ಮೋದಿ ಸರಕಾರದ ನೀತಿಯಿಂದ ಕೋಟ್ಯಂತರ ಉದ್ಯೋಗ ನಷ್ಟ: ಬಿಜೆಪಿ ವಿರುದ್ಧ ಕಾಂಗ್ರೆಸ್ ದಾಳಿ

Update: 2020-09-10 13:35 GMT

ಹೊಸದಿಲ್ಲಿ,ಸೆ.10: ಕಾಂಗ್ರೆಸ್ ಪಕ್ಷವು ದೇಶದಲ್ಲಿ ನಿರುದ್ಯೋಗ ಕುರಿತು ನರೇಂದ್ರ ಮೋದಿ ಸರಕಾರದ ವಿರುದ್ಧ ಆನ್‌ಲೈನ್ ಅಭಿಯಾನವೊಂದನ್ನು ಆರಂಭಿಸಿದೆ. ‘ಸ್ಪೀಕ್ ಅಪ್ ಫಾರ್ ಜಾಬ್ಸ್’ ಹ್ಯಾಷ್‌ಟ್ಯಾಗ್ ಬಳಸಿ ಟ್ವೀಟ್