ಜಪಾನ್ ಪ್ರಧಾನಮಂತ್ರಿ ಶಿಂಜೊ ಅಬೆ ರಾಜೀನಾಮೆ

Update: 2020-08-28 16:39 GMT

  ಟೋಕಿಯೊ,ಆ.28: ಜಪಾನ್ ಪ್ರಧಾನಿ ಶಿಂಜೊ ಅಬೆ ಅವರು ಶುಕ್ರವಾರ ರಾಜೀನಾಮೆ ಘೋಷಿಸಿದ್ದಾರೆ. ತನ್ನನ್ನು ದೀರ್ಘಸಮಯದಿಂದ ಕಾಡುತ್ತಿರುವ ಅನಾರೋಗ್ಯವು ಉಲ್ಬಣಗೊಂಡಿರುವುದರಿಂದ ತಾನು ಅಧಿಕಾರದಿಂದ ಕೆಳಗಿಳಿಯುತ್ತಿರುವುದಾಗಿ ಅವರು ಹೇಳಿದ್ದಾರೆ. 65 ವರ್ಷ ವಯಸ್ಸಿನ ಶಿಂಜೊ ಅಬೆ ಅವರು ಜಪಾನ್‌ನಲ್ಲಿ ಅತ್ಯಂತ ದೀರ್ಘಾವಧಿಯ ಆಳ್ವಿಕೆ ನಡೆಸಿದ ಪ್ರಧಾನಿ ಎಂಬ ಹೆಗ್ಗಳಿಕೆಗೆ  ಪಾತ್ರರಾಗಿದ್ದಾರೆ.

ಈ ವರ್ಷದ ಬೇಸಿಗೆಯಲ್ಲಿ ಅಬೆ ಅವರು ಟೋಕಿಯೋದ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಅವರ ಆರೋಗ್ಯ ಪರಿಸ್ಥಿತಿಯ ಬಗ್ಗೆ ಮಾಧ್ಯಮಗಳು ಆತಂಕ ವ್ಯಕ್ತಪಡಿಸಿದ್ದವು.

  ರಾಜೀನಾಮೆ ಘೋಷಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅಬೆ ಅವರು ತಾನು ಹದಿಹರೆಯದವರಿದ್ದಾಗ ಅವರು ಅಲ್ಸರೇಟಿವ್ ಕೊಲಿಟಿಸ್ ಎಂಬ ಕಾಯಿಲೆಯೆಂದ ಬಳಲುತಿದ್ದೆ. ಆದರೆ ಸೂಕ್ತ ಚಿಕಿತ್ಸೆಯ ಬಳಿಕ ಆ ರೋಗವು ನಿಯಂತ್ರಣದಲಿತ್ತೆಂದು ಅವರು ತಿಳಿಸಿದ್ದಾರೆ. ಈಗ ತಾನು ಈ ಕಾಯಿಲೆಯನ್ನು ನಿಯಂತ್ರಿಸಲು ಹೊಸ ವಿಧಾನದ ಚಿಕಿತ್ಸೆಯನ್ನು ಪಡೆಯುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಆದಾಗ್ಯೂ ಈ ಚಿಕಿತ್ಸೆಯಿಂದ ತಾನು ಗುಣಮುಖಗೊಳ್ಳುವೆನೆಂಬ ಬಗ್ಗೆ ಖಾತರಿಯಿಲ್ಲ. ಹೀಗಾಗಿ ತಾನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿರುವುದಾಗಿ ಅಬೆ ಹೇಳಿದ್ದಾರೆ.

   ‘‘ನನ್ನ ಗುರಿಗಳನ್ನು ಪೂರ್ತಿಗೊಳಿಸದೆ ನನ್ನ ಉದ್ಯೋಗವನ್ನು ತೊರೆಯುತ್ತಿರುವುದರಿಂದ ನನಗೆ ಕರುಳು ಕಿವುಚಿದಂತಾಗುತ್ತಿದೆ’’ ಎಂದು ಅಬೆ ತಿಳಿಸಿದ್ದಾರೆ. ಉತ್ತರ ಕೊರಿಯದ ವಶದಲ್ಲಿರುವ ಜಪಾನಿಯರನ್ನು ಅಪಹರಣ ಪ್ರಕರಣ ಹಾಗೂ ರಶ್ಯದ ಜೊತೆಗಿನ ಗಡಿವಿವಾದವನ್ನು ಬಗೆಹರಿಸಲು ಸಾಧ್ಯವಾಗುತ್ತಿಲ್ಲ ಎಂದು ಅಬೆ ಶುಕ್ರವಾರ ತಿಳಿಸಿದ್ದಾರೆ.

  ಈ ವರ್ಷದ ಆರಂಭದಲ್ಲಿ ತನ್ನ ಆರೋಗ್ಯ ಸಮಸ್ಯೆ ನಿಯಂತ್ರಣದಲ್ಲಿತ್ತು. ಆದರೆ ಜೂನ್‌ನಲ್ಲಿ ಆರೋಗ್ಯ ತಪಾಸಣೆಗೊಳಗಾದ ಸಂದರ್ಭದಲ್ಲಿ ರೋಗವು ಮರುಕಳಿಸಿರುವುದು ಪತ್ತೆಯಾಗಿತ್ತು ಎಂದವರು ಹೇಳಿದ್ದಾರೆ.

 ಅಬೆ ಅವರ ಅಧಿಕಾರಾವಧಿ 2021ರಲ್ಲಿ ಪೂರ್ಣಗೊಳ್ಳುವುದರಲ್ಲಿತ್ತು. ಪಕ್ಷವು ನೂತನ ಪ್ರಧಾನಿಯನ್ನು ಆಯ್ಕೆ ಮಾಡುವವರೆಗೂ ಅವರು ಅಧಿಕಾರದಲ್ಲಿ ಮುಂದುವರಿಯುವ ನಿರೀಕ್ಷೆಯಿದೆ.

