ ಆದೇಶವನ್ನು ಮರು ಪರಿಶೀಲಿಸುವಂತೆ ಕೋರಿ ವಿಪಕ್ಷಗಳ ಆಡಳಿತವಿರುವ ಆರು ರಾಜ್ಯಗಳು ಸುಪ್ರೀಂಕೋರ್ಟ್ ಮೊರೆ ಹೋಗಿವೆ.

ಸುಪ್ರೀಂಕೋರ್ಟ್ ಕದ ತಟ್ಟಿರುವ ಆರು ರಾಜ್ಯಗಳೆಂದರೆ: ಪಶ್ಚಿಮಬಂಗಾಳ,ಜಾರ್ಖಂಡ್, ರಾಜಸ್ಥಾನ, ಛತ್ತೀಸ್‌ಗಢ, ಪಂಜಾಬ್ ಹಾಗೂ ಮಹಾರಾಷ್ಟ್ರ. ಪ್ರತಿಯೊಂದು ರಾಜ್ಯವನ್ನು ಆಯಾ ರಾಜ್ಯದ ಸಚಿವರು ಪ್ರತಿನಿಧಿಸಲಿದ್ದಾರೆ.

ಎರಡು ನಿರ್ಣಾಯಕ ಪರೀಕ್ಷೆಗಳನ್ನು ಮುಂದೂಡಬೇಕೆಂದು ಕೋರಿ ಒಂದೇ ರಾಜ್ಯದ 11 ವಿದ್ಯಾರ್ಥಿಗಳು ಸಲ್ಲಿಸಿರುವ ಅರ್ಜಿಯನ್ನು ಆಗಸ್ಟ್ 17ರಂದು ತಿರಸ್ಕರಿಸಿದ್ದ ನ್ಯಾಯಾಲಯ,ವಿದ್ಯಾರ್ಥಿಗಳ ವೃತ್ತಿ ಜೀವನವನ್ನು ಗೊಂದಲದಲ್ಲಿ ಸಿಲುಕಿಸಲಾಗುವುದಿಲ್ಲ ಎಂದು ಹೇಳಿತ್ತು.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಬುಧವಾರ ಆನ್‌ಲೈನ್‌ನಲ್ಲಿ ನಡೆಸಿದ್ದ ಸಭೆಯಲ್ಲಿ ಕೇಂದ್ರ ಸರಕಾರ ವಿದ್ಯಾರ್ಥಿಗಳಿಗೆ ಸಾರಿಗೆ ಹಾಗೂ ವಸತಿ ವ್ಯವಸ್ಥೆ ಸಹಿತ ತಮ್ಮ ಮೇಲೆ ಪರೀಕ್ಷೆಯನ್ನು ನಡೆಸುವ ಹೊಣೆಗಾರಿಕೆಯನ್ನು ನೀಡುತ್ತದೆ. ರಾಜ್ಯಗಳ ಮೇಲೆ ಆರೋಪ ಹೊರಿಸಲಾಗುತ್ತದೆ ಎಂದು ಮುಖ್ಯಮಂತ್ರಿಗಳು ಆತಂಕ ವ್ಯಕ್ತಪಡಿಸಿದ್ದರು.

ಜೆಇಇ ಪರೀಕ್ಷೆ ಸೆಪ್ಟಂಬರ್ 1ರಿಂದ 6 ಹಾಗೂ ನೀಟ್ ಪರೀಕ್ಷೆ ಸೆಪ್ಟಂಬರ್ 13ರಂದು ನಿಗದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News