ಲೈಂಗಿಕ ಕಿರುಕುಳ ಆರೋಪ: ಜಿಲ್ಲಾ ನ್ಯಾಯಾಧೀಶರ ವಿರುದ್ಧ ಕಾನೂನು ಕ್ರಮಕ್ಕೆ ಸುಪ್ರೀಂ ತಡೆ

Update: 2020-09-04 16:02 GMT

ಹೊಸದಿಲ್ಲಿ,ಸೆ.4: ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಆರೋಪಿಯಾಗಿರುವ ಜಿಲ್ಲಾ ನ್ಯಾಯಾಧೀಶರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮಧ್ಯಪ್ರದೇಶ ಹೈಕೋರ್ಟ್ ನೀಡಿದ ಆದೇಶಕ್ಕೆ ಸುಪ್ರೀಂಕೋರ್ಟ್ ಶುಕ್ರವಾರ ತಡೆಯಾಜ್ಞೆ ವಿಧಿಸಿದೆ.

‘‘ ಯಾರಾದರೊಬ್ಬ ನ್ಯಾಯಾಧೀಶರು ಭಡ್ತಿಯನ್ನು ಪಡೆಯುವ ಹಂತದಲ್ಲಿರುವಾಗ ತಕ್ಷಣವೇ ಅವರನ್ನು ಕೆಟ್ಟವನ್ನಾಗಿ ಬಿಂಬಿಸಲಾಗುತ್ತಿದೆ. ಇಲ್ಲದಿದ್ದಲ್ಲ್ಲಿ ಆತ ಒಳ್ಳೆಯವನಾಗಿರುತ್ತಾನೆ’’ ಎಂದು ಪ್ರಕರಣದ ವಿಚಾರಣೆ ನಡೆಸಿದ ಭಾರತದ ಮುಖ್ಯ ನ್ಯಾಯಾಧೀಶ ಎಸ್.ಎ.ಬೊಬ್ಡೆ ಖಾರವಾಗಿ ಹೇಳಿದರು.

   ತನ್ನ ವಿರುದ್ಧ ಹೊರಿಸಲಾದ ಲೈಂಗಿಕ ಕಿರುಕುಳದ ಆರೋಪವನ್ನು ಪ್ರಶ್ನಿಸಿ ಮಧ್ಯಪ್ರದೇಶದ ಹಿರಿಯ ಜಿಲ್ಲಾ ನ್ಯಾಯಾಧೀಶರು ಸಲ್ಲಿಸಿದ ಮನವಿಯ ವಿಚಾರಣೆಯನ್ನು ಬೊಬ್ಡೆ ನೇತೃತ್ವದ ನ್ಯಾಯಪೀಠ ಕೈಗೆತ್ತಿಕೊಂಡಿತ್ತು. 2018ರಲ್ಲಿ ಮಹಿಳಾ ಮ್ಯಾಜಿಸ್ಟ್ರೇಟ್‌ರೋರ್ವರು , ಈ ನ್ಯಾಯಾಧೀಶರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದರು.

 ತನ್ನ ವಿರುದ್ಧ ಹೊರಿಸಲಾದ ಲೈಂಗಿಕ ಕಿರುಕುಳದ ಆರೋಪಗಳನ್ನು ರದ್ದುಪಡಿಸಬೇಕೆಂದು ಕೋರಿ ತಾನು ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಲು ಮಧ್ಯಪ್ರದೇಶ ಹೈಕೋರ್ಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಜಿಲ್ಲಾ ನ್ಯಾಯಾಧೀಶ ಸುಪ್ರೀಂಕೋರ್ಟ್ ಮೆಟ್ಟಲೇರಿದ್ದರು.

     ಸುಪ್ರೀಂಕೋರ್ಟ್‌ನಲ್ಲಿ ಅರ್ಜಿದಾರರ ಪರವಾಗಿ ವಾದಿಸಿದ ಹಿರಿಯ ನ್ಯಾಯವಾದಿ ಕ. ಆರ್.ಆರ್. ಬಾಲಸುಬ್ರಹ್ಮಣ್ಯ ಅವರು,ಹೈಕೋರ್ಟ್ ಆದೇಶದ ಪ್ರಕಾರ ಜಿಲ್ಲಾ ನ್ಯಾಯಾಧೀಶರಿಗೆ ನೋಟಿಸ್ ನೀಡದೆಯೇ ಅವರ ವಿರುದ್ಧ ತನಿಖೆ ನಡೆಸಲಾಗಿದ್ದು, ಅದರಲ್ಲಿ ಅವರನ್ನು ದೋಷಿಯೆಂದು ಪರಿಗಣಿಸಲಾಗಿದೆ. ಆದರೆ ತನಿಖಾ ವರದಿಯನ್ನು ಲಿಂಗಸಮಾನತೆ ಜಾಗೃತಾ ಸಮಿತಿಗೆ ಕಳುಹಿಸಲಾಗಿತ್ತು. ಆದರೆ ದೂರುದಾರೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ಗೆೆ ಹಲವಾರು ಬಾರಿ ವಿಜ್ಞಾಪನಾ ಪತ್ರಗಳನ್ನು ಕಳುಹಿಸಿದ ಹೊರತಾಗಿಯೂ ಆಕೆ ಪುರಾವೆಗಳನ್ನು ಸಲ್ಲಿಸಲು ಬಂದಿರಲಿಲ್ಲ ಎಂದು ತಿಳಿಸಿದರು.

  ತನ್ನ ಕಕ್ಷಿದಾರನು ದೋಷಿಯೆಂದು ಲಿಂಗತ್ವ ಸಮಿತಿಯು ಎಲ್ಲೂ ಹೇಳಿಲ್ಲ. ಆದರೆ ದೂರುದಾರೆ ಹಾಗೂ ಅರ್ಜಿದಾರನ ನಡುವೆ ವಾಟ್ಸಾಪ್ ಸಂದೇಶಗಳು ವಿನಿಮಯಗೊಂಡಿದ್ದಾಗಿ ತಿಳಿಸಿದೆ. ಜಿಲ್ಲಾ ನ್ಯಾಯಾಧೀಶರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಸಮಿತಿಯು ಬಯಸಿದ್ದಾಗಿ ಅವರು ಹೇಳಿದ್ದಾರೆ.

34 ವರ್ಷಗಳಿಂದ ಸೇವೆಯಲ್ಲಿರುವ ನ್ಯಾಯಾಧೀಶರು, ಈ ಆರೋಪಗಳಿಂದಾಗಿ ಮುಜುಗರವನ್ನು ಎದುರಿಸುತ್ತಿದ್ದಾರೆ. ಅವರು ಭಡ್ತಿಗೆ ಪರಿಗಣಿಸಲ್ಪಟ್ಟಿದ್ದು, ಹಾಗಾದಲ್ಲಿ ಅವರ ನಿವೃತ್ತಿಯು ಮುಂದೂಡಲಪಡಲ್ಪಡಲಿದೆ ಎಂದು ನ್ಯಾಯವಾದಿ ಬಾಲಸುಬ್ರಹ್ಮಣ್ಯಂ ತಿಳಿಸಿದರು.

  ವಾದಗಳನ್ನು ಆಲಿಸಿದ ಸರ್ವೋಚ್ಚ ನ್ಯಾಯವಾಲಯವು ಅರ್ಜಿದಾರರ ವಿರುದ್ಧ ಕಾನೂನುಕ್ರಮ ಕೈಗೊಳ್ಳುವುದಕ್ಕೆ ತಡೆಯಾಜ್ಞೆ ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News