ಯುವಕರನ್ನೇ ಗುರಿ ಮಾಡಿಕೊಂಡ ಡ್ರಗ್ಸ್ ಜಾಲ

Update: 2020-09-08 05:09 GMT

ಮಂಗಳೂರು, ಸೆ.7: ಡ್ರಗ್ಸ್ ಎಂಬ ಮಾಯಾಜಾಲದಲ್ಲಿ ಟಾರ್ಗೆಟ್ ಯುವಜನತೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಸೋಮವಾರ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿರುವ ಪೊಲೀಸ್ ಠಾಣೆಗಳಲ್ಲಿ ಮಾದಕ ಸಾಗಾಟ ಮತ್ತು ವ್ಯಸನ ಪ್ರಕರಣಗಳ ಆರೋಪಿಗಳ ಪರೇಡ್‌ನಲ್ಲೂ ಇದು ಮತ್ತೊಮ್ಮೆ ಸಾಬೀತಾಯಿತು. ಡ್ರಗ್ಸ್ ಮಾರಾಟ ಪೂರೈಕೆಗೆ ಸಂಬಂಧಿಸಿ ಅಲ್ಲಿ ಸೇರಿದ್ದ ಆರೋಪಿಗಳೂ ಯುವಕರು ಹಾಗೂ ಮಧ್ಯವಯಸ್ಕರು!

2016ರಿಂದೀಚೆಗೆ ಮಾದಕ ದ್ರವ್ಯ ಪೂರೈಕೆ ಮತ್ತು ಸಾಗಾಟ ಪ್ರಕರಣಗಳ ಆರೋಪಿಗಳಿಗೆ ಪೊಲೀಸರು ನೋಟಿಸ್ ನೀಡಿ ಬರಲು ಹೇಳಿದ್ದು 180 ಆರೋಪಿಗಳನ್ನು. ಪರೇಡ್‌ಗೆ ಆಗಮಿಸಿದ್ದವರ ಸಂಖ್ಯೆ 90. ಅದರಲ್ಲೂ ಆರು ಮಂದಿ ವಿದ್ಯಾರ್ಥಿಗಳು!

ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಪ್ರತಿ ಆರೋಪಿಯನ್ನು ಪ್ರತ್ಯೇಕವಾಗಿ ಕರೆಸಿಕೊಂಡು ಅವರ ಸಂಪೂರ್ಣ ಮಾಹಿತಿ ಸಂಗ್ರಹಿಸಿ, ಅವರಿಗೆ ಎಚ್ಚರಿಕೆ ಜತೆಗೆ ಜಾಗೃತಿ ಮೂಡಿಸಿದರು. ಪೊಲೀಸ್ ಸಿಸಿಬಿ ಇನ್‌ಸ್ಪೆಕ್ಟರ್ ಶಿವಪ್ರಕಾಶ್ ಆರ್. ನಾಯ್ಕೆ ಹಾಗೂ ಇತರ ಅಧಿಕಾರಿಗಳು ಆರೋಪಿಗಳಿಗೆ ಪ್ರತ್ಯೇಕವಾಗಿ ಮುಂದೆ ಇಂತಹ ಪ್ರಕರಣಗಳಲ್ಲಿ ಭಾಗಿಯಾಗದೆ ಉತ್ತಮ ಜೀವನ ನಡೆಸುವಂತೆ ಸಲಹೆ ನೀಡಿದರು. ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಕೂಡಾ ಆರೋಪಿಗಳನ್ನು ವಿಚಾರಣೆ ನಡೆಸಿ, ಮತ್ತೆ ದಂಧೆ ಮುಂದುವರಿಸಿದರೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದರು. ರೌಡಿ ಶೀಟರ್‌ಗಳನ್ನಾದರೆ ಗುರುತಿಸುವುದು ಸುಲಭ. ಅವರ ವಿಳಾಸವನ್ನು ಪತ್ತೆಹಚ್ಚಿ ಅವರನ್ನು ಬರ ಹೇಳಿ ಪರೇಡ್ ಮಾಡಲಾಗುತ್ತದೆ. ಆದರೆ ಡ್ರಗ್ಸ್ ಪ್ರಕರಣಗಳ ಆರೋಪಿಗಳು ಠಾಣೆಗಳಲ್ಲಿ ನೀಡಿರುವ ಸಂಪರ್ಕ ಸಂಖ್ಯೆಯನ್ನೇ ಬದಲಾಯಿಸಿರುತ್ತಾರೆ. ಅವರನ್ನು ಅವರ ನಿವಾಸ ಸ್ಥಳಕ್ಕೆ ತೆರಳಿ ಪತ್ತೆಹಚ್ಚಿ ಅವರನ್ನು ಕರೆಸಲಾಗಿದೆ. ಕಳೆದ ಎರಡು ದಿನಗಳಲ್ಲಿ ಇಲಾಖೆ ವತಿಯಿಂದ ಆರೋಪಿಗಳ ಮಾಹಿತಿ ಕಲೆ ಹಾಕಿ ಅವರನ್ನು ಇಲ್ಲಿಗೆ ಕರೆಸುವ ಈ ಕಾರ್ಯ ಮಾಡಲಾಗಿದೆ ಎನ್ನುತ್ತಾರೆ ಪೊಲೀಸ್ ಸಿಬ್ಬಂದಿ.

