ಎರಡು ಬಾರಿ ಮತ ಚಲಾಯಿಸಲು ಪ್ರಯತ್ನಿಸಿ ಎಂದ ಟ್ರಂಪ್

Update: 2020-09-04 06:39 GMT

 ವಾಶಿಂಗ್ಟನ್, ಸೆ.4: ಅತ್ಯಂತ ನಿರ್ಣಾಯಕ ರಾಜಕೀಯ ಹೋರಾಟದ ಕಣವಾಗಿರುವ ಉತ್ತರ ಕರೊಲಿನಾದಲ್ಲಿನ ನಿವಾಸಿಗಳಿಗೆ ನವೆಂಬರ್ 3ರಂದು ನಡೆಯಲಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಒಮ್ಮೆ ಮೇಲ್‌ನಲ್ಲಿ ಹಾಗೂ ಮತ್ತೊಮ್ಮೆ ವೈಯಕ್ತಿಕವಾಗಿ ಎರಡು ಬಾರಿ ಮತ ಚಲಾಯಿಸಲು ಪ್ರಯತ್ನಿಸುವಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮನವಿ ಮಾಡಿದ್ದಾರೆ. ಟ್ರಂಪ್ ಅವರ ಈ ಒತ್ತಾಯಕ್ಕೆ ಅಮೆರಿಕದಲ್ಲಿ ಕೋಲಾಹಲ ಎದ್ದಿದೆ.

ಕರೋನ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಕೆಲವು ರಾಜ್ಯಗಳಲ್ಲಿ ವಿಸ್ತರಿಸಿರುವ ಮೇಲ್ ಇನ್ ಮತದಾನವು ಮತ್ತಷ್ಟು ವಂಚನೆಯನ್ನು ಹೆಚ್ಚಿಸುತ್ತದೆ ಹಾಗೂ ನವೆಂಬರ್ ಚುನಾವಣೆಯನ್ನು ಅಡ್ಡಿಪಡಿಸುತ್ತದೆ ಎಂದು ಟ್ರಂಪ್ ಪದೇ ಪದೇ ಪ್ರತಿಪಾದಿಸಿದ್ದಾರೆ. ಅಮೆರಿಕದಲ್ಲಿ ಯಾವುದೇ ರೀತಿಯ ಮತದಾನದ ವಂಚನೆ ಬಹಳ ವಿರಳ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಚುನಾವಣೆಯಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಮತ ಚಲಾಯಿಸುವುದು ಕಾನೂನು ಬಾಹಿರ. ಉತ್ತರ ಕರೊಲಿನಾ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಮತ ಚಲಾಯಿಸುವುದು ಹಾಗೂ ಇನ್ನೊಬ್ಬರನ್ನು ಹಾಗೆ ಮಾಡಲು ಪ್ರೇರೇಪಿಸುವುದು ಅಪರಾಧವಾಗಿದೆ.

ಉತ್ತರ ಕರೊಲಿನಾಕ್ಕೆ ಶುಕ್ರವಾರ ಮತಪತ್ರಗಳನ್ನು ಕಳುಹಿಸಿಕೊಡಲಾಗುತ್ತದೆ.

"ನಮ್ಮ ಚುನಾವಣೆಯಲ್ಲಿ ಅವ್ಯವಸ್ಥೆ ಸೃಷ್ಟಿಸುವ ಕಾನೂನನ್ನುಮುರಿಯುವಂತೆ ಉತ್ತರ ಕರೊಲಿನಾದ ಪ್ರಜೆಗಳನ್ನು ಅತಿರೇಕದಿಂದ ಪ್ರೋತ್ಸಾಹಿಸಿದ್ದಾರೆ.ನೀವು ಮತ ಚಲಾಯಿಸಿರುವುದನ್ನು ಖಚಿತಪಡಿಸಿಕೊಳ್ಳಿ. ಆದರೆ ಎರಡು ಬಾರಿ ಮತ ಚಲಾಯಿಸಬೇಡಿ. ನವೆಂಬರ್‌ನಲ್ಲಿ ಜನರ ಇಚ್ಛೆಯನ್ನು ಎತ್ತಿಹಿಡಿಯಲು ನನ್ನ ಅಧಿಕಾರದಲ್ಲಿ ಎಲ್ಲವನ್ನೂ ಮಾಡುತ್ತೇನೆ'' ಎಂದು ಡೆಮಾಕ್ರಾಟ್ ರಾಜ್ಯ ಅಟಾರ್ನಿ ಜನರಲ್ ಜೋಶ್ ಸ್ಟೈನ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಟ್ರಂಪ್ ಎರಡು ಬಾರಿ ಮತ ಚಲಾಯಿಸಲು ಒತ್ತಾಯಿಸಿದ್ದಾರೆ ಎಂಬುದನ್ನು ಟ್ರಂಪ್ ಪ್ರಚಾರವನ್ನು ನೋಡಿಕೊಳ್ಳುತ್ತಿರುವ ಶ್ವೇತಭವನ ನಿರಾಕರಿಸಿದೆ.

ಟ್ರಂಪ್ ಗುರುವಾರ ಬೆಳಗ್ಗೆ ಮತ್ತೊಮ್ಮೆ ಸರಣಿ ಟ್ವೀಟ್‌ಗಳ ಮೂಲಕ ಮೇಲ್ ಮೂಲಕ ಹಾಗೂ ಬಳಿಕ ವೈಯಕ್ತಿಕವಾಗಿ ಮತ ಚಲಾಯಿಸಲು ಪ್ರಯತ್ನಿಸುವಂತೆ ತನ್ನ ಬೆಂಬಲಿಗರನ್ನು ಮತ್ತೊಮ್ಮೆ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News