ಎಡನೀರು ಮಠದ ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ ನಿಧನ

Update: 2020-09-06 05:28 GMT

ಕಾಸರಗೋಡು, ಸೆ.6: ಎಡನೀರು ಮಠದ ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ ಶನಿವಾರ ರಾತ್ರಿ ನಿಧನರಾದರು. ಅವರಿಗೆ 79 ವರ್ಷ ವಯಸ್ಸಾಗಿತ್ತು.

ಕೆಲ ದಿನಗಳಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಸ್ವಾಮೀಜಿ ರಾತ್ರಿ 12:45ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. 

ಸ್ವಾಮೀಜಿ ಕೆಲದಿನಗಳ ತಮ್ಮ  ಚಾತುರ್ಮಾಸ್ಯ ವ್ರತ ಪೂರ್ಣಗೊಳಿಸಿದ್ದರು. ಸುದೀರ್ಘ ಕಾಲ ಚಾತುರ್ಮಾಸ್ಯ ವ್ರತಾನುಷ್ಠಾನಗೈದ ಬೆರಳೆಣಿಕೆಯ ಮಠಾಧಿಪತಿಗಳಲ್ಲಿ ಎಡನೀರು ಸ್ವಾಮೀಜಿ ಕೂಡಾ ಒಬ್ಬರಾಗಿದ್ದಾರೆ.

ಕೇರಳದ ಏಕೈಕ ಶ್ರೀಶಂಕರ ಪೀಠಾಧಿಪತಿಯಾಗಿದ್ದ ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ ಅವರು ತೋಟಕಾಚಾರ್ಯ ಪರಂಪರೆಯ ಯತಿ ಶ್ರೇಷ್ಠರಾಗಿ ಧಾರ್ಮಿಕ,  ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರಗಳ ಪುನರುತ್ಥಾನದಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ.

 ಯಕ್ಷಗಾನ, ಸಂಗೀತ ಕಲೆಗಳಲ್ಲಿ ಆಸಕ್ತಿ ಹೊಂದಿದ್ದ ಶ್ರೀಗಳು ಸ್ವತಃ ಭಾಗವತರಾಗಿದ್ದರು.
ತಮ್ಮ 19ನೇ ವಯಸ್ಸಿನಲ್ಲಿ ಸನ್ಯಾಸ ಸ್ವೀಕರಿಸಿದ್ದ ಅವರು ತಮ್ಮ ಪೂರ್ವಾಶ್ರಮದ ತಮಧೆಯ ಸಹೋದರ ಶ್ರೀಈಶ್ವರಾನಂದ ಭಾರತೀ ಶ್ರೀಗಳಿಂದ ಸನ್ಯಾಸತ್ವ ಸ್ವೀಕರಿಸಿದ್ದರು.

ವಿಶೇಷವೆಂಬಂತೆ ಸಂವಿಧಾನದ ಮೂಲ ಆಶಯಗಳಿಗೆ ಸಂಬಂಧಿಸಿದ ಮಹತ್ತರ ಸಂವಿಧಾನ ನೂತನ ತಿದ್ದುಪಡಿಗೆ ಕಾರಣವಾದ1970ರ ಮಾ.21ರ ಶ್ರೀಕೇಶವಾಶನಂದ ಭಾರತಿ ಆ್ಯಕ್ಟ್ ಜಾರಿಗೆ ಬರುವಲ್ಲಿ ದೇಶದಲ್ಲೇ ಗಮನಸೆಳೆದವರು.

ಭಾರತದ ಇತಿಹಾಸದಲ್ಲಿ ಶ್ರೀಕೇಶವಾನಂದ ಭಾರತೀ ವರ್ಸಸ್ ಕೇರಳ ಸರ್ಕಾರ ದಾವೆ ಸಂವಿಧಾನ ತಿದ್ದುಪಡಿ ಮೇಲಿನ ಇತಿಮಿತಿಗಳ ನಿಯಂತ್ರಣದ ಬಗ್ಗೆ ಉಲ್ಲೇಖಿಸಿರುವುದಾಗಿದೆ.

