×
Ad

ಮೊದಲ ಟ್ವೆಂಟಿ-20: ಆಸ್ಟ್ರೇಲಿಯ ವಿರುದ್ಧ ಇಂಗ್ಲೆಂಡ್‌ಗೆ ರೋಚಕ ಗೆಲುವು

Update: 2020-09-05 10:55 IST

ಲಂಡನ್, ಸೆ.5: ಸೌತಾಂಪ್ಟನ್‌ನಲ್ಲಿ ಶುಕ್ರವಾರ ನಡೆದ ಮೊದಲ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಆರಂಭಿಕ ಹಿನ್ನಡೆಗೆ ಚೇತರಿಸಿಕೊಂಡ ಇಂಗ್ಲೆಂಡ್ ಕೊನೆಯ ಎಸೆತದಲ್ಲಿ ಕೇವಲ 2 ರನ್‌ನಿಂದ ರೋಚಕ ಜಯ ದಾಖಲಿಸಿದೆ.

ಆರು ತಿಂಗಳ ಬಳಿಕ ಮೊದಲ ಸ್ಪರ್ಧಾತ್ಮಕ ಪಂದ್ಯ ಗೆಲ್ಲಬೇಕೆಂಬ ಆಸ್ಟ್ರೇಲಿಯ ಆಸೆ ಕೈಗೂಡಲಿಲ್ಲ. ಡೇವಿಡ್ ವಾರ್ನರ್(58) ಹಾಗೂ ಆ್ಯರೊನ್ ಫಿಂಚ್(46) ಮೊದಲ ವಿಕೆಟ್‌ಗೆ 98 ರನ್ ಜೊತೆಯಾಟ ನಡೆಸಿ ಉತ್ತಮ ಆರಂಭ ಒದಗಿಸಿದರು.ಒಂದು ಹಂತದಲ್ಲಿ 2 ವಿಕೆಟ್ ನಷ್ಟಕ್ಕೆ 124 ರನ್ ಗಳಿಸಿದ್ದ ಆಸ್ಟ್ರೇಲಿಯ 14 ಎಸೆತಗಳಲ್ಲಿ 9 ರನ್‌ಗೆ 4 ವಿಕೆಟ್‌ಗಳನ್ನು ಕಳೆದುಕೊಂಡು 148 ರನ್‌ಗೆ 6 ವಿಕೆಟ್‌ಗಳನ್ನು ಕಳೆದುಕೊಂಡಿತು.

ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ 7 ವಿಕೆಟ್‌ಗಳ ನಷ್ಟಕ್ಕೆ 162 ರನ್ ಗಳಿಸಿತ್ತು. ಗೆಲ್ಲಲು ಸಾಧಾರಣ ಸವಾಲು ಬೆನ್ನಟ್ಟಿದ ಆಸ್ಟ್ರೇಲಿಯ  ಟಾಮ್ ಕರನ್ಸ್ ಎಸೆದ ಅಂತಿಮ ಓವರ್‌ನಲ್ಲಿ 15 ರನ್ ಗಳಿಸಬೇಕಾದ ಒತ್ತಡಕ್ಕೆ ಸಿಲುಕಿತು.

ಕ್ರೀಸ್‌ನಲ್ಲಿದ್ದ ಮಾರ್ಕಸ್ ಸ್ಟೋನಿಸ್ ಮೊದಲ ಎಸೆತದಲ್ಲಿ ರನ್ ಗಳಿಸಲಿಲ್ಲ. 2ನೇ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದರು. 3ನೇ ಎಸೆತದಲ್ಲಿ ರನ್ ಬರಲಿಲ್ಲ. ಕೊನೆಯ ಎಸೆತದಲ್ಲಿ ಗೆಲ್ಲಲು 5 ರನ್ ಅಗತ್ಯವಿದ್ದಾಗ ಸ್ಟೋನಿಸ್ 2 ರನ್ ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಇಂಗ್ಲೆಂಡ್ 2 ರನ್ ರೋಚಕ ಜಯ ದಾಖಲಿಸಿತು. ಆಸ್ಟ್ರೇಲಿಯ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಪಾಕ್ ವಿರುದ್ಧ ಸರಣಿ ಜಯಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಇಂಗ್ಲೆಂಡ್ ಬ್ಯಾಟಿಂಗ್‌ನಲ್ಲಿ ಡೇವಿಡ್ ಮಲಾನ್ ಉತ್ತಮ ಪ್ರದರ್ಶನ ಮುಂದುವರಿಸಿ 66 ರನ್ ಕೊಡುಗೆ ನೀಡಿದರು. ಓಪನರ್ ಜೋಸ್ ಬಟ್ಲರ್ 29 ಎಸೆತಗಳಲ್ಲಿ 44 ರನ್ ಸಿಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News