‘ಜಸ್ಟಿಸ್ ಅರುಣ್ ಮಿಶ್ರಾರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಲು ಅವಕಾಶ ನೀಡಿಲ್ಲ’

Update: 2020-09-02 13:10 GMT

ಹೊಸದಿಲ್ಲಿ: ಸುಪ್ರೀಂ ಕೋರ್ಟ್ ನ್ಯಾಯಾಧೀಶ ಜಸ್ಟಿಸ್ ಅರುಣ್ ಮಿಶ್ರಾ ಅವರು ನಿವೃತ್ತಿಯ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ವರ್ಚುವಲ್ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ತಮಗೆ ಮಾತನಾಡಲು ಅವಕಾಶ ನೀಡಲಾಗಿಲ್ಲ ಎಂದು ಹಿರಿಯ ವಕೀಲ ಮತ್ತು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಶನ್ ಅಧ್ಯಕ್ಷ ದುಷ್ಯಂತ್ ದವೆ ಆರೋಪಿಸಿದ್ದಾರೆ.

ಡಿಸೆಂಬರಿನಲ್ಲಿ ತಮ್ಮ ಸೇವಾವಧಿ ಮುಕ್ತಾಯಗೊಳ್ಳುವ ತನಕ ತಾವು ಸುಪ್ರೀಂ ಕೋರ್ಟ್ ನ ಯಾವುದೇ ಸಮಾರಂಭದಲ್ಲಿ ಭಾಗವಹಿಸುವುದಿಲ್ಲ ಎಂದೂ ಅವರು ಹೇಳಿದ್ದಾರೆ.

ಈ ಕುರಿತು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರಿಗೆ ಪತ್ರ ಬರೆದಿರುವ ದವೆ, ಸಮಾರಂಭದಲ್ಲಿ ತನ್ನನ್ನು ಮೌನದಿಂದಿರುವಂತೆ ಮಾಡಲಾಯಿತು ಹಾಗೂ ಕಾರ್ಯಕ್ರಮಕ್ಕೆ ಆಹ್ವಾನಿಸಿದ ಹೊರತಾಗಿಯೂ ಮಾತನಾಡದಂತೆ ಮಾಡಲಾಯಿತು. ಬೀಳ್ಕೊಡುಗೆ ಸಮಾರಂಭದಲ್ಲಿ ತಾನು ಕೆಲವರಿಗೆ ಇಷ್ಟವಾಗದ್ದನ್ನು ಹೇಳಬಹುದೆಂಬ ಭಯದಿಂದ ಹೀಗೆ ಆಗಿರಬಹುದು ಎಂದು ಪ್ರಶಾಂತ್ ಭೂಷಣ್  ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಭೂಷಣ್ ರ ವಕೀಲರಾಗಿದ್ದ ದವೆ ಹೇಳಿದರು.

“ಜಸ್ಟಿಸ್ ಅರುಣ್ ಮಿಶ್ರಾ ಅವರ ನಿವೃತ್ತ ಜೀವನ ಸುಖಕರವಾಗಲೆಂದು ಹಾಗೂ ಅವರು ದೀರ್ಘಕಾಲ ಸಂತೋಷದಿಂದ ಬಾಳಬೇಕೆಂದು ಬಾರ್ ಅಸೋಸಿಯೇಶನ್ ಅವರಿಗೆ ಶುಭ ಹಾರೈಕೆಗಳನ್ನು ನೀಡಿದೆ ಜತೆಗೆ ಅವರಿಗೆ ಆತ್ಮಾವಲೋಕನ ಮಾಡಲು ಮಹಾಬಲೇಶ್ವರ ದೇವರು ಶಕ್ತಿ ನೀಡಲಿ” ಎಂದು ದುಷ್ಯಂತ್ ದವೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News