ಅಪರಾಧ ಪ್ರಕರಣಗಳಲ್ಲಿ ಡ್ರಗ್ಸ್ ನಂಟು!

ಪೊಲೀಸರೇ ಹೇಳುವ ಪ್ರಕಾರ ಬಹುತೇಕ ಅಪರಾಧ ಪ್ರಕರಣಗಳಲ್ಲೂ ಡ್ರಗ್ಸ್ ನಂಟು ಕಂಡು ಬಂದಿದೆ. ಮಾದಕ ದ್ರವ್ಯಗಳ ನಶೆಯಲ್ಲಿರುವಾಗ ಯಾವುದೇ ಅಳುಕು, ಮುಲಾಜಿಲ್ಲದೆ ಅಪರಾಧ ಕೃತ್ಯಗಳನ್ನು ಎಸಗಲಾಗುತ್ತದೆ. ಒಂದೆಡೆ ಡ್ರಗ್ಸ್ ವ್ಯಸನಿಗೆ ಕ್ಷಣಿಕ ಮೋಜು ಮಸ್ತಿಯನ್ನು ನೀಡಿದರೆ, ಅಪರಾಧ ಕೃತ್ಯಗಳಿಗೂ ಪ್ರೇರೇಪಿಸುತ್ತದೆ.

ಪಾರ್ಟಿಗಳಲ್ಲಿ ಎಲ್‌ಎಸ್‌ಡಿ, ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ಸ್!

ಡ್ರಗ್ಸ್‌ಗಳಲ್ಲಿ ಮಂಗಳೂರು ನಗರದಲ್ಲಿ ಬಹುತೇಕ ವಾಗಿ ಪ್ರಕರಣಗಳಲ್ಲಿ ಸಿಕ್ಕಿ ಬೀಳುತ್ತಿರುವುದು ಗಾಂಜಾ. ಇತ್ತೀಚೆಗೆ ಪ್ರಕರಣವೊಂದರಲ್ಲಿ 132 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಬಹುತೇಕವಾಗಿ ನಗರದಲ್ಲಿ ವಿದ್ಯಾರ್ಥಿಗಳಿಗೆ ಪೂರೈಕೆಯಾಗುವುದು ಟ್ಯಾಬ್ಲೆಟ್ ರೂಪದ ಮಾದಕ ದ್ರವ್ಯಗಳು. ಅದೇ ರೀತಿ ಪಬ್, ಪಾರ್ಟಿಗಳಲ್ಲಿ ಪೂರೈಕೆಯಾಗುವುದು ಎಲ್‌ಎಸ್‌ಡಿ. ಗಾಂಜಾ ಸಾಮಾನ್ಯವಾಗಿ ಕೂಲಿ ಕಾರ್ಮಿಕ ಯುವಕರಿಗೆ ಸರಬರಾಜಾಗುತ್ತದೆ. ಉಳಿದಂತೆ ಕಾಲೇಜು ವಿದ್ಯಾರ್ಥಿಗಳಿಗೆ ಕೊಕೇನ್, ಎಂಡಿಎಂಎ, ಚರಸ್ ಮೊದಲಾದ ಮಾದಕ ದ್ರವ್ಯಗಳೂ ಪೂರೈಕೆಯಾಗುತ್ತವೆ. ಗಾಂಜಾ, ಕೊಕೇನ್, ಮರಿಜುವಾನ, ಬ್ರೌನ್ ಶುಗರ್, ಹೆರಾಯಿನ್ ಸೇವನೆಯ ಜತೆಗೆ ಕೆಲವರು ವೈಟ್ನರ್ ಹೀರುವ, ವಾಸನೆ ಗ್ರಹಿಸುವ ಗೀಳನ್ನೂ ಅಂಟಿಸಿಕೊಂಡಿರುತ್ತಾರೆ ಎನ್ನುತ್ತಾರೆ ಮಂಗಳೂರು ನಗರ ಸಿಸಿಬಿ ಇನ್‌ಸ್ಪೆಕ್ಟರ್ ಶಿವಪ್ರಕಾಶ್ ಆರ್. ನಾಯ್ಕೆ.