ಆರ್ಥಿಕ ಬಲದ ಜೊತೆಗೆ ಜಪಾನ್‌ನ ಮಿಲಿಟರಿ ಸಾಮರ್ಥ್ಯ ಹೆಚ್ಚಿಸಲು ಶ್ರಮಿಸಿದ ಅಬೆ

 ಲಿಬರಲ್ ಡೆಮಾಕ್ರಾಟಿಕ್ ಪಕ್ಷದ ನಾಯಕನಾದ ಶಿಂರೊ ಅಬೆ ಅವರು 2006ರಲ್ಲಿ ಜಪಾನ್ ಪ್ರಧಾನಿಯಾಗಿ ಮೊದಲ ಬಾರಿಗೆ ಅಧಿಕಾರ ಸ್ವೀಕರಿಸಿದರು. ಆಗ ಅವರಿಗೆ 52 ವರ್ಷ ವಯಸ್ಸಾಗಿತ್ತು. ಆದಾಗ್ಯೂ ಅನಾರೋಗ್ಯದ ಕಾರಣದಿಂದಾಗಿ ಅವರು ವರ್ಷ ತುಂಬುವುದರೊಳಗೆ ರಾಜೀನಾಮೆ ನೀಡಬೇಕಾಯಿತು.

 2012ರ ಡಿಸೆಂಬರ್‌ನಲ್ಲಿ ಅಬೆ ಮತ್ತೆ ಅಧಿಕಾರಕ್ಕೇರಿದರು. ಅಪ್ಪಟ ರಾಷ್ಟ್ರೀಯವಾದಿ ಕಾರ್ಯಸೂಚಿಯನ್ನು ಹೊಂದಿದ್ದ ಅಬೆ, ದೇಶದ ಆರ್ಥಿಕತೆಗೆ ಚೈತನ್ಯತುಂಬಲು ಹಲವಾರು ಕ್ರಮಗಳನ್ನು ಪ್ರಕಟಿಸಿದರು. ಆನಂತರ ಸತತ ಆರು ರಾಷ್ಟ್ರೀಯ ಚುನಾವಣೆಗಳಲ್ಲಿ ಅವರು ವಿಜಯಗಳಿಸಿದರು. ತನ್ನ ಆಡಳಿತಾವಧಿಯುದ್ದಕ್ಕೂ ಅವರು ಅಧಿಕಾರದ ಮೇಲೆ ಸಂಪೂರ್ಣ ಹಿಡಿತವಿಟ್ಟುಕೊಳ್ಳುವಲ್ಲಿ ಸಫಲರಾಗಿದ್ದಾರೆ. ಜಪಾನ್‌ನ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿಯೂ ಅಬೆ ಅನೇಕ ಉಪಕ್ರಮಗಳನ್ನು ಕೈಗೊಂಡರು. ಉತ್ತರ ಕೊರಿಯ ಹಾಗೂ ಚೀನಾದಿಂದ ಭದ್ರತೆಗೆ ಬೆದರಿಕೆಯಿರುವ ಹಿನ್ನೆಲೆಯಲ್ಲಿ ಅವರು ಅಮೆರಿಕದ ಜೊತೆ ರಕ್ಷಣಾ ಮೈತ್ರಿಯನ್ನು ಕೂಡಾ ಏರ್ಪಡಿಸಿಕೊಂಡಿದ್ದರು.

 ಜಪಾನನ್ನು ಬಲಿಷ್ಠವಾದ ಸೇನೆ ಸಾಮರ್ಥ್ಯವನ್ನು ಹೊಂದಿರುವ ಹಾಗೂ ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ದೊಡ್ಡ ಪಾತ್ರವನ್ನು ವಹಿಸಬಲ್ಲಂತಹ ಒಂದು ಸಹಜ ಹಾಗೂ ಸುಂದರ ರಾಷ್ಟ್ರವಾಗಿ ರೂಪಿಸುವುದೇ ತನ್ನ ಗುರಿಯೆಂದು ಅಬೆ ತನ್ನ ರಾಜಕೀಯ ಭಾಷಣಗಳಲ್ಲಿ ಘೋಷಿಸಿಕೊಳ್ಳುತ್ತಿದ್ದರು.

ಸತತ 2799 ದಿನಗಳ ಕಾಲ ಅಧಿಕಾರದಲ್ಲಿರುವ ಮೂಲಕ ಅಬೆ ಅವರು ಜಪಾನ್‌ನ ಅತ್ಯಂತ ದೀರ್ಘಾವಧಿಯ ಸೇವೆ ಸಲ್ಲಿಸಿದ ಪ್ರಧಾನಿಯೆಂಬ ದಾಖಲೆ ನಿರ್ಮಿಸಿದ್ದಾರೆ. ಅವರ ಮುತ್ತಾತ ಐಸಾಕೊ ಸಾಟೊ ಅವರು 1964ರಿಂದ 1972ರವರೆಗೆ ಪ್ರಧಾನಿಯಾಗಿದ್ದು, 2798ದಿನಗಳ ಕಾಲ ಅಧಿಕಾರದಲ್ಲಿದ್ದರು.

ವಂಶಪಾರಂಪರ್ಯದಿಂದಲೇ ರಾಜಕಾರಣವು ಅಬೆ ಅವರಲ್ಲಿ ರಕ್ತಗತವಾಗಿತ್ತು.ಅವರ ತಾತ, ನೊಬುಸುಕೆ ಕಿಶಿ ಅವರು ಕೂಡಾ ಪ್ರಧಾನಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News