ಉತ್ತರಪ್ರದೇಶ: ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರನ್ನು ಥಳಿಸಿ ಕೊಂದ ದುಷ್ಕರ್ಮಿಗಳು

Update: 2020-09-07 17:36 GMT

ಲಕ್ನೋ, ಸೆ. 7: ಉತ್ತರಪ್ರದೇಶದ ಮೈನಪುರಿ ಹಾಗೂ ಕುಶಿನಗರ ಜಿಲ್ಲೆಗಳಲ್ಲಿ ನಡೆದ ಎರಡು ಪ್ರತ್ಯೇಕ ಗುಂಪಿನಿಂದ ಥಳಿತದ ಘಟನೆಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಮೊದಲನೆ ಘಟನೆಯಲ್ಲಿ ಮೈನಪುರಿ ಜಿಲ್ಲೆಯಲ್ಲಿ ಯುವಕರ ಗುಂಪೊಂದು ವ್ಯಕ್ತಿಯೋರ್ವನನ್ನು ಥಳಿಸಿ ಹತ್ಯೆಗೈದಿದೆ. ಮೃತಪಟ್ಟ ವ್ಯಕ್ತಿಯನ್ನು ಜಿಲ್ಲೆಯ ಖರಗ್‌ಜೀತ್‌ನಗರ ನಿವಾಸಿ ಸರ್ವೇಶ್ ಕುಮಾರ್ ಎಂದು ಗುರುತಿಸಲಾಗಿದೆ.

 ಸರ್ವೇಶ್ ಕುಮಾರ್ ಅವರ 15 ವರ್ಷದ ಪುತ್ರಿಗೆ ಕೆಲವು ಯುವಕರು ಕಳೆದ ಕೆಲವು ತಿಂಗಳಿಂದ ಕಿರುಕುಳ ನೀಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಸರ್ವೇಶ್ ಕುಮಾರ್ ತನ್ನ ಪುತ್ರಿಯನ್ನು ನೋಯ್ಡಾದಲ್ಲಿರುವ ಸಂಬಂಧಿಕರ ಮನೆಗೆ ಕಳುಹಿಸಲು ನಿರ್ಧರಿಸಿದ್ದರು. ಆದರೆ, ಸರ್ವೇಶ್ ಕುಮಾರ್ ಪುತ್ರಿಯನ್ನು ಮಾರಾಟ ಮಾಡಿದ್ದಾರೆ ಎಂದು ಯುವಕರು ಸುದ್ದಿ ಹಬ್ಬಿಸಿದರು.

ಈ ಹಿನ್ನೆಲೆಯಲ್ಲಿ ಕಬ್ಬಿಣದ ರಾಡ್ ಹಾಗೂ ದೊಣ್ಣೆಗಳೊಂದಿಗೆ ಮನೆಗೆ ಆಗಮಿಸಿದ ಗುಂಪು ಸರ್ವೇಶ್ ಕುಮಾರ್ ಅವರಿಗೆ ಹಲ್ಲೆ ನಡೆಸಿತು. ಇದರಿಂದ ಗಂಭೀರ ಗಾಯಗೊಂಡ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅವರು ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟರು.

ಸರ್ವೇಶ್ ಕುಮಾರ್ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕೆಲವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕುಶೀನಗರ ಜಿಲ್ಲೆಯ ರಾಮ್‌ಪುರಬಾಂಗ್ರಾ ಗ್ರಾಮದಲ್ಲಿ ನಡೆದ ಎರಡನೇ ಘಟನೆಯಲ್ಲಿ ಕೊಲೆ ಆರೋಪಿಯೋರ್ವನನ್ನು ಗುಂಪೊಂದು ಸೋಮವಾರ ಥಳಿಸಿ ಹತ್ಯೆಗೈದಿದೆ. ಈ ಹತ್ಯೆ ಸಂದರ್ಭ ಪೊಲೀಸರು ಕೂಡ ಇದ್ದರು.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಘಟನೆಗೆ ಸಂಬಂಧಿಸಿದ ವೀಡಿಯೊದಲ್ಲಿ ಗುಂಪೊಂದು ವ್ಯಕ್ತಿಗೆ ದೊಣ್ಣೆಯಿಂದ ಥಳಿಸುತ್ತಿರುವುದು, ಈ ಸಂದರ್ಭ ಪೊಲೀಸರು ದಾಳಿಕೋರರನ್ನು ರಕ್ಷಿಸಲು ಪ್ರಯತ್ನಿಸುತ್ತಿರುವುದು, ಬಳಿಕ ವಿಫಲವಾಗಿರುವುದು ದಾಖಲಾಗಿದೆ.

  ಗೋರಖ್‌ಪುರದ ನಿವಾಸಿಯಾದ ಈ ವ್ಯಕ್ತಿ ಇಂದು ಬೆಳಗ್ಗೆ ತನ್ನ ತಂದೆಯ ಬಂದೂಕು ಬಳಸಿ ಅಧ್ಯಾಪಕ ಸುಧೀರ್ ಆಲಿಯಾಸ್ ಗುಡ್ಡು ಸಿಂಗ್ ಅವರನ್ನು ಹತ್ಯೆಗೈದಿದ್ದ. ಅನಂತರ ಮನೆಯ ಟೆರೇಸ್ ಏರಿ ಬಂದೂಕು ಬೀಸಿದ್ದ. ಗ್ರಾಮ ನಿವಾಸಿಗಳನ್ನು ದೂರ ಸರಿಸಲು ಗುಂಡು ಹಾರಿಸಿದ್ದ. ಪೊಲೀಸರು ಆಗಮಿಸಿದಾಗ ಆತ ಶರಣಾಗತನಾಗಲು ಪ್ರಯತ್ನಿಸಿದ. ಆದರೆ, ಗ್ರಾಮಸ್ಥರು ಆತನನ್ನು ಸೆರೆ ಹಿಡಿದು, ದೊಣ್ಣೆ ಹಾಗೂ ಕಲ್ಲಿನಿಂದ ಹಲ್ಲೆ ನಡೆಸಿದರು. ಗಂಭೀರ ಗಾಯಗಂಡ ಆತ ಸಾವನ್ನಪ್ಪಿದ ಎಂದು ಪೊಲೀಸ್ ಅಧೀಕ್ಷಕ ವಿನೋದ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ.

ದಾಳಿಕೋರರನ್ನು ಇದುವರೆಗೆ ಗುರುತಿಸಿಲ್ಲ ಎಂದು ಅವರು ಮಿಶ್ರಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News