ಪೋಸ್ಟಲ್ ಸ್ಟಾಂಪ್ ಆಕಾರದ ಎಲ್‌ಎಸ್‌ಡಿ (ಲೈಸೆರ್ಜಿಕ್ ಆ್ಯಸಿಡ್ ಡೈಥಿಲಾಮೈಡ್) ವಿದೇಶಗಳಿಂದಲೂ ಸರಬರಾಜಾಗುತ್ತಿವೆ ಎನ್ನುವ ಆರೋಪ ಇದೆ. ಡ್ರಗ್ಸ್ ಹೊರ ರಾಜ್ಯಗಳಿಂದ ಮಂಗಳೂರಿಗೆ ಸರಬರಾಜಾಗುತ್ತಿದೆ. ಮಾತ್ರವಲ್ಲದೆ ವಿದೇಶದಿಂದಲೂ ಸರಬರಾಜಾಗುತ್ತಿದೆ ಎಂಬ ಆರೋಪವನ್ನು ಅಲ್ಲಗಳೆಯಲಾಗದು ಎಂದು ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಅವರೂ ಹೇಳುತ್ತಾರೆ. ಎಲ್‌ಎಸ್‌ಡಿ ಮಾದಕ ವಸ್ತುವನ್ನು ಆ್ಯಸಿಡ್‌ನಿಂದ ಕೃತಕವಾಗಿ ತಯಾರಿಸಲಾಗುತ್ತದೆ. ಇದು ಬಹುತೇಕ ಯಾರ ಗಮನಕ್ಕೂ ಬರುವುದು ಅಸಾಧ್ಯ. ಪೋಸ್ಟಲ್ ಸ್ಟಾಂಪ್ ಆಕಾರದ ಈ ಮಾದಕ ದ್ರವ್ಯ, ಹಲವು ಬಣ್ಣ, ಆಕರ್ಷಣೀಯ ಕಾರ್ಟೂನ್ ಚಿತ್ರಗಳಿಂದ ತುಂಬಿರುತ್ತದೆ. ಇದರ ನಶೆ ಸುಮಾರು 12 ಗಂಟೆಗಳ ಕಾಲ ಇರುತ್ತದೆ. ವ್ಯಸನಿಗಳು ಇದು ಒಂದು ರೀತಿಯ ಸಂತಸವನ್ನು ನೀಡುತ್ತದೆ ಎನ್ನುವ ಭ್ರಮೆಯನ್ನು ಸೃಷ್ಟಿಸಿಕೊಂಡಿರುತ್ತಾರೆ ಎನ್ನುತ್ತಾರೆ ತಜ್ಞರು.

ಲಾಕ್‌ಡೌನ್ ಸಂದರ್ಭದಲ್ಲಿ ಬಿಡುವು!

ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ಮಾಹಿತಿಯ ಪ್ರಕಾರ ಕೊರೋನ ಲಾಕ್‌ಡೌನ್ ಆಗಿದ್ದ ಎಪ್ರಿಲ್, ಮೇ ತಿಂಗಳಲ್ಲಿ ಮಾದಕ ದ್ರವ್ಯ ಸಾಗಾಟ ಪ್ರಕರಣಗಳಿಗೆ ಬ್ರೇಕ್ ದೊರಕಿತ್ತು. 2020ರ ಫೆಬ್ರವರಿಯಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 6 ಪ್ರಕರಣಗಳು ದಾಖಲಾಗಿದ್ದು, 9 ಮಂದಿಯನ್ನು ಬಂಧಿಸಲಾಗಿತ್ತು. ಈ ಪ್ರಕರಣಗಳಲ್ಲಿ ಒಟ್ಟು 21.89 ಗ್ರಾಂಗಳ ಎಂಡಿಎಂ, 1.064 ಕೆಜಿ ಗಾಂಜಾ ಸೇರಿ ಒಟ್ಟು 1,15,650 ರೂ. ವೌಲ್ಯದ ಮಾದಕ ದ್ರವ್ಯ ವಶಪಡಿಸಲಾಗಿತ್ತು. ಮಾರ್ಚ್‌ನಲ್ಲಿ ಮೂರು ಪ್ರಕರಣಗಳಲ್ಲಿ 4 ಮಂದಿ ಆರೋಪಿಗಳ ಬಂಧನದೊಂದಿಗೆ 2.700 ಗ್ರಾಂನ ಗಾಂಜಾ ವಶಪಡಿಸಿಕೊಳ್ಳಲಾಗಿತ್ತು (ವೌಲ್ಯ 42,000 ರೂ.).

ಜೂನ್‌ನಲ್ಲಿ ಲಾಕ್‌ಡೌನ್ ಅನ್‌ಲಾಕ್‌ಗೊಳ್ಳುತ್ತಿರುವಂತೆಯೇ ಪೊಲೀಸರು ವಶಪಡಿಸಿಕೊಂಡ ಗಾಂಜಾ 410 ಗ್ರಾಂ ಹಾಗೂ ಗಾಂಜಾ ಹಶೀಸ್ ಆಯಿಲ್ 14 ಗ್ರಾಂಗಳು. ಎರಡು ಪ್ರಕರಣಗಳಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು. ಜುಲೈ ತಿಂಗಳಲ್ಲಿ 3 ಪ್ರಕರಣಗಳಲ್ಲಿ 9 ಮಂದಿಯನ್ನು ಬಂಧಿಸಿ 2.696 ಕೆಜಿ ಗಾಂಜಾವನ್ನು (85,000 ರೂ. ವೌಲ್ಯ) ವಶಪಡಿಸಿಕೊಳ್ಳಲಾಗಿತ್ತು.

ಆಗಸ್ಟ್ ನಲ್ಲಿ ಬೃಹತ್ ಮೊತ್ತದ ಡ್ರಗ್ಸ್ ವಶ!

2020ರ ಆಗಸ್ಟ್ ತಿಂಗಳೊಂದರಲ್ಲೇ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 37,75,300 ರೂ. ವೌಲ್ಯದ ಡ್ರಗ್ಸ್‌ನ್ನು ನಾಲ್ಕು ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿದ್ದು, 9 ಮಂದಿಯನ್ನು ಬಂಧಿಸಲಾಗಿದೆ. ಇದರಲ್ಲಿ ಎಂಡಿಎಂ ಪಿಲ್ಸ್ 153, ಎಂಡಿಎಂಎ ಪಿಲ್ಸ್ 8.25 ಗ್ರಾಂಗಳು, 139.336 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಪೂರೆಕೆದಾರ 90 ಆರೋಪಿಗಳಲ್ಲಿ ಆರು ವಿದ್ಯಾರ್ಥಿಗಳು!

