ರಿಯಾ ಸಹೋದರನನ್ನು ಸೆ.9ರ ತನಕ ಎನ್‌ಸಿಬಿಗೆ ಒಪ್ಪಿಸಿದ ಮುಂಬೈ ನ್ಯಾಯಾಲಯ
Update: 2020-09-05 15:03 IST
ಮುಂಬೈ, ಸೆ.5: ನಟ ರಿಯಾ ಚಕ್ರವರ್ತಿಯ ಸಹೋದರ ಶೋವಿಕ್ ಹಾಗೂ ಸುಶಾಂತ್ ಸಿಂಗ್ ರಾಜ್‌ಪೂತ್‌ರ ಮ್ಯಾನೇಜರ್ ಸ್ಯಾಮುಯೆಲ್ ಮಿರಾಂಡಾ ಅವರನ್ನು ಮುಂಬೈ ನ್ಯಾಯಾಲಯವು ಸೆಪ್ಟಂಬರ್ 9ರ ತನಕ ಮಾದಕವಸ್ತು ನಿಯಂತ್ರಣ ಬ್ಯುರೋಗೆ (ಎನ್‌ಸಿಬಿ)ಒಪ್ಪಿಸಿದೆ.
ಜೂನ್‌ನಲ್ಲಿ ಸಾವನ್ನಪ್ಪಿರುವ ನಟ ಸುಶಾಂತ್ ಸಿಂಗ್ ಸುತ್ತಲಿನ ಡ್ರಗ್ಸ್ ಸೇವನೆಯ ಆರೋಪದ ಕುರಿತು ತನಿಖೆ ನಡೆಸುತ್ತಿರುವ ಎನ್‌ಸಿಬಿಗೆ ಡ್ರಗ್ ಪೆಡ್ಲರ್ ಇಬ್ರಾಹೀಂರನ್ನು 14 ದಿನಗಳ ಕಾಲ ನ್ಯಾಯಾಲಯ ಒಪ್ಪಿಸಿದೆ. ಶೋವಿಕ್ ಚಕ್ರವರ್ತಿ ಹಾಗೂ ಸ್ಯಾಮುಯೆಲ್ ಮಿರಾಂಡ ಅವರು ಅಬ್ದುಲ್ ಬಸಿತ್ ಮೂಲಕ ಇಬ್ರಾಹೀಂ ಹಾಗೂ ಝೈದ್ ವಿಲಾಟ್ರರಿಂದ ಹಲವು ಬಾರಿ ಡ್ರಗ್ಸ್‌ನ್ನು ಖರೀದಿಸಿರುವ ನಿದರ್ಶನವಿದೆ ಎಂದು ಎನ್‌ಸಿಬಿ ಮೂಲಗಳು ತಿಳಿಸಿವೆ.
ಶೋವಿಕ್ ಹಾಗೂ ಮಿರಾಂಡರನ್ನು ಎನ್‌ಸಿಬಿ ಶುಕ್ರವಾರ ಬಂಧಿಸಿತ್ತು. ಮಾದಕ ವಸ್ತು ನಿಗ್ರಹ ಕಾನೂನಿನ ಅನೇಕ ಸೆಕ್ಷನ್‌ಗಳಡಿ ಕೇಸ್ ದಾಖಲಿಸಲಾಗಿದೆ.