ಮಧ್ಯಪ್ರದೇಶ: ಹಸುಗಳ ಪೋಷಣೆಗೆ ದೈನಂದಿನ ವೆಚ್ಚ 1.6 ರೂ. ನಿಗದಿಗೊಳಿಸಿದ ಸರಕಾರ

Update: 2020-08-28 13:47 GMT

ಭೋಪಾಲ, ಆ.28: ರಾಜ್ಯದಲ್ಲಿರುವ 1,300 ಗೋಶಾಲೆಗಳಲ್ಲಿ ಆಶ್ರಯ ಪಡೆದಿರುವ ಸುಮಾರು 1.8 ಲಕ್ಷಕ್ಕೂ ಅಧಿಕ ಹಸುಗಳ ಪಾಲನೆ ಪೋಷಣೆಗೆ 2020-21ರ ಆರ್ಥಿಕ ವರ್ಷಕ್ಕೆ ಮಧ್ಯಪ್ರದೇಶ ಸರಕಾರ ಒಟ್ಟು 11 ಕೋಟಿ ರೂ. ಮೊತ್ತ ನಿಗದಿಗೊಳಿಸಿದೆ.

ಅಂದರೆ ಪ್ರತೀ ಹಸುವಿನ ಪಾಲನೆಗೆ ದೈನಂದಿನ ವೆಚ್ಚ 1ರೂ. 60 ಪೈಸೆ ಎಂದು ಸರಕಾರ ನಿಗದಿಗೊಳಿಸಿರುವುದಾಗಿ ವರದಿಯಾಗಿದೆ. ಕಳೆದ ವರ್ಷ 132 ಕೋಟಿ ರೂ. ನಿಗದಿಗೊಳಿಸಿದ್ದ ಸರಕಾರ ಈ ಬಾರಿ ಅನುದಾನದಲ್ಲಿ ಭಾರೀ ಕಡಿತಗೊಳಿಸಿದೆ. ಪಶು ಆಹಾರ ಖರೀದಿ, ಗೋಶಾಲೆಗಳ ನಿರ್ವಹಣೆ, ಹಸುಗಳ ವೈದ್ಯಕೀಯ ವೆಚ್ಚ, ಬಯೋಗ್ಯಾಸ್ ಸ್ಥಾವರಗಳ ನಿರ್ವಹಣೆ ಇತ್ಯಾದಿಗಳನ್ನು ಪರಿಗಣಿಸಿದರೆ ಪ್ರತೀ ಹಸುವಿಗೆ ಹಸುವಿಗೆ ದಿನಾ 200 ರೂ.ಯಿಂದ 250 ರೂ.ವರೆಗೆ ಖರ್ಚು ಬರುತ್ತದೆ. ಆದರೆ ಸರಕಾರ ಕೇವಲ 1 ರೂ.60 ಪೈಸೆ ಮಾತ್ರ ನೀಡುತ್ತದೆ. ಕರುವಿಗೆ ಒಂದು ಬಾರಿ ಆಹಾರ ಒದಗಿಸಲೂ ಈ ಮೊತ್ತ ಸಾಕಾಗದು. ಇದರಿಂದ ಗೋಶಾಲೆಗಳ ನಿರ್ವಹಣೆ ಸಾಧ್ಯವೇ ಎಂದು ಭೋಪಾಲ ಹೊರವಲಯದಲ್ಲಿ ಗೋಶಾಲೆ ನಿರ್ವಹಿಸುತ್ತಿರುವ ರಾಕೇಶ್ ಮಾಲವೀಯ ಎಂಬವರು ಪ್ರಶ್ನಿಸಿದ್ದಾರೆ.

1 ರೂ.60 ಪೈಸೆಯಲ್ಲಿ ಒಂದು ಹಸುವಿನ ಪಾಲನೆ ಸಾಧ್ಯವೇ. ಸರಕಾರದ ಲೆಕ್ಕಾಚಾರಕ್ಕೆ ಅರ್ಥವಿದೆಯೇ ಎಂದು ಪಶು ಆಹಾರ ಪೂರೈಸುವ ಕೆಲಸ ಮಾಡುತ್ತಿರುವ ರಾಮಶರಣ್ ಮೀನಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೆಚ್ಚುವರಿ ಅನುದಾನ ಒದಗಿಸುವಂತೆ ರಾಜ್ಯದ ವಿತ್ತ ಸಚಿವರಿಗೆ ಮನವಿ ಮಾಡಿಕೊಂಡಿದ್ದೇವೆ. ಗೋಮಾತೆಯ ಕುರಿತು ನಮಗೆ ಕಾಳಜಿಯಿದೆ. ವಿತ್ತ ಸಚಿವರೂ ನಮ್ಮ ಮನವಿಗೆ ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ಮಧ್ಯಪ್ರದೇಶದ ಪಶುಸಂಗೋಪನಾ ಇಲಾಖೆಯ ಸಚಿವ ಪ್ರೇಮ್ ಪಟೇಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News