ಕೇರಳ ಜೋಡಿ ಕೊಲೆ ಪ್ರಕರಣಕ್ಕೆ ಹೊಸ ತಿರುವು: ಆಡಿಯೋ ಬಿಡುಗಡೆಗೊಳಿಸಿದ ಡಿವೈಎಫ್‌ಐ

Update: 2020-09-01 18:37 GMT

ತಿರುವನಂತಪುರ, ಸೆ.1: ಇಲ್ಲಿನ ವೆಂಜರಮೂಟ್ಟಂ ಎಂಬಲ್ಲಿ ನಡೆದ ಇಬ್ಬರು ಡಿವೈಎಫ್‌ಐ ಕಾರ್ಯಕರ್ತರ ಹತ್ಯೆ ಪ್ರಕರಣವೀಗ ಹೊಸ ತಿರುವನ್ನು ಪಡೆದುಕೊಂಡಿದೆ. ಪ್ರಕರಣದ ಆರೋಪಿಗಳಲ್ಲೋರ್ವನಾಗಿರುವ ಶಾಜಿತ್ ಎಂಬಾತನೊಂದಿಗೆ ಕಾಂಗ್ರೆಸ್ ಸಂಸದ ಆಡೂರ್ ಪ್ರಕಾಶ್ ನಂಟು ಹೊಂದಿದ್ದಾರೆ ಎನ್ನಲಾಗಿರುವ ಆಡಿಯೋ ಟೇಪ್‌ವೊಂದನ್ನು ಡಿವೈಎಫ್‌ಐ ಬಿಡುಗಡೆಗೊಳಿಸಿದೆ.

 ಶಾಜಿತ್ ಡಿವೈಎಫ್‌ಐ ಕಾರ್ಯಕರ್ತ ಫೈಝಲ್ ಕೊಲೆಯತ್ನ ಪ್ರಕರಣದಲ್ಲಿಯೂ ಆರೋಪಿಯಾಗಿದ್ದಾನೆ.

ರವಿವಾರ ರಾತ್ರಿ ವೆಂಜರಮೂಟ್ಟಂ ಎಂಬಲ್ಲಿ ಡಿವೈಎಫ್‌ಐ ಕಾರ್ಯಕರ್ತರಾದ ಮಿಧಿಲಾಜ್(30) ಮತ್ತು ಮುಹಮ್ಮದ್ ಹಕ್(30) ಎನ್ನುವವರನ್ನು ಗುಂಪೊಂದು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಒಂಭತ್ತು ಜನರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಈವರೆಗೆ ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರು ಕಾಂಗ್ರೆಸ್ ಕಾರ್ಯಕರ್ತರಾಗಿದ್ದಾರೆ.

ಆರೋಪಿಗಳು ಆಡೂರ್ ಪ್ರಕಾಶ್ ಜೊತೆ ನಂಟು ಹೊಂದಿದ್ದಾರೆ ಎಂದು ಕೈಗಾರಿಕಾ ಸಚಿವ ಇ.ಪಿ.ಜಯರಾಜನ್ ಅವರು ಆರೋಪಿಸಿದ ಬೆನ್ನಿಗೇ ಆಡಿಯೋ ಟೇಪ್ ಬಿಡುಗಡೆಗೊಂಡಿದೆ. ಜೋಡಿ ಕೊಲೆ ಪ್ರಕರಣದಲ್ಲಿ ಆಡೂರ ಪ್ರಕಾಶ ಪಾತ್ರದ ಬಗ್ಗೆ ತನಿಖೆಗೆ ಆಗ್ರಹಿಸಿರುವ ಜಯರಾಜನ್, ಕೊಲೆಗಳು ನಡೆದ ಬಳಿಕ ಶಾಜಿತ್ ಆಡೂರ್ ಅವರಿಗೆ ಕರೆ ಮಾಡಿದ್ದ ಎಂದು ಆರೋಪಿಸಿದ್ದಾರೆ.

ಆದರೆ ತನ್ನ ವಿರುದ್ಧದ ಆರೋಪಗಳನ್ನು ನಿರಾಕರಿಸಿರುವ ಆಡೂರ್ ಪ್ರಕಾಶ್, ಈ ಆರೋಪಗಳನ್ನು ಸಾಬೀತುಗೊಳಿಸುವುದು ಸಚಿವರ ಹೊಣೆಗಾರಿಕೆಯಾಗಿದೆ ಎಂದಿದ್ದಾರೆ. ಜೋಡಿ ಕೊಲೆ ಪ್ರಕರಣದ ಯಾವುದೇ ಆರೋಪಿ ತನಗೆ ಕರೆ ಮಾಡಿರಲಿಲ್ಲ ಎಂದು ಒತ್ತಿ ಹೇಳಿರುವ ಅವರು, ನ್ಯಾಯಯುತ ವಿಷಯಗಳನ್ನು ಹೊರತುಪಡಿಸಿ ಪೊಲೀಸ್ ಠಾಣೆಗೆ ತಾನು ಯಾವುದೇ ಕರೆ ಮಾಡಿಲ್ಲ ಎಂದು ಹೇಳಿದ್ದಾರೆ.

ತನ್ಮಧ್ಯೆ ಜೋಡಿ ಕೊಲೆಯ ವಿರುದ್ಧ ಪ್ರತಿಭಟಿಸಲು ಸಿಪಿಎಂ ಬುಧವಾರ ಕರಾಳ ದಿನವನ್ನು ಆಚರಿಸಲಿದೆ. ಈ ಕೊಲೆಗಳ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡವಿದೆ ಎಂದು ಸಿಪಿಎಂ ರಾಜ್ಯ ಸೆಕ್ರೆಟರಿಯೇಟ್ ಆರೋಪಿಸಿದೆ.

ಇದಕ್ಕೂ ಮುನ್ನ, ಸಿಪಿಎಂ ಜೋಡಿ ಕೊಲೆಗಳ ಲಾಭವೆತ್ತಲು ಹವಣಿಸುತ್ತಿದೆ ಎಂದು ಆರೋಪಿಸಿದ್ದ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಮುಲ್ಲಪಳ್ಳಿ ರಾಮಚಂದ್ರನ್ ಅವರು,ಈ ಕೊಲೆಗಳಲ್ಲಿ ಯಾವುದೇ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿರಲಿಲ್ಲ ಎಂಬ ಮಾಹಿತಿ ತನಗೆ ಲಭಿಸಿದೆ ಎಂದು ತಿಳಿಸಿದ್ದರು.

ಆರೋಪಿಗಳು ಹಕ್ ಮತ್ತು ಆತನ ಸ್ನೇಹಿತರೊಂದಿಗೆ ಪೂರ್ವದ್ವೇಷವನ್ನು ಹೊಂದಿದ್ದರು ಮತ್ತು ಹಿಂದೆ ಎರಡೂ ಗುಂಪುಗಳ ಮಧ್ಯೆ ಘರ್ಷಣೆಗಳು ಸಂಭವಿಸಿದ್ದವು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News