×
Ad

​ದೇಶದಲ್ಲಿ ಹೃದಯಾಘಾತ ಪ್ರಕರಣ ಗಣನೀಯ ಹೆಚ್ಚಳ

Update: 2020-09-04 09:17 IST
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ : ದೇಶದ ಜನಾರೋಗ್ಯದ ಮೇಲೆ ಹೃದ್ರೋಗ ಭಾರಿ ಪ್ರಮಾಣ ಬೀರಿದ್ದು, ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿ ಹೃದಯಾಘಾತದಿಂದ ಮೃತಪಟ್ಟವರ ಸಂಖ್ಯೆ ಶೇಕಡ 53ರಷ್ಟು ಏರಿಕೆ ಕಂಡಿದೆ.

ದೇಶದಲ್ಲಿ 2014ರಲ್ಲಿ ಒಟ್ಟು 18,309 ಮಂದಿ ಹೃದಯಾಘಾತಕ್ಕೆ ಬಲಿಯಾಗಿದ್ದರೆ, 2019ರಲ್ಲಿ ಹೃದಯಾಘಾತದಿಂದ 28,005 ಮಂದಿ ಮೃತಪಟ್ಟಿದ್ದಾರೆ ಎನ್ನುವುದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ಅಂಕಿ ಅಂಶಗಳಿಂದ ತಿಳಿದುಬಂದಿದೆ.

ಹದಿನಾಲ್ಕು ವರ್ಷಕ್ಕಿಂತ ಕೆಳಗಿನವರು ಮತ್ತು 14-18 ವರ್ಷದ ವಯೋಮಾನದವರನ್ನು ಹೊರತುಪಡಿಸಿದರೆ ಉಳಿದಂತೆ ಇತರ ಎಲ್ಲ ವಯೋಮಾನದ ವರು ಹೃದ್ರೋಗಕ್ಕೆ ಬಲಿಯಾಗುತ್ತಿರುವ ಪ್ರಮಾಣ ನಿರಂತರ ಏರಿಕೆ ಕಂಡಿದೆ. 2016ರಿಂದೀಚೆಗೆ ಎನ್‌ಸಿಆರ್‌ಬಿ ವಯೋಮಾನಕ್ಕೆ ಅನುಗುಣವಾಗಿ ಅಂಕಿ ಅಂಶಗಳನ್ನು ದಾಖಲಿಸುತ್ತಿದೆ.

ದೇಶದಲ್ಲಿ 2015ರಲ್ಲಿ 18,820, 2016ರಲ್ಲಿ 21,914, 2017ರಲ್ಲಿ 23,246, 2018ರಲ್ಲಿ 25,764 ಹೃದ್ರೋಗದಿಂದಾದ ಸಾವಿನ ಪ್ರಕರಣಗಳು ದಾಖಲಾಗಿವೆ.

ಹೃದ್ರೋಗಕ್ಕೆ ಬಲಿಯಾದ 18-30 ವರ್ಷ ವಯೋಮಿತಿಯವರು 2016ರಲ್ಲಿ 1940ರಷ್ಟಿದ್ದರೆ, ಈ ಸಂಖ್ಯೆ ಕಳೆದ ವರ್ಷ 2381ಕ್ಕೇರಿದೆ. 30-45 ವಯೋಮಾನದವರಲ್ಲೂ ಇದೇ ಪ್ರವೃತ್ತಿ ಕಂಡುಬಂದಿದ್ದು, 2016ರಲ್ಲಿ 6646 ಮಂದಿ ಬಲಿಯಾಗಿದ್ದರೆ, 2019ರಲ್ಲಿ ಈ ಸಂಖ್ಯೆ 7752ಕ್ಕೇರಿದೆ. 45-60 ವಯೋವರ್ಗದಲ್ಲಿ ಸಾವಿನ ಸಂಖ್ಯೆ 2016ರಲ್ಲಿ 8,862 ಇದ್ದುದು 2016ರಲ್ಲಿ 11,042ಕ್ಕೇರಿದೆ. 60ಕ್ಕಿಂತ ಅಧಿಕ ವಯಸ್ಸಿನ 6612 ಮಂದಿ ಕಳೆದ ವರ್ಷ ಹೃದಯಾಘಾತದಿಂದ ಸಾವನ್ನಪ್ಪಿದ್ದರೆ, 2016ರಲ್ಲಿ ಈ ಸಂಖ್ಯೆ 4275 ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News