ಪ್ರಧಾನಿ ಮೋದಿ ಮನ್ ಕಿ ಬಾತ್ ಗೆ ಒಂದೇ ದಿನದೊಳಗೆ 51 ಸಾವಿರ ಲೈಕ್, 3.9 ಲಕ್ಷಕ್ಕೂ ಹೆಚ್ಚು ಡಿಸ್ ಲೈಕ್ ಗಳು !
ಹೊಸದಿಲ್ಲಿ: ಬಹುಚರ್ಚಿತ ಜೆಇಇ-ನೀಟ್ ಪರೀಕ್ಷೆಗಳನ್ನು ನಡೆಸುವ ಕುರಿತಾಗಿ ಇರುವ ಗೊಂದಲದ ಕುರಿತಂತೆ ರವಿವಾರದ ತಮ್ಮ ಮನ್ ಕಿ ಬಾತ್ ಬಾನುಲಿ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸದೇ ಇರುವುದು ಸಾಮಾಜಿಕ ಜಾಲತಾಣದಲ್ಲಿ ಯುವಜನರ ಅಸಮಾಧಾನಕ್ಕೆ ಕಾರಣವಾಗಿದೆ. ಕೊರೋನ ಭಯ ಇರುವುದರಿಂದ ಈ ಪರೀಕ್ಷೆಗಳನ್ನು ಮುಂದೂಡಬೇಕೆಂದು ವಿಪಕ್ಷಗಳ ಆಡಳಿತವಿರುವ ಮುಖ್ಯಮಂತ್ರಿಗಳು ಹಾಗು ವಿದ್ಯಾರ್ಥಿ ಸಂಘಟನೆಗಳು ಆಗ್ರಹಿಸುತ್ತಿವೆ. ಆದರೆ ಪರೀಕ್ಷೆ ನಡೆಸಿಯೇ ಸಿದ್ಧ ಎಂದು ಕೇಂದ್ರ ಹೇಳಿದೆ.
ಬಿಜೆಪಿಯ ಅಧಿಕೃತ ಯುಟ್ಯೂಬ್ ಚಾನೆಲ್ ನಲ್ಲಿ ಅಪ್‍ಲೋಡ್ ಮಾಡಲಾಗಿರುವ ಪ್ರಧಾನಿಯ ಮನ್ ಕಿ ಬಾತ್ ಆಗಸ್ಟ್ ತಿಂಗಳ ಕಾರ್ಯಕ್ರಮದ ವೀಡಿಯೋಗೆ ಡಿಸ್‍ಲೈಕ್ ಮಾಡುವವರ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು ಇಲ್ಲಿಯ ತನಕ 3.5 ಲಕ್ಷಕ್ಕೂ ಅಧಿಕ ಮಂದಿ ಈ ವೀಡಿಯೋವನ್ನು ಡಿಸ್‍ಲೈಕ್ ಮಾಡಿದ್ದಾರೆ.
ಪ್ರಧಾನಿ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಈ ಪರೀಕ್ಷೆಗಳ ವಿಚಾರ ಎತ್ತುತ್ತಾರೆಂದು ಬಹುತೇಕ ಮಂದಿ ಕಾರ್ಯಕ್ರಮ ಪ್ರಸಾರವಾಗುವ ಮುಂಚೆ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಆದರೆ ಓಣಂನಿಂದ ಹಿಡಿದು ಭಾರತದ ಆಟಿಕೆ ಉದ್ಯಮದ ಕುರಿತು ಪ್ರಸ್ತಾಪಿಸಿದ ಮೋದಿ ನೀಟ್-ಜೆಇಇ ಪರೀಕ್ಷೆಯ ಗೊಂದಲದ ಕುರಿತು ಚಕಾರವೆತ್ತದೇ ಇದ್ದ ನಂತರ #Mann_Ki_Nahi_Student_Ki_Baat ಹ್ಯಾಶ್ ಟ್ಯಾಗ್ ಟ್ವಿಟರ್‍ನಲ್ಲಿ ಟ್ರೆಂಡಿಂಗ್ ಆಗಿತ್ತು.
ಕೆಲವು ಯುಟ್ಯೂಬ್ ಚಾನೆಲ್‍ಗಳಲ್ಲಿ ಈ ಮನ್ ಕಿ ಬಾತ್ ವೀಡಿಯೋಗಳಿಗೆ ಲೈಕ್ ಗಳಿಗಿಂತ ಡಿಸ್‍ಲೈಕ್‍ಗಳೇ ಅಧಿಕವಾಗಿವೆ.
ಪಿಎಂಒ ಯುಟ್ಯೂಬ್ ಚಾನೆಲ್‍ನ ವೀಡಿಯೋಗೆ 24,000 ಮಂದಿ ಲೈಕ್ ಮಾಡಿದ್ದರೆ 40,000 ಮಂದಿ ಡಿಸ್‍ಲೈಕ್ ಮಾಡಿದ್ದಾರೆ. ಡಿಡಿ ನ್ಯೂಸ್ ಯುಟ್ಯೂಬ್ ಚಾನೆಲ್‍ಲ್ಲಿ ವೀಡಿಯೋಗೆ 2,400 ಮಂದಿ ಲೈಕ್ ಮಾಡಿದ್ದರೆ 7,500 ಮಂದಿ ಡಿಸ್‍ಲೈಕ್ ಮಾಡಿದ್ದಾರೆ. ಬಿಜೆಪಿಯ ಯುಟ್ಯೂಬ್ ಚಾನೆಲ್‍ನಲ್ಲಿ ಕೊರೊನ ಗಡಿಬಿಡಿಯ ನಡುವೆ ಪರೀಕ್ಷೆ ನಡೆಸುವ ಸರಕಾರದ ನಿಲುವನ್ನು ಹಲವಾರು ಮಂದಿ ಖಂಡಿಸಿದ್ದಾರೆ. ಒಟ್ಟು 67 ಸಾವಿರಕ್ಕೂ ಹೆಚ್ಚು ಮಂದಿ ಕಮೆಂಟ್ ಮಾಡಿದ್ದಾರೆ. ಆ ಬಳಿಕ ಕಾಮೆಂಟ್ ವಿಭಾಗವನ್ನೇ ನಿಷ್ಕ್ರಿಯ ಮಾಡಲಾಗಿದೆ.