×
Ad

ಲಡಾಖ್‌ನ ಈಗಿನ ಸ್ಥಿತಿ 1962ರಂತೆಯೇ ಗಂಭೀರವಾದುದು: ಶಿವಸೇನೆ

Update: 2020-08-28 19:12 IST

ಮುಂಬೈ, ಆ.28: ಲಡಾಖ್‌ನಲ್ಲಿ ಪ್ರಸ್ತುತ ನೆಲೆಸಿರುವ ಪರಿಸ್ಥಿತಿ 1962ರಲ್ಲಿದ್ದ ಸ್ಥಿತಿಯಷ್ಟೇ ಗಂಭೀರವಾಗಿದೆ. ಆದರೆ ಚರಿತ್ರೆ ಪುನರಾವರ್ತನೆಗೆ ಭಾರತದ ಸೇನೆ ಅವಕಾಶ ನೀಡದು ಎಂದು ಶಿವಸೇನೆ ಹೇಳಿದೆ. ಭಾರತ ಈಗ ಹಿಂದಿಗಿಂತಲೂ ಬಲಿಷ್ಟ ಎಂದು ಚೀನಾ ಒಪ್ಪಿಕೊಂಡಿದ್ದರೂ, ಆ ದೇಶ ಅತಿಕ್ರಮಣ ಹಾಗೂ ಭೂ ಕಬಳಿಕೆ ಚಟುವಟಿಕೆಯನ್ನು ಕಡಿಮೆಗೊಳಿಸಿಲ್ಲ ಎಂದು ಶಿವಸೇನೆಯ ಮುಖವಾಣಿ ‘ಸಾಮ್ನ’ದಲ್ಲಿ ಹೇಳಲಾಗಿದೆ.

ಚೀನೀ ಡ್ರಾಗನ್‌ನ ಕಾರ್ಯವೂ ಸ್ಥಗಿತಗೊಂಡಿಲ್ಲ, ಉದ್ದೇಶವೂ ಬದಲಾಗಿಲ್ಲ. ಉಭಯ ಸೇನೆಗಳ ಮಧ್ಯೆ ಮಾತುಕತೆ ನಡೆಯುತ್ತಿರಬಹುದು, ಆದರೆ ಲಡಾಖ್ ಗಡಿಭಾಗದಲ್ಲಿ ಎರಡೂ ಸೇನೆಗಳು ಬಂದೂಕು ಸಜ್ಜುಗೊಳಿಸಿ ನಿಂತಿವೆ. ಚೀನಾ ಹಿಂದೆ ಸರಿಯಬೇಕು ಎಂದು ಭಾರತ, ಭಾರತವೇ ಮೊದಲು ಹಿಂದೆ ಸರಿಯಲಿ ಎಂದು ಚೀನಾ ಹೇಳುತ್ತಿದೆ. ಲಡಾಖ್ ಭಾಗದಲ್ಲಿ ಚೀನಾ ಜೂನ್‌ನಲ್ಲಿ ಕೆಲ ಕಿ.ಮೀ.ನಷ್ಟು ಒಳನುಗ್ಗಿದ ಬಳಿಕವೇ ಆ ದೇಶದ ಆಕ್ರಮಣಕಾರೀ ಉದ್ದೇಶದ ಬಗ್ಗೆ ತಿಳಿದು ಬಂದಿದೆ ಎಂದು ಶಿವಸೇನೆ ಹೇಳಿದೆ.

ಉದ್ವಿಗ್ನತೆ ನೆಲೆಸಿದ್ದ ಪ್ರದೇಶದಿಂದ ಚೀನಾ ಕೆಲಹೆಜ್ಜೆ ಹಿಂದೆ ಸರಿದಿದೆ ಎಂಬುದು ಸ್ಪಷ್ಟವಾದ ಬಳಿಕ, ಚೀನಾ ಸ್ವಲ್ಪ ಮೆದುವಾಗಿದೆ ಎಂಬ ಭಾವನೆಯಿಂದ ದೇಶದ ಜನತೆ ನಿರಾಳವಾಗಿದ್ದರು. ಆದರೆ ಈಗ ವಿದೇಶಾಂಗ ಸಚಿವ ಜೈಶಂಕರ್ ನೀಡಿರುವ ಹೇಳಿಕೆಯನ್ನು ಗಮನಿಸಿದರೆ, ಗಡಿ ಬಿಕ್ಕಟ್ಟು ಮುಂದುವರಿದಿರುವುದು ಸ್ಪಷ್ಟವಾಗಿದೆ ಎಂದು ‘ಸಾಮ್ನ’ದ ಲೇಖನದಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News