18,289 ಕೋಟಿ ರೂ. ಪರಿಹಾರ: ಸಾಲ ಪಡೆಯುವ ಆಯ್ಕೆಗೆ ರಾಜ್ಯದ ತೀರ್ಮಾನ; ಸಿಎಂ ಬಿಎಸ್‌ವೈ

Update: 2020-09-02 11:41 GMT

ಬೆಂಗಳೂರು, ಸೆ.2: ‘ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ) ಪರಿಹಾರದ ನಿಟ್ಟಿನಲ್ಲಿ ಕೇಂದ್ರ ಸರಕಾರ ನೀಡಿದ ಎರಡು ಆಯ್ಕೆಗಳ ಮೌಲ್ಯಮಾಪನದ ನಂತರ ರಾಜ್ಯ ಸರಕಾರ ಆಯ್ಕೆ 1ರ ಅಡಿಯಲ್ಲಿ ಒಟ್ಟು 18,289 ಕೋಟಿ ರೂ. ಪರಿಹಾರ ಪಡೆಯುವ ಆಯ್ಕೆಯನ್ನು ತನ್ನ ಆದ್ಯತೆಯನ್ನಾಗಿ ತೀರ್ಮಾನಿಸಿದೆ. ಪ್ರಚಲಿತ ಹಣಕಾಸು ವರ್ಷದಲ್ಲಿ ಆದಾಯ ಹೆಚ್ಚಳಕ್ಕೆ ಇದು ಸಹಕಾರಿಯಾಗಲಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಬುಧವಾರ ಈ ಸಂಬಂಧ ಪತ್ರಿಕಾ ಪ್ರಕಟನೆ ನೀಡಿರುವ ಅವರು, ಜಿಎಸ್‌ಟಿ ಅಡಿಯಲ್ಲಿ ಪಾವತಿಸಬೇಕಾದ ಸಂಪೂರ್ಣ ಪರಿಹಾರದ ಅರ್ಹತೆಗೆ ಸಂಬಂಧಿಸಿದಂತೆ ರಾಜ್ಯಗಳ ಹಕ್ಕುಗಳನ್ನು ಕೇಂದ್ರ ಸರಕಾರ ಗುರುತಿಸಿದೆ ಮತ್ತು ಅಂಗೀಕರಿಸಿದೆ ಎಂದು ಗಮನಿಸಿ, ಇದರ ವಿಷಯವಾಗಿ ನಾವು ಸಂತೋಷಪಡುತ್ತೇವೆ. ಜಿಎಸ್‌ಟಿ ಪರಿಷತ್ತು ನಿರ್ಧರಿಸಿದಲ್ಲಿ ಪರಿವರ್ತನೆಯ ಅವಧಿಯಲ್ಲಿನ ಬಾಕಿ ಪರಿಹಾರವನ್ನು 2022ರ ಆಚೆಗೆ ಸೆಸ್ ವಿಸ್ತರಿಸುವ ಮೂಲಕ ಪೂರೈಸಲಾಗುವುದು ಎಂದು ತಿಳಿಸಿದ್ದಾರೆ.

ಆಯ್ಕೆ 1ರ ಅಡಿಯಲ್ಲಿ ಕರ್ನಾಟಕವು 18,289 ಕೋಟಿ ರೂ. ಪರಿಹಾರಕ್ಕೆ ಅರ್ಹವಾಗಿರುತ್ತದೆ. ಇದರಲ್ಲಿ 6,965 ಕೋಟಿ ರೂ. ಸಂಗ್ರಹಿಸಿದ ಸೆಸ್‌ನಿಂದ ಬರುತ್ತದೆ. ಉಳಿದ 11,324 ಕೋಟಿ ರೂ.ಗೆ ಕರ್ನಾಟಕವು ವಿಶೇಷ ವಿಂಡೋ ಮೂಲಕ ಸಾಲ ಪಡೆಯಲು ಅನುವು ಮಾಡಿಕೊಡಲಾಗಿದೆ. ಹಾಗೂ ಭವಿಷ್ಯದಲ್ಲಿ ಪರಿಹಾರ ಸೆಸ್ ನಿಧಿಯಿಂದ ಅಸಲು ಮತ್ತು ಬಡ್ಡಿ ಮರುಪಾವತಿಯ ಸಂಪೂರ್ಣ ಹೊರೆಯನ್ನು ಪೂರೈಸಲಾಗುವುದು ಎಂದವರು ತಿಳಿಸಿದ್ದಾರೆ.

