ಆತನನ್ನು ಕೊಲ್ಲುವ ಮುನ್ನ ‘ಜೈ ಶ್ರೀರಾಮ್’ ಹೇಳಿಸಲಾಗಿತ್ತು: ಮೃತ ಟ್ಯಾಕ್ಸಿ ಚಾಲಕನ ಕುಟುಂಬದ ಆರೋಪ

Update: 2020-09-08 17:14 GMT

ಹೊಸದಿಲ್ಲಿ,ಸೆ.8: ಉತ್ತರ ಪ್ರದೇಶದ ಬುಲಂದಶಹರಕ್ಕೆ ಪ್ರಯಾಣಿಕನೋರ್ವನನ್ನು ಬಿಟ್ಟು ಮನೆಗೆ ವಾಪಸಾಗುತ್ತಿದ್ದ ದಿಲ್ಲಿಯ ಟ್ಯಾಕ್ಸಿ ಚಾಲಕನೋರ್ವ ರವಿವಾರ ತನ್ನದೇ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದು,ಆತ ಮರಳುವಾಗ ಬುಲಂದಶಹರದಲ್ಲಿ ಹತ್ತಿಸಿಕೊಂಡಿದ್ದ ಕೆಲವು ಪ್ರಯಾಣಿಕರು ಆತನನ್ನು ಕೊಲ್ಲುವ ಮುನ್ನ ‘ಜೈ ಶ್ರೀರಾಮ್’ ಎಂದು ಹೇಳುವಂತೆ ಮಾಡಿದ್ದರು ಎಂದು ಕುಟುಂಬವು ಆರೋಪಿಸಿದೆ.

ದಿಲ್ಲಿಯಿಂದ 57ಕಿ.ಮೀ.ದೂರದ ಗ್ರೇಟರ್ ನೋಯ್ಡಾದ ಬದಲ್‌ಪುರದಲ್ಲಿ ಚಾಲಕ ಅಫ್ತಾಬ್ ಅಮಲ್ (45) ಶವದ ಸಹಿತ ಕಾರು ಪತ್ತೆಯಾಗಿತ್ತು. ಚಾಲಕನ ಸಾವಿನಲ್ಲಿ ಯಾವುದೇ ಕೋಮುದ್ವೇಷವನ್ನು ಪೊಲೀಸರು ನಿರಾಕರಿಸಿದ್ದಾರೆ.

 ಬುಲಂದಶಹರದಿಂದ ಮರಳುವಾಗ ಅಫ್ತಾಬ್ ಮೂವರು ಪ್ರಯಾಣಿಕರನ್ನು ಹತ್ತಿಸಿಕೊಂಡಿದ್ದರು. ಮಾರ್ಗಮಧ್ಯೆ ಅವರು ತನ್ನ ಮೊಬೈಲ್‌ನಿಂದ ಮನೆಗೆ ಕರೆ ಮಾಡಿದ್ದರು ಎಂದು ಹೇಳಿದ ಅವರ ಪುತ್ರ ಸಾಬಿರ್, ಏನೋ ಗೊಂದಲವಿದೆ ಎಂದು ತನಗೆ ಅನ್ನಿಸಿತ್ತು, ಹೀಗಾಗಿ ಕರೆಯನ್ನು ರೆಕಾರ್ಡ್ ಮಾಡಿಕೊಳ್ಳಲು ತಾನು ನಿರ್ಧರಿಸಿದ್ದೆ ಎಂದು ಹೇಳಿದರು.

