ಅಮೆರಿಕನ್ ಓಪನ್ ಟೆನಿಸ್ ಟೂರ್ನಿ: ಜೊಕೊವಿಕ್, ಝ್ವೆರೆವ್, ಸಿಮೊನ್ ಶುಭಾರಂಭ

Update: 2020-09-01 18:05 GMT

ನ್ಯೂಯಾರ್ಕ್, ಸೆ.1: ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ ನೊವಾಕ್ ಜೊಕೊವಿಕ್ ಸೋಮವಾರ ಆರಂಭವಾಗಿರುವ ಯುಎಸ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ನೇರ ಸೆಟ್‌ಗಳಿಂದ ಜಯ ಸಾಧಿಸಿ ಶುಭಾರಂಭ ಮಾಡಿದರು. 18ನೇ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸುವತ್ತ ಮೊದಲ ಹೆಜ್ಜೆ ಇಟ್ಟರು.

ವಿಶ್ವದ ನಂ.1 ಆಟಗಾರ ಜೊಕೊವಿಕ್ ಹೊಸ ಮುಖ ಬೊಸ್ನಿಯಾದ ಡಮಿರ್ ಝುಂಹರ್‌ರನ್ನು 6-1, 6-4, 6-1 ನೇರ ಸೆಟ್‌ಗಳಿಂದ ಮಣಿಸಿದರು. ಮೊದಲ ಸೆಟ್ ಗೆಲ್ಲಲು 23 ನಿಮಿಷ ತೆಗೆದುಕೊಂಡ ಸರ್ಬಿಯದ ಸೂಪರ್‌ಸ್ಟಾರ್ 2ನೇ ಸೆಟ್‌ನ್ನು ಗೆಲ್ಲಲು ಬೆವರಿಳಿಸಿದರು. ರಫೆಲ್ ನಡಾಲ್ ಹಾಗೂ ರೋಜರ್ ಫೆಡರರ್ ಅನುಪಸ್ಥಿತಿಯಲ್ಲಿ ಯುಎಸ್ ಓಪನ್ ಜಯಿಸುವ ಭರವಸೆ ಮೂಡಿಸಿದ್ದಾರೆ.

ಝ್ವೆರೆವ್, ಸಿಟ್‌ಸಿಪಾಸ್, ಸಿಮೊನ್ ಎರಡನೇ ಸುತ್ತಿಗೆ ಲಗ್ಗೆ

2017ರ ಯುಎಸ್ ಓಪನ್ ಫೈನಲಿಸ್ಟ್ ಕೆವಿನ್ ಆ್ಯಂಡರ್ಸನ್ ವಿರುದ್ಧ ಮೂರು ಗಂಟೆಗಳ ಸುದೀರ್ಘ ಹೋರಾಟ ನಡೆಸಿದ 5ನೇ ಶ್ರೇಯಾಂಕದ ಅಲೆಕ್ಸಾಂಡರ್ ಝ್ವೆರೆವ್ ಯುಎಸ್ ಓಪನ್‌ನ ಪುರುಷರ ಸಿಂಗಲ್ಸ್‌ನಲ್ಲಿ ಎರಡನೇ ಸುತ್ತಿಗೆ ಪ್ರವೇಶಿಸಿದರು. ಮೊದಲ ಗ್ರಾನ್‌ಸ್ಲಾಮ್ ಪ್ರಶಸ್ತಿ ನಿರೀಕ್ಷೆಯಲ್ಲಿರುವ ಜರ್ಮನಿ ಆಟಗಾರ ಝ್ವೆರೆವ್ ದ.ಆಫ್ರಿಕಾ ಆಟಗಾರನ ವಿರುದ್ಧ 7-6(7/2), 5-7, 6-3, 7-5 ಸೆಟ್‌ಗಳ ಅಂತರದಿಂದ ಜಯ ಸಾಧಿಸಿದರು.

ಕೊರೋನ ವೈರಸ್‌ನಿಂದಾಗಿ ಪ್ರೇಕ್ಷಕರಿಲ್ಲದೆ ಖಾಲಿ ಸ್ಟೇಡಿಯಂನಲ್ಲಿ ನಡೆದ ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ 4ನೇ ಶ್ರೇಯಾಂಕದ ಸ್ಟೆಫನೊಸ್ ಸಿಟ್‌ಸಿಪಾಸ್ ಸ್ಪೇನ್‌ನ ಅಲ್ಬರ್ಟ್ ರಾಮೊಸ್-ವಿನೊಲಸ್‌ರನ್ನು ನೇರ ಸೆಟ್‌ಗಳಿಂದ ಸೋಲಿಸಿದರು. ಗ್ರೀಕ್ ಆಟಗಾರ ಸಿಟ್‌ಸಿಪಾಸ್ 1 ಗಂಟೆ, 38 ನಿಮಿಷಗಳ ಹೋರಾಟದಲ್ಲಿ ವಿಶ್ವದ ನಂ.41ನೇ ಆಟಗಾರ ಅಲ್ಬರ್ಟ್‌ರನ್ನು 6-1, 6-1 ಸೆಟ್‌ಗಳಿಂದ ಸೋಲಿಸಿದರು.

22ರ ಹರೆಯದ ಸಿಟ್‌ಸಿಪಾಸ್ ಮುಂದಿನ ಸುತ್ತಿನಲ್ಲಿ ಅಮೆರಿಕದ ವೈರ್ಲ್ಡ್‌ಕಾರ್ಡ್ ಮ್ಯಾಕ್ಸಿಮ್ ಕ್ರೆಸ್ಸಿ ಅವರನ್ನು ಎದುರಿಸಲಿದ್ದಾರೆ. ಕ್ರೆಸ್ಸಿ ಸ್ಲೋವಾಕಿಯದ ಜೊಝೆಫ್‌ರನ್ನು 6-1, 2-6, 6-4, 6-4 ಸೆಟ್‌ಗಳಿಂದ ಮಣಿಸಿದ್ದಾರೆ.

ಕೆನಡಾದ ಡೆನಿಸ್ ಶಪೊವಾಲೊವ್ ಅಮೆರಿಕದ ಸೆಬಾಸ್ಟಿಯನ್ ಕೊರ್ಡಾ ವಿರುದ್ಧ್ದ 6-4, 4-6, 6-3, 6-2 ಸೆಟ್‌ಗಳಿಂದ ಜಯ ಸಾಧಿಸಿದರು. ಫ್ರಾನ್ಸ್‌ನ ಗಿಲ್ಲೆಸ್ ಸಿಮೊನ್ ಈಜಿಪ್ಟ್‌ನ ಮೊಹಮದ್ ಸಫ್ವಾತ್ ವಿರುದ್ದ 6-1, 6-4, 6-4 ಸೆಟ್‌ಗಳಿಂದ ಜಯ ಸಾಧಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News