ಭೂ ಮಸೂದೆ ಕಾಯಿದೆ ಜಾರಿಗೆ ಬಂದ ವೇಳೆ ಅಂದಿನ ಕೇರಳ ಸರಕಾರ ಮಠದ ಭೂಮಿ ವಶಪಡಿಸಲು ಯತ್ನಿಸಿತ್ತು. ಆದರೆ ಎಡನೀರು ಶ್ರೀಗಳು ಸುಪ್ರೀಂ ಕೋರ್ಟ್‌ನಲ್ಲಿ ಮಠದ ಮೂಲ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ದಾವೆ ಹೂಡಿದಾಗ, ಆಗಿನ 12 ಮಂದಿ ನ್ಯಾಯಾಧೀಶರನ್ನೊಳಗೊಂಡ ಸಂವಿಧಾನಿಕ ಪೀಠ ಅವರ ವಾದ ಎತ್ತಿ ಹಿಡಿದು ಆದೇಶ ನೀಡಿತ್ತು. ಇದು ಕೇಶವನಾಂದ ಭಾರತಿಶ್ರೀ ಹಾಗೂ ಕೇರಳ ಸರಕಾರ ಆ್ಯಕ್ಟ್ ಎಂದು ಖ್ಯಾತವಾಗಿದೆ.

ಮಠಾಧೀಶರಾಗುವ ಮೊದಲು ಸ್ವಾಮಿ ತಮ್ಮ ಶಾಲಾ ದಿನಗಳಲ್ಲಿ ಯಕ್ಷಗಾನವನ್ನು ಕಲಿತಿದ್ದವರು. ಶ್ರೀಗಳು ಮಠಾಧೀಶರಾದ ಬಳಿಕ ಯಕ್ಷಗಾನ ಕ್ಷೇತ್ರಕ್ಕೆ ತಮ್ಮದೇ ಕೊಡುಗೆಗಳನ್ನು ನೀಡಿದ್ದಾರೆ. ಸ್ವತಃ ಭಾಗವತರಾಗಿ ಅನೇಕಾನೇಕ ಪ್ರಸಂಗಗಳನ್ನು ಸ್ವತಃ ನಿರ್ದೇಶಿಸುತ್ತಿದ್ದರು.  ಕರ್ನಾಟಕ ಮತ್ತು ಹಿಂದೂಸ್ತಾನಿ ಸಂಗೀತ ಕಲಿತ ಸ್ವಾಮಿ ಸಂಗೀತ ಕಚೇರಿಗಳನ್ನು ನಡೆಸುತ್ತಿದ್ದರು. ಕನ್ನಡ, ತುಳು, ಮಲಯಾಳ, ಹಿಂದಿ, ಮರಾಠಿ ಮತ್ತು ಸಂಸ್ಕೃತದಲ್ಲಿ ಭಕ್ತಿಗೀತೆಗಳನ್ನು ಹಾಡುತ್ತಿದ್ದರು.  ಎಲ್ಲಾ ಭಕ್ತಿಗೀತೆಗಳನ್ನು ಅವರೇ ಸ್ವತಃ ಬರೆದು ಸಂಯೋಜಿಸಿರುವುದು ವಿಶೇಷತೆಯಾಗಿದೆ.  ಮಲಯಾಳಂ ಮತ್ತು ಕನ್ನಡದಲ್ಲಿ ಭಕ್ತಿಗೀತೆಗಳ ಸಿಡಿ.ಗಳನ್ನೂ ಸ್ವಾಮೀಜು ಬಿಡುಗಡೆ ಮಾಡಿದ್ದಾರೆ. ಅವರು ಸ್ವತಃ ನಾಟಕಗಳನ್ನು ಬರೆದು ನಿರ್ದೇಶಿಸಿದ್ದಾರೆ.

ಸದ್ಯ ಎಡನೀರು ಮಠದ ಅಂಕೆಯಲ್ಲಿ ಶಾಲೆ, ಕಾಲೇಜು, ಕಲಾ ತಂಡಗಳು ಮತ್ತು ಗೋಶಾಲೆ, ಕೃಷಿ ತೋಟಗಳು ನಿರ್ವಹಿಸಲ್ಪಡುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News