ಸಂಪ್ರದಾಯದಂತೆ ಮಂಗಳೂರು ದಸರಾ ಮಹೋತ್ಸವ : ಜನಾರ್ದನ ಪೂಜಾರಿ

Update: 2020-09-09 11:05 GMT

ಮಂಗಳೂರು, ಸೆ. 9: ಜಗದ್ವಿಖ್ಯಾತ ಮಂಗಳೂರು ದಸರಾಕ್ಕೆ ತನ್ನದೇ ಆದ ಇತಿಹಾಸವಿದ್ದು, ಅದನ್ನು ಸರಕಾರ ಮಾರ್ಗಸೂಚಿಯನ್ನು ಪಾಲಿಸಿಕೊಂಡು ಈ ಬಾರಿಯೂ ಸಂಪ್ರದಾಯದಂತೆ ನಡೆಸಲು ನಿರ್ಧರಿಸಲಾಗಿದೆ ಎಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಅಭಿವೃದ್ಧಿಯ ರೂವಾರಿ ಜನಾರ್ದನ ಪೂಜಾರಿ ತಿಳಿಸಿದ್ದಾರೆ.

ಮಂಗಳೂರು ದಸರಾ ಉತ್ಸವದಲ್ಲಿ ಧಾರ್ಮಿಕ ನಂಬಿಕೆಯ ಜತೆ ಕರ್ನಾಟಕ ಕರಾವಳಿಯ ಆರ್ಥಿಕ ಪುನಶ್ಚೇತನ ಅಡಗಿದೆ. ದಸರಾ ಸಂದರ್ಭ ಕೊರೋನ ದೇಶದಿಂದ ಮುಕ್ತಗೊಳ್ಳುವ ನಿಟ್ಟಿನಲ್ಲಿ ವಿಶೇಷ ಪ್ರಾರ್ಥನೆಯೂ ಶ್ರೀಕ್ಷೇತ್ರದಲ್ಲಿ ನಡೆಯಲಿದೆ. ಆದುದರಿಂದ ಯಾವುದೇ ಕಾರಣಕ್ಕೂ ಮಂಗಳೂರು ದಸರಾ ಮಹೋತ್ಸವವನ್ನು ನಿಲ್ಲಿಸಬಾರದು ಎಂದಿನಂತೆ ವೈಭವದಿಂದ ನಡೆಸಬೇಕು ಎಂದು ನಿರ್ಧರಿಸಲಾಗಿದೆ. ಇದು ಭಕ್ತರು, ಉದ್ಯಮಿಗಳು, ವ್ಯಾಪಾರಿಗಳು, ಹಿತೈಷಿಗಳ ವಲಯಗಳ ಅಭಿಪ್ರಾಯವೂ ಆಗಿದೆ. ಈ ಕಾರಣದಿಂದ ಗಂಭೀರವಾಗಿ ಅಲೋಚಿಸಿದ ಆಡಳಿತ ಮಂಡಳಿ ಸರಕಾರದ ಮಾರ್ಗಸೂಚಿಯಂತೆ ಸಾಂಪ್ರದಾಯಿಕ ದಸರಾ ನಡೆಸಲು ನಿರ್ಧರಿಸಲಾಗಿದೆ ಎಂದು ಜನಾರ್ದನ ಪೂಜಾರಿ ತಿಳಿಸಿದ್ದಾರೆ.

ದಸರಾ ಮಹೋತ್ಸವದಲ್ಲಿ ಎಂದಿನಂತೆ ದರ್ಬಾರು ಮಂಟಪದಲ್ಲಿ ಮಹಾಗಣಪತಿ, ಶಾರದೆ, ನವದುರ್ಗೆಯರ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದೆ. ಉಳಿದಂತೆ ದಸರಾ ಮಹೋತ್ಸವ ಸಂದರ್ಭ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತಾದಿಗಳು ಸಾಮಾಜಿಕ ಅಂತರ ಕಾಪಾಡಿಕೊಂಡು ಆರೋಗ್ಯದ ಬಗ್ಗೆ ಎಚ್ಚರವಹಿಸುವ ನಿಟ್ಟಿನಲ್ಲಿ ಕ್ಷೇತ್ರದ ಆಡಳಿತ ಸಮಿತಿ ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ. ಇದಕ್ಕೆ ಭಕ್ತರ ಸಹಕಾರವೂ ಮುಖ್ಯವಾಗಿದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗೆ ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ 9448283999 ಅವರನ್ನು ಸಂಪರ್ಕಿಸಬಹುದು.

ಮೆರವಣಿಗೆ ಇರುವುದಿಲ್ಲ

ಮಂಗಳೂರು ದಸರಾದಲ್ಲಿ ಈ ಬಾರಿ ಟ್ಯಾಬ್ಲೋ, ದೇವರ ಮೆರವಣಿಗೆಯಿಲ್ಲ. ಕ್ಷೇತ್ರವನ್ನು ಸಂಪೂರ್ಣ ವಿದ್ಯುದ್ದೀಪಗಳಿಂದ ಅಲಂಕರಿಸಲಾ ಗುವುದು. ಆದರೆ ನಗರದಲ್ಲಿ ಯಾವುದೇ ಅಲಂಕಾರ ನಡೆಸದಿರಲು ನಿರ್ಧರಿಸಲಾಗಿದೆ.

ಮೂರ್ತಿರಚನೆ ಆರಂಭ: ದಸರಾ ಮಹೋತ್ಸವದಲ್ಲಿ ಪೂಜಿಸಲ್ಪಡುವ ಮೂರ್ತಿಗಳ ರಚನಾ ಕಾರ್ಯ ಆರಂಭಗೊಂಡಿದ್ದು, ಸುಮಾರು 10ಕ್ಕೂ ಅಧಿಕ ಕಲಾವಿದರು ಇದರಲ್ಲಿ ತೊಡಗಿಸಿಕೊಂಡಿದ್ದಾರೆ. ನವರಾತ್ರಿ ಆರಂಭದಂದೇ ಗಣಪತಿ, ಶಾರದೆ ಸಹಿತ ಎಲ್ಲ ಮೂರ್ತಿಗಳು ಪ್ರತಿಷ್ಠಾಪನೆ ಗೊಳ್ಳಲಿದೆ. ಕೊರೊನಾ ಸೋಂಕಿನ ಮಧ್ಯೆಯೂ ಮಂಗಳೂರು ದಸರಾ ಮಹೋತ್ಸವ ಯಶಸ್ವಿಯಾಗಿ ನಡೆಯಬೇಕಾದರೆ ಕ್ಷೇತ್ರದ ಆಡಳಿತ ಮಂಡಳಿಯ ಜತೆ ಸಹಕಾರ ದೊಡ್ಡದು ಎಂದು ಜನಾರ್ದನ ಪೂಜಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News