ಕಫೀಲ್ ಖಾನ್ ಭಾಷಣದಲ್ಲಿ ದ್ವೇಷ ಹರಡಿಲ್ಲ, ರಾಷ್ಟ್ರೀಯ ಏಕತೆಗೆ ಕರೆ ನೀಡಿದ್ದಾರೆ: ಅಲಹಾಬಾದ್ ಹೈಕೋರ್ಟ್

Update: 2020-09-01 16:28 GMT

ಲಕ್ನೊ, ಸೆ.1: ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಭಾಷಣ ಮಾಡಿದ್ದಕ್ಕಾಗಿ ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆ(ಎನ್‌ಎಸ್‌ಎ)ಅಡಿ ಉತ್ತರಪ್ರದೇಶದ ವೈದ್ಯ ಡಾ.ಕಫೀಲ್ ಖಾನ್‌ ರನ್ನು ಬಂಧಿಸಿರುವುದು 'ಕಾನೂನುಬಾಹಿರ' ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದ್ದು, ತಕ್ಷಣವೇ ಅವರನ್ನು ಬಿಡುಗಡೆಗೊಳಿಸಬೇಕು ಎಂದು ತೀರ್ಪಿತ್ತಿದೆ.

ಕಳೆದ ವರ್ಷಾಂತ್ಯದಲ್ಲಿ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಸಿಎಎ ವಿರುದ್ಧ ಭಾಷಣ ಮಾಡಿದ್ದ ಡಾ.ಖಾನ್ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿತ್ತು. ಜನವರಿ 29ರಂದು ಕಫೀಲ್ ಖಾನ್‌ ರನ್ನು ಬಂಧಿಸಲಾಗಿದ್ದು, ಅವರನ್ನು ಆಲಿಗಢದ ಜೈಲಿನಲ್ಲಿ ಇರಿಸಲಾಗಿದೆ.

ಡಾ.ಖಾನ್ ಅವರ ಭಾಷಣವು ಪ್ರಚೋದನಕಾರಿಯಾಗಿರಲಿಲ್ಲ ಮತ್ತು ಅವರ ಬಂಧನಕ್ಕೆ ಸಾಕಷ್ಟು ಕಾರಣಗಳಿರಲಿಲ್ಲ ಎಂದು ಮಂಗಳವಾರದ ವಿಚಾರಣೆ ಸಂದರ್ಭದಲ್ಲಿ ಅಲಹಾಬಾದ್ ಉಚ್ಚ ನ್ಯಾಯಾಲಯವು ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ನ್ಯಾಯಾಲಯ ಹೇಳಿದ್ದೇನು ?

ದ್ವೇಷ ಅಥವಾ ಅಶಾಂತಿಯನ್ನು ಉತ್ತೇಜಿಸುವ ಯಾವುದೇ ಅಂಶಗಳು ಡಾ.ಖಾನ್ ಭಾಷಣದಲ್ಲಿರಲಿಲ್ಲ ಎಂದು ಹೇಳಿದ ಮುಖ್ಯ ನ್ಯಾಯಾಧೀಶ ಗೋವಿಂದ ಮಾಥುರ್ ಮತ್ತು ಸೌಮಿತ್ರ ದಯಾಳ ಸಿಂಗ್ ಅವರ ಪೀಠವು, ಭಾಷಣವು ಅಲಿಗಢದ ಶಾಂತಿ ಮತ್ತು ನೆಮ್ಮದಿಯನ್ನು ಕೆಡಿಸಿರಲಿಲ್ಲ. ಅದು ರಾಷ್ಟ್ರೀಯ ಸಮಗ್ರತೆ ಮತ್ತು ಪ್ರಜೆಗಳ ನಡುವೆ ಏಕತೆಗೆ ಕರೆ ನೀಡಿತ್ತು ಎಂದು ಹೇಳಿದೆ.

“ದ್ವೇಷ ಮತ್ತು ಹಿಂಸೆಯನ್ನು ಪ್ರಚೋದಿಸುವ ಯಾವುದೇ ಅಂಶಗಳು ಭಾಷಣದಲ್ಲಿ ಕಂಡು ಬಂದಿಲ್ಲ. ಭಾಷಣವು ಆಲಿಗಢದ ಶಾಂತಿ ಮತ್ತು ನೆಮ್ಮದಿಯನ್ನು ಕೆಡಿಸುವಂತಿದೆ ಎನಿಸುತ್ತಿಲ್ಲ. ಭಾಷಣದಲ್ಲಿ ರಾಷ್ಟ್ರೀಯ ಸಮಗ್ರತೆ ಮತ್ತು ಪ್ರಜೆಗಳ ನಡುವೆ ಏಕತೆಗೆ ಕರೆ ನೀಡಲಾಗಿದೆ. ಯಾವುದೇ ರೀತಿಯ ಹಿಂಸೆಯನ್ನು ಕೂಡ ಭಾಷಣವು ವಿರೋಧಿಸುತ್ತದೆ. ಭಾಷಣದ ನೈಜ ಉದ್ದೇಶವನ್ನು ನಿರ್ಲಕ್ಷಿಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಭಾಷಣದ ಕೆಲವೊಂದು ವಾಕ್ಯಗಳನ್ನು ಮಾತ್ರ ನೋಡಿದ್ದಾರೆ ಎಂದೆನಿಸುತ್ತಿದೆ” ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.

ಸಿಎಎ ವಿರೋಧಿ ಪ್ರತಿಭಟನೆಗಳ ಸಂದರ್ಭ 2019, ಡಿ.10ರಂದು ಅಲಿಗಡ್ ಮುಸ್ಲಿಂ ವಿವಿಯಲ್ಲಿ ಭಾಷಣವನ್ನು ಮಾಡಿದ ಬಳಿಕ ಜನವರಿಯಿಂದಲೂ ಡಾ.ಖಾನ್ ಜೈಲಿನಲ್ಲಿದ್ದಾರೆ. ಫೆ.13ರಂದು ಉತ್ತರ ಪ್ರದೇಶ ಸರಕಾರವು ಅವರ ವಿರುದ್ಧ ಎನ್‌ಎಸ್‌ಎ ಹೇರಿತ್ತು. ಆ.16ರಂದು ಎನ್‌ಎಸ್‌ಎ ಅಡಿ ಬಂಧನದ ಅವಧಿಯನ್ನು ಎರಡನೇ ಬಾರಿಗೆ ಮೂರು ತಿಂಗಳು ವಿಸ್ತರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News