ದನ ಸಾಗಾಟದ ಆರೋಪ: ಯುವಕನಿಗೆ ಬಜರಂಗದಳ ಕಾರ್ಯಕರ್ತರಿಂದ ಹಲ್ಲೆ

Update: 2020-09-09 10:33 GMT

ಕಾರ್ಕಳ, ಸೆ.9: ಕಳೆದ ತಿಂಗಳು ದನ ಸಾಗಾಟದ ಆರೋಪದಲ್ಲಿ ಬಜರಂಗ ದಳದ ಕಾರ್ಯಕರ್ತರ ತಂಡದಿಂದ ಹಲ್ಲೆಗೊಳಗಾದ ಈದು ಗ್ರಾಮದ ಸೀತಾ ರಾಮ ಮಲೆಕುಡಿಯ ಅವರೊಂದಿಗೆ ಕೆಲಸ ಮಾಡುತ್ತಿರುವ ಸುಜಯ್ ದೇವಾಡಿಗ(30) ಎಂಬವರಿಗೆ ಅದೇ ತಂಡ ಸೆ.8ರಂದು ಸಂಜೆ 7ಗಂಟೆ ಸುಮಾರಿಗೆ ತೀವ್ರವಾಗಿ ಹಲ್ಲೆ ನಡೆಸಿರುವ ಬಗ್ಗೆ ವರದಿಯಾಗಿದೆ.

ಈದು ಗ್ರಾಮದ ಗುಮ್ಮೆಟ್ಟು ನಿವಾಸಿ ಸುಜಯ್ ದೇವಾಡಿಗ ತನ್ನ ಮನೆ ಸಮೀಪ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಕಾರಿನಲ್ಲಿ ಬಂದ ಬಜರಂಗದಳ ಕಾರ್ಯಕರ್ತರಾದ ಯೋಗೀಶ್ ಯಾನೆ ಮುನ್ನಾ, ರವಿ ಆಚಾರ್ಯ, ಅಶೋಕ್ ಯಾನೆ ಅಭಿ, ನಿತಿನ್ ಹಾಗೂ ಇತರ 17 ಮಂದಿ ಅಡ್ಡಗಟ್ಟಿದ್ದರೆನ್ನಲಾಗಿದೆ. ಬಳಿಕ ಸುಜಯ್ ದೇವಾಡಿಗ ಅವರಿಗೆ ಕೈಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವುದಾಗಿ ದೂರಲಾಗಿದೆ.

ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿರುವ ಸುಜಯ್ ದೇವಾಡಿಗ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಜು.22ರಂದು ಕೂಲಿ ಕಾರ್ಮಿಕರಾಗಿರುವ ಈದು ಗ್ರಾಮದ ಜಂಗೊಟ್ಟು ಕಾಲನಿಯ ಸೀತಾರಾಮ ಮಲೆಕುಡಿಯ, ಹೈನುಗಾರಿಕೆಗಾಗಿ ನೆರೆಮನೆಯ ಬಾಬು ಪೂಜಾರಿಯಿಂದ ಹಸುವೊಂದು ಖರೀದಿಸಿದ್ದರು. ಅದನ್ನು ಬಾಬು ಪೂಜಾರಿ ಮತ್ತು ಸುಜಯ ದೇವಾಡಿಗ, ಸೀತಾರಾಮ ಮಲೆಕುಡಿಯರ ಮನೆಗೆ ತಂದು ಹಟ್ಟಿಯಲ್ಲಿ ಕಟ್ಟಿದ್ದರು. ಅದೇ ದಿನ ಸಂಜೆ ಬಕ್ರೀದ್ ಹಬ್ಬಕ್ಕಾಗಿ ಆಡು ಖರೀದಿಸಲು ಬಂದ ಅಬ್ದುಲ್ ರಹ್ಮಾನ್ ಅವರ ಕಾರನ್ನು ಬಜರಂಗದಳದ ಕಾರ್ಯ ಕರ್ತರು ಅಡ್ಡಗಟ್ಟಿ ಧ್ವಂಸ ಮಾಡಿದ್ದರು ಎಂದು ಆರೋಪಿಸಲಾಗಿದೆ. ಅದೇ ದಿನ ರಾತ್ರಿ 50ಕ್ಕೂ ಅಧಿಕ ಬಜರಂಗದಳದ ಕಾರ್ಯಕರ್ತರು ಸೀತಾರಾಮ ಮಲೆಕುಡಿಯರ ಮನೆಗೆ ನುಗ್ಗಿ ಸೀತಾರಾಮ ಅವರನ್ನು ಅರೆ ನಗ್ನಗೊಳಿಸಿ ಹಲ್ಲೆ ನಡೆಸಿದ್ದರೆಂದು ದೂರಲಾಗಿತ್ತು.

ಆ ಸಮಯದಲ್ಲಿ ಸುಜಯ್ ದೇವಾಡಿಗ ಇವರಿಂದ ತಪ್ಪಿಸಿಕೊಂಡಿದ್ದರು. ಇವರೊಂದಿಗೆ ಸುಜಯ್ ಕೂಡ ಭಾಗಿಯಾಗಿದ್ದಾರೆಂದು ಆರೋಪಿಸಿ ಅದೇ ತಂಡ ಹಲ್ಲೆ ನಡೆಸಿದೆ ಎಂದು ಸುಜಯ್ ಸಹೋದರ ಉದಯ ದೇವಾಡಿಗ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News