ವಿದೇಶಾಂಗ ಇಲಾಖೆಯಲ್ಲಿ ಸಂಪರ್ಕ ಸಾಧಿಸಲು ದೇವೇಂದರ್ ಸಿಂಗ್ ಗೆ ಕೆಲಸ ವಹಿಸಿದ್ದ ಪಾಕಿಸ್ತಾನ

Update: 2020-08-30 18:07 GMT

ಹೊಸದಿಲ್ಲಿ, ಆ.30: ನಿಷೇಧಿತ ಭಯೋತ್ಪಾದಕ ಸಂಘಟನೆ ಹಿಜ್ಬುಲ್ ಮುಜಾಹಿದೀನ್‌ಗೆ ನೆರವಾಗುತ್ತಿದ್ದ ಆರೋಪದಲ್ಲಿ ಅಮಾನತುಗೊಂಡಿರುವ ಜಮ್ಮು ಕಾಶ್ಮೀರ ಮಾಜಿ ಪೊಲೀಸ್ ಡಿವೈಎಸ್ಪಿ ದೇವೇಂದರ್ ಸಿಂಗ್‌ಗೆ, ವಿದೇಶ ವ್ಯವಹಾರ ಇಲಾಖೆಯಲ್ಲಿ ಸಂಪರ್ಕ ಸಾಧಿಸಿ ಗೂಢಚರ್ಯೆ ಚಟುವಟಿಕೆಗೆ ಅನುವು ಮಾಡಿಕೊಡುವ ಕಾರ್ಯವನ್ನು ಪಾಕಿಸ್ತಾನ ವಹಿಸಿತ್ತು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಯ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಜಮ್ಮು-ಕಾಶ್ಮೀರ ಪೊಲೀಸ್‌ನ ಅಪಹರಣ ತಡೆ ವಿಭಾಗದಲ್ಲಿ ಅಧಿಕಾರಿಯಾಗಿದ್ದ ಸಿಂಗ್, ಪಾಕಿಸ್ತಾನ ಹೈಕಮಿಷನ್‌ನ ಉದ್ಯೋಗಿಯೊಬ್ಬರ ಜತೆ ನಿರಂತರ ಸಂಪರ್ಕದಲ್ಲಿದ್ದ ಎಂದು ಜಮ್ಮು ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಸಲಾಗಿರುವ ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ. ಈ ಉದ್ಯೋಗಿಯನ್ನು ಬಳಿಕ ಇಸ್ಲಾಮಾಬಾದ್‌ಗೆ ವಾಪಾಸು ಕಳುಹಿಸಲಾಗಿತ್ತು. ಸಿಂಗ್ ಹಾಗೂ ಇತರ ಐದು ಆರೋಪಿಗಳ ವಿರುದ್ಧ ಅಕ್ರಮ ಚಟುವಟಿಕೆ ತಡೆ ಕಾಯ್ದೆ ಹಾಗೂ ಐಪಿಸಿಯ ವಿವಿಧ ಸೆಕ್ಷನ್‌ಗಳಡಿ ಸಲ್ಲಿಸಲಾಗಿರುವ 3,064 ಪುಟಗಳ ಆರೋಪಪಟ್ಟಿಯಲ್ಲಿ , ನಿಷೇಧಿತ ಉಗ್ರ ಸಂಘಟನೆಗೆ ಆಶ್ರಯ ನೀಡುವಲ್ಲಿ ಸಿಂಗ್‌ರ ಪಾತ್ರದ ಚಿತ್ರಾತ್ಮಕ (ಗ್ರಾಫ್) ವಿವರಣೆಯಿದೆ. ದೇವೀಂದರ್ ಸಿಂಗ್ ಸುರಕ್ಷಿತ ಸಾಮಾಜಿಕ ಜಾಲತಾಣದ ಮೂಲಕ ಹೊಸದಿಲ್ಲಿಯ ಪಾಕಿಸ್ತಾನ ಹೈಕಮಿಷನ್ ಸಿಬ್ಬಂದಿಗಳೊಂದಿಗೆ ಸಂಪರ್ಕ ಸಾಧಿಸುತ್ತಿದ್ದರು.

ಆದರೆ ವಿದೇಶ ವ್ಯವಹಾರ ಇಲಾಖೆಯಲ್ಲಿ ಸಂಪರ್ಕ ಸಾಧಿಸಲು ಸಿಂಗ್ ವಿಫಲವಾಗಿದ್ದ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಹಿಜ್‌ಬುಲ್ ಸಂಘಟನೆಯ ಸದಸ್ಯರಾದ ನವೀದ್, ಇರ್ಫಾನ್ ಅಹ್ಮದ್, ರಫಿ ಅಹ್ಮದ್ ಹಾಗೂ ಉದ್ಯಮಿ ತನ್ವೀರ್ ಅಹ್ಮದ್ ವಾನಿಯ ಹೆಸರು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಸಿಂಗ್‌ನನ್ನು ಜನವರಿ 11ರಂದು ನವೀದ್ ಹಾಗೂ ವಕೀಲ ಮೀರ್‌ನೊಂದಿಗೆ ಕಾರಿನಲ್ಲಿ ತೆರಳುತ್ತಿದ್ದಾಗ ಜಮ್ಮು ಕಾಶ್ಮೀದ ಪೊಲೀಸರು ಬಂಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News