ಸಾಕೇತ್ ಗೋಖಲೆ, Thequint ಸೇರಿ ಹಲವರ ವಿರುದ್ಧ ‘ದಿಲ್ಲಿ ರಯಟ್ಸ್’ ಲೇಖಕರಿಂದ ದೂರು

Update: 2020-09-03 16:27 GMT

 ಹೊಸದಿಲ್ಲಿ, ಸೆ. 3: ನಂಬಿಕೆ ದ್ರೋಹ, ವಂಚನೆ, ಕಿಡಿಗೇಡಿತನ ಹಾಗೂ ಆಸ್ತಿ ದುರಪಯೋಗ ಆರೋಪದಲ್ಲಿ ಹಲವು ವ್ಯಕ್ತಿಗಳು ಹಾಗೂ ಪ್ರಕಾಶನದ ವಿರುದ್ಧ ‘ದಿಲ್ಲಿ ರಯಟ್ಸ್ 2020: ದಿ ಅನ್‌ಟೋಲ್ಡ್ ಸ್ಟೋರಿ’ ಪುಸ್ತಕದ ಲೇಖಕರು ಗುರುವಾರ ಕ್ರಿಮಿನಲ್ ದೂರು ದಾಖಲಿಸಿದ್ದಾರೆ. ಪುಸ್ತಕ ಪ್ರಕಾಶನವನ್ನು ಹಿಂದೆಗೆದುಕೊಂಡ ಬ್ಲೂಮ್ಸ್‌ಬರಿ ಇಂಡಿಯಾ, ನ್ಯೂಸ್ ವೆಬ್‌ಸೈಟ್ಸ್‌ಗಳಾದ ‘Thequint’, ‘ನ್ಯೂಸ್‌ಲಾಂಡ್ರಿ’ ಹಾಗೂ ಶಿಕ್ಷಣ ತಜ್ಞೆ ನಂದಿನಿ ಸುಂದರ್, ಲೇಖಕ ಆಟಿಶ್ ತಸೀರ್, ಸಾಮಾಜಿಕ ಹೋರಾಟಗಾರ ಸಾಕೇತ್ ಗೋಖಲೆ, ಪತ್ರಕರ್ತ ಅರ್ಫಾ ಖಾನುಂ ಶೆರ್ವಾನಿ, ಲೇಖಕರಾದ ವಿಲಿಯಂ ಡಾಲ್ರಿಂಪ್ಲ್, ಮೀನಾ ಕಂದಸಾಮಿ ಹಾಗೂ ಇತರ ಅಪರಿಚಿತ ವ್ಯಕ್ತಿಗಳ ವಿರುದ್ಧ ಲೇಖಕರು ದಿಲ್ಲಿ ಪೊಲೀಸ್ ಆಯುಕ್ತ ಎಸ್.ಎನ್ ಶ್ರೀವಾತ್ಸವ ಹಾಗೂ ಸೈಬರ್ ಕ್ರೈಮ್ ಘಟಕದಲ್ಲಿ ದೂರು ದಾಖಲಿಸಿದ್ದಾರೆ.

ದೂರಿನಲ್ಲಿ ಲೇಖಕಿ ಮೋನಿಕಾ ಅರೋರಾ, ಪ್ರಕಾಶನ ಸಂಸ್ಥೆ ಬ್ಲೂಮ್ಸ್‌ಬರಿ ಇಂಡಿಯಾ ತನ್ನ ಪುಸ್ತಕದ ಪಿಡಿಎಫ್ ಆವೃತ್ತಿಯನ್ನು ಸೋರಿಕೆ ಮಾಡಿದೆ. ಇದರಿಂದ ತನ್ನ ಪುಸ್ತಕದ ಭವಿಷ್ಯದ ಎಲ್ಲ ಮಾರಾಟಕ್ಕೆ ಅಡ್ಡಿ ಉಂಟಾಗುತ್ತದೆ ಎಂದು ಹೇಳಿದ್ದಾರೆ.

ನಂದಿನಿ ಸುಂದರ್, ‘the quint’ ಹಾಗೂ ‘ನ್ಯೂಸ್ ಲಾಂಡ್ರಿ’ ಕಾನೂನು ಬಾಹಿರವಾಗಿ ಪುಸ್ತಕವನ್ನು ಸ್ವೀಕರಿಸಿದ್ದಾರೆ ಹಾಗೂ ಕದ್ದ ಸೊತ್ತನ್ನು ಉಳಿಸಿಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಕ್ರಿಮಿನಲ್ ಬೆದರಿಕೆ, ಎರಡು ವರ್ಗಗಳ ನಡುವೆ ದ್ವೇಷ ಹಾಗೂ ಶತ್ರುತ್ವದ ಸೃಷ್ಟಿ, ಉತ್ತೇಜನಕಾರಿ ಹೇಳಿಕೆ ಹಾಗೂ ಪುಸ್ತಕ ಪ್ರಕಟನೆ ಹಿಂದೆಗೆಯುವಂತೆ ಪ್ರಕಾಶಕರಿಗೆ ಒತ್ತಡ ಹೇರಿರುವುದರಲ್ಲಿ ತಸೀರ್, ಗೋಖಲೆ, ಶೆರ್ವಾನಿ ಹಾಗೂ ಡಾಲ್ರಿಂಪ್ಲ್ ತೊಡಗಿಸಿಕೊಂಡಿದ್ದಾರೆ ಎಂದು ಅರೋರಾ ಆರೋಪಿಸಿದ್ದಾರೆ.

ಮೋನಿಕಾ ಅರೋರಾ, ಸೋನಾಲಿ ಚಿತಾಲ್ಕರ್ ಹಾಗೂ ಪ್ರೇರಣಾ ಮಲ್ಹೋತ್ರರ ‘ದಿಲ್ಲಿ ರಯಟ್ 2020: ದಿ ಅನ್‌ಟೋಲ್ಡ್ ಸ್ಟೋರಿ’ ಪುಸ್ತಕವನ್ನು ಬ್ಲೂಮ್‌ಬರಿ ಇಂಡಿಯಾ ಸೆಪ್ಟಂಬರ್‌ನಲ್ಲಿ ಬಿಡುಗಡೆಗೊಳಿಸಿತ್ತು. ಆದರೆ, ಈ ಪುಸ್ತಕದ ಬಿಡುಗಡೆ ಸಮಾರಂಭಕ್ಕೆ ಬಿಜೆಪಿಯ ನಾಯಕ ಕಪಿಲ್ ಮಿಶ್ರಾ ಅವರನ್ನು ಆಹ್ವಾನಿಸಿರುವುದರ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಬ್ಲೂಮ್‌ಬರಿ ಇಂಡಿಯಾದ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News