ಕಳೆದ ಜನವರಿಯಿಂದ ಈವರೆಗೆ ಮಾದಕ ದ್ರವ್ಯ ಸಾಗಾಟ, ಪೂರೈಕೆ ಮತ್ತು ಸೇವನೆ ಪ್ರಕರಣಕ್ಕೆ ಸಂಬಂಧಿಸಿ 20 ಪ್ರಕರಣಗಳು ದಾಖಲಾಗಿವೆ. ಕಳೆದ ಎರಡು ತಿಂಗಳಲ್ಲಿಯೇ 10 ಪ್ರಕರಣಗಳು ದಾಖಲಾಗಿವೆ. ಇತ್ತೀಚೆಗೆ ಪತ್ತೆಯಾದ ಒಂದು ಪ್ರಕರಣದಲ್ಲೇ 132 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಇಂದು ಡ್ರಗ್ಸ್ ಸಾಗಾಟ, ಪೂರೈಕೆ ಪ್ರಕರಣಗಳ ಆರೋಪಿಗಳಲ್ಲಿ 180 ಮಂದಿಯನ್ನು ನಿರೀಕ್ಷಿಸಲಾಗಿದ್ದು, 90 ಮಂದಿ ಆಗಮಿಸಿದ್ದಾರೆ. ಅವರಲ್ಲಿ ಆರು ಮಂದಿ ವಿದ್ಯಾರ್ಥಿಗಳು ಕೂಡಾ ಸೇರಿದ್ದಾರೆ.

ವಿಕಾಸ್ ಕುಮಾರ್, ಆಯುಕ್ತರು,

ಮಂಗಳೂರು ಪೊಲೀಸ್ ಕಮಿಷನರೇಟ್

ಬಾಳೆ ಹಣ್ಣಿನ ಗೊನೆಗಳ ನಡುವೆ ಗಾಂಜಾ ಚೀಲ!

ಇತ್ತೀಚೆಗೆ ಕೇರಳದಿಂದ ಸರಬರಾಜಾಗುವ ಬಾಳೆಹಣ್ಣಿನ ಗೊನೆಗಳನ್ನು ಒಳಗೊಂಡ ವಾಹನದಲ್ಲಿ ಮೂರು ಗಾಂಜಾ ಚೀಲಗಳು ಪತ್ತೆಯಾಗಿದ್ದವು. ಬಾಳೆಹಣ್ಣಿನ ಗೊನೆಗಳಿಂದ ತುಂಬಿದ್ದ ವಾಹನದಲ್ಲಿ ಗೊನೆಗಳ ನಡುವೆ ಈ ಚೀಲಗಳನ್ನು ಇರಿಸಲಾಗಿತ್ತು. 130 ಕೆಜಿಗೂ ಅಧಿಕ ಪ್ರಮಾಣದ ಗಾಂಜಾ ಸುಮಾರು 40 ಲಕ್ಷ ರೂ. ವೌಲ್ಯದ್ದಾಗಿತ್ತು. ಕಳೆದ ಲಾಕ್‌ಡೌನ್‌ನ ಎರಡು ತಿಂಗಳ ಅವಧಿಯಲ್ಲಿ ಮಾದಕ ದ್ರವ್ಯಗಳ ಪೂರೈಕೆ, ಸಾಗಾಟಕ್ಕೆ ಕಡಿವಾಣ ಬಿದ್ದಿದ್ದು, ಅನ್‌ಲಾಕ್‌ಗೊಳ್ಳುತ್ತಿದ್ದಂತೆಯೇ ಅದು ಆರಂಭಗೊಂಡಿದೆ. ಮಾದಕ ದ್ರವ್ಯಗಳ ಸಾಗಾಟ ರೈಲು ಮಾರ್ಗದ ಮೂಲಕವೂ ನಡೆಯುತ್ತದೆ.

ಶಿವಪ್ರಕಾಶ್ ಆರ್. ನಾಯ್ಕ್,

ಇನ್‌ಸ್ಪೆಕ್ಟರ್, ಸಿಸಿಬಿ, ಮಂಗಳೂರು

Writer - ಸತ್ಯಾ ಕೆ.

contributor

Editor - ಸತ್ಯಾ ಕೆ.

contributor

Similar News