ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡಿದ ಆರೋಪ: ಅಸ್ಸಾಮಿ ಟಿವಿ ಧಾರಾವಾಹಿ ಪ್ರಸಾರಕ್ಕೆ ಎರಡು ತಿಂಗಳ ನಿಷೇಧ
ಗುವಾಹಟಿ,ಆ.28: ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡುತ್ತಿರುವ ಆರೋಪದಲ್ಲಿ ಅಸ್ಸಾಮಿನ ಪ್ರಾದೇಶಿಕ ಮನರಂಜನಾ ವಾಹಿನಿ ‘ರೆಂಗೋನಿ’ಯಲ್ಲಿ ವಾರಕ್ಕೊಮ್ಮೆ ಪ್ರಸಾರವಾಗುತ್ತಿದ್ದ ‘ಬೇಗಂ ಜಾನ್’ ಧಾರಾವಾಹಿಯ ಮೇಲೆ ಎರಡು ತಿಂಗಳ ನಿಷೇಧವನ್ನು ಹೇರಲಾಗಿದೆ. ಗುವಾಹಟಿ ಪೊಲೀಸ್ ಆಯುಕ್ತ ಎಂ.ಪಿ.ಗುಪ್ತಾ ಅವರು ಆ.24ರಂದು ಹೊರಡಿಸಿರುವ ಆದೇಶದಲ್ಲಿ, ಧಾರಾವಾಹಿಯು ಹಿಂಸೆಯನ್ನು ಪ್ರಚೋದಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ರೆಂಗೋನಿ ಈ ಆರೋಪಗಳನ್ನು ತಿರಸ್ಕರಿಸಿದೆ.
ಧಾರಾವಾಹಿಯು ನಿರ್ದಿಷ್ಟ ಧರ್ಮ ಅಥವಾ ಸಮಾಜದ ವರ್ಗವನ್ನು ನಿಂದಿಸುವ ಮತ್ತು ಅವಮಾನಿಸುವ ದೃಶ್ಯಗಳನ್ನು ಅಥವಾ ಮಾತುಗಳನ್ನು ಒಳಗೊಂಡಿದೆ ಎಂದು ಹೇಳಿರುವ ಆದೇಶವು,ಕಾರ್ಯಕ್ರಮದ ನೀತಿಸಂಹಿತೆಯನ್ನುಉಲ್ಲಂಘಿಸಿದ್ದಕ್ಕಾಗಿ ರೆಂಗೋನಿ ಟಿವಿಗೆ ಶೋಕಾಸ್ ನೋಟಿಸನ್ನು ಜಾರಿಗೊಳಿಸಲಾಗುವುದು ಎಂದು ತಿಳಿಸಿದೆ.
ಸಂಘಪರಿವಾರಕ್ಕೆ ಸೇರಿದ ಹಿಂದು ಜಾಗರಣ ಮಂಚ್(ಎಚ್‌ಜೆಎಂ) ಹಾಗೂ ಅಖಿಲ ಅಸ್ಸಾಂ ಬ್ರಾಹ್ಮಣ ಯುವ ಮಂಡಳಿಯಂತಹ ಇತರ ಗುಂಪುಗಳು ಈ ಬಗ್ಗೆ ದೂರನ್ನು ಸಲ್ಲಿಸಿದ್ದವು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಜುಲೈನಲ್ಲಿ ಧಾರಾವಾಹಿ ಪ್ರಸಾರ ಆರಂಭಗೊಂಡಾಗಿನಿಂದಲೂ ಅದನ್ನು ನಿಷೇಧಿಸುವಂತೆ ಗುವಾಹಟಿ ಎಚ್‌ಜೆಎಂ ಘಟಕವು ಒತ್ತಾಯಿಸುತ್ತಲೇ ಇತ್ತು.
‘ಲವ್ ಜಿಹಾದ್’ನ್ನು ಉತ್ತೇಜಿಸಿದ್ದಕ್ಕಾಗಿ ಹಾಗೂ ಹಿಂದು ಮತ್ತು ಅಸ್ಸಾಮಿ ಸಂಸ್ಕೃತಿಗಳಿಗೆ ಕಳಂಕ ತರುತ್ತಿರುವುದಕ್ಕಾಗಿ ಧಾರಾವಾಹಿಯ ಪ್ರಸಾರವನ್ನು ನಿಷೇಧಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
‘ಧಾರಾವಾಹಿಗೂ ಲವ್ ಜಿಹಾದ್‌ಗೂ ಯಾವುದೇ ಸಂಬಂಧವಿಲ್ಲ. ಅದು ಮುಸ್ಲಿಂ ಬಡಾವಣೆಯಲ್ಲಿ ತೊಂದರೆಗೊಳಗಾಗಿ ಮುಸ್ಲಿಂ ವ್ಯಕ್ತಿಯಿಂದ ರಕ್ಷಿಸಲ್ಪಡುವ ಯುವತಿಯ ಕತೆಯನ್ನು ಹೊಂದಿದೆ. ನಮ್ಮ ಕಾನೂನು ತಂಡವು ವಿಷಯವನ್ನು ಪರಿಶೀಲಿಸುತ್ತಿದೆ. ಇಲ್ಲಿ ಇದೇ ಮೊದಲ ಬಾರಿಗೆ ಇಂತಹ ಕ್ರಮವನ್ನು ಕೈಗೊಳ್ಳಲಾಗಿದೆ. ಈ ಧಾರಾವಾಹಿಯು ಯಾವುದೇ ಧರ್ಮಕ್ಕೆ ಅವಮಾನವನ್ನುಂಟು ಮಾಡುತ್ತಿರುವುದು ನಮಗೆ ಕಂಡುಬಂದಿಲ್ಲ ’ಎಂದು ರೆಂಗೋನಿ ಟಿವಿಯ ಅಧ್ಯಕ್ಷ ಸಂಜೀವ ನಾರಾಯಣ ಹೇಳಿದರು.
‘ಯಾವುದೇ ಧಾರಾವಾಹಿ ಅಥವಾ ಸಿನಿಮಾ ಹಿಂದು ಸಮಾಜವನ್ನು ಕೀಳಾಗಿ ತೋರಿಸಲು ಪ್ರಯತ್ನಿಸಿದರೆ ನಾವು ಪ್ರತಿಭಟಿಸುತ್ತೇವೆ. ಬೇಗಂ ಜಾನ್ ಧಾರಾವಾಹಿಯು ಹಿಂದು ಅಥವಾ ಅಸ್ಸಾಮಿ ಸಮಾಜದ ತತ್ವಗಳನ್ನು ಸರಿಯಾಗಿ ಅಭಿವ್ಯಕ್ತಿಸಿಲ್ಲ. ಅದು ಬ್ರಾಹ್ಮಣರನ್ನು ಕೀಳಾಗಿ ತೋರಿಸಿದೆ. ಅಸ್ಸಾಮಿ ಸಮಾಜದಲ್ಲಿ ಈಗಾಗಲೇ ಲವ್ ಜಿಹಾದ್ ಇದೆ ಮತ್ತು ಈ ಧಾರಾವಾಹಿಯು ಅದನ್ನು ಇನ್ನಷ್ಟು ಹೆಚ್ಚಿಸುತ್ತದೆ ’ ಎಂದು ಎಸ್‌ಜೆಎಂ ರಾಜ್ಯ ವರಿಷ್ಠ ಮೃಣಾಲ ಕುಮಾರ ಲಷ್ಕರ್ ಹೇಳಿದರು.