ಆಯ್ಕೆ 2ರ ಅಡಿಯಲ್ಲಿ ರಾಜ್ಯವು ಒಟ್ಟು 25,508 ಕೋಟಿ ರೂ. ಪರಿಹಾರಕ್ಕೆ ಅರ್ಹವಾಗಿರುತ್ತದೆ. ಇದರಲ್ಲಿ 6,965 ಕೋಟಿ ರೂ. ಸಂಗ್ರಹಿಸಿದ ಸೆಸ್‌ನಿಂದ ಬರುತ್ತದೆ. ಉಳಿದ ಮೊತ್ತ 18,543 ಕೋಟಿ ರೂ.ಗೆ ಮಾರುಕಟ್ಟೆ ಸಾಲದ ಮೂಲಕ ಪಡೆಯಲು ಅವಕಾಶವಿರುತ್ತದೆ. ಆದರೆ, ಜಿಎಸ್‌ಡಿಪಿಯ ಶೇ.1ರಷ್ಟು(18,036 ಕೋಟಿ ರೂ.) ಯಾವುದೇ ಷರತ್ತಿಗೆ ಒಳಪಡದೆ ಇರುವ ಸಾಲ ಪಡೆಯಲು ರಾಜ್ಯವು ಪ್ರತ್ಯೇಕವಾಗಿ ಲಭ್ಯವಿರುವುದಿಲ್ಲ. ಇದರಿಂದ ರಾಜ್ಯವು ಪಡೆಯಬಹುದಾದ ಸಾಲದ ಮೊತ್ತವು ಗಣನೀಯವಾಗಿ ಅಂದರೆ 10,817 ಕೋಟಿ ರೂ. ಕಡಿಮೆಯಾಗುವುದು. ಆಯ್ಕೆ 2ರ ಅಡಿಯಲ್ಲಿ ಮೇಲಿನ ಮಾರುಕಟ್ಟೆ ಸಾಲದ ಮೇಲಿನ ಬಡ್ಡಿಯನ್ನು ರಾಜ್ಯವು ತನ್ನದೆ ಆದ ಸಂಪನ್ಮೂಲಗಳಿಂದ ಪಾವತಿಸಬೇಕಾಗುತ್ತದೆ.

ಆದುದರಿಂದ ಎರಡು ಆಯ್ಕೆಗಳನ್ನು ಮೌಲ್ಯ ಮಾಪನದ ನಂತರ ಆಯ್ಕೆ 1ರಿಂದ ರಾಜ್ಯದ ಹಣಕಾಸುಗಳಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಭಾವಿಸಿ, ಕರ್ನಾಟಕ ಆಯ್ಕೆ 1ಕ್ಕೆ ತನ್ನ ಆದ್ಯತೆಯನ್ನು ಕೇಂದ್ರ ಸರಕಾರಕ್ಕೆ ತಿಳಿಸಲು ತೀರ್ಮಾನಿಸಿದೆ. ಇದು ಪ್ರಚಲಿತ ಹಣಕಾಸು ವರ್ಷದಲ್ಲಿ ತನ್ನ ಅದಾಯವನ್ನು ಹೆಚ್ಚಿಸಲು ರಾಜ್ಯಕ್ಕೆ ಸಹಾಯವಾಗುತ್ತದೆ ಎಂದು ಬಿಎಸ್‌ವೈ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News