“ ಕಾರಿನಲ್ಲಿದ್ದ ಜನರು ಒಳ್ಳೆಯವರಲ್ಲ ಎಂದು ನನ್ನ ತಂದೆಗೆ ಅನಿಸಿರಬೇಕು, ಹೀಗಾಗಿ ಅವರು ನನಗೆ ಕರೆ ಮಾಡಿ ತನ್ನ ಮೊಬೈಲ್‌ನ್ನು ಚಾಲೂ ಸ್ಥಿತಿಯಲ್ಲಿಯೇ ಕಾರಿನಲ್ಲಿ ಒಂದೆಡೆ ಇರಿಸಿದ್ದರು ಮತ್ತು ನಾನು ರೆಕಾರ್ಡಿಂಗ್ ಆರಂಭಿಸಿದ್ದೆ. 7-8 ನಿಮಿಷಗಳ ಬಳಿಕ ಅವರು ‘ಜೈ ಶ್ರೀರಾಮ್’ ಎನ್ನುವಂತೆ ತಂದೆಗೆ ತಿಳಿಸಿದ್ದರು ಮತ್ತು ಅವರು ಹಾಗೆಯೇ ಮಾಡಿದ್ದರು. ಬಳಿಕ ಕಾರನ್ನು ನಿಲ್ಲಿಸಿದ ಪ್ರಯಾಣಿಕರು ಅವರನ್ನು ಹತ್ಯೆ ಮಾಡಿದ್ದಾರೆ. ಅವರು ನನ್ನ ತಂದೆಯನ್ನು ದೋಚಿಲ್ಲ. ಕಾರಿಗೆ ಒಂದು ಗೆರೆಯೂ ಬಿದ್ದಿಲ್ಲ” ಎಂದು ಸಾಬಿರ್ ತಿಳಿಸಿದರು.

ಆದರೆ ಅಫ್ತಾಬ್ ಹತ್ಯೆಯ ಹಿಂದೆ ಕೋಮುದ್ವೇಷವಿತ್ತು ಎನ್ನುವುದನ್ನು ನಿರಾಕರಿಸಿದ ಸೆಂಟ್ರಲ್ ನೋಯ್ಡಾ ಡಿಸಿಪಿ ಹರೀಶ ಚಂದ್ರ ಅವರು, ಬಾಡಿಗೆಯ ಕುರಿತು ಉಂಟಾಗಿದ್ದ ವಿವಾದ ವಿಕೋಪಕ್ಕೆ ತಿರುಗಿದ ಪರಿಣಾಮ ಅಫ್ತಾಬ್ ಹತ್ಯೆಯಾಗಿದೆ. ಪ್ರಯಾಣಿಕರು ಕುಡಿಯುತ್ತಿದ್ದು,ದಾರಿ ಮಧ್ಯೆ ಕಾರು ನಿಲ್ಲಿಸಿ ರಸ್ತೆಬದಿಯಲ್ಲಿ ನೆಲಗಡಲೆ ಬೀಜವನ್ನು ಖರೀದಿಸುತ್ತಿದ್ದಾಗ ಅವರಲ್ಲೋರ್ವ ಮಾರಾಟಗಾರನಿಗೆ ‘ಜೈ ಶ್ರೀ ರಾಮ್’ ಎಂದು ಹೇಳಿದ್ದ. ಈ ಸಂವಾದ ಪ್ರಯಾಣಿಕರು ಮತ್ತು ಅಫ್ತಾಬ್ ನಡುವೆ ನಡೆದಿದ್ದಲ್ಲ ಎಂದರು.

ಇಡೀ ಆಡಿಯೊ ಕ್ಲಿಪ್ 40 ನಿಮಿಷಗಳಷ್ಟು ದೀರ್ಘವಾಗಿದೆ. ‘ಜೈ ಶ್ರೀರಾಮ್’ ಎಂದು ಹೇಳಿದ ಬಳಿಕ ಪ್ರಯಾಣಿಕರು ಮಾತಿನಲ್ಲಿ ಮುಳುಗಿದ್ದರು. ಅವರು ತಮಾಷೆಗಳನ್ನು ಹೇಳಿಕೊಳ್ಳುತ್ತ ನಗುತ್ತಿದ್ದರು ಎಂದೂ ಚಂದ್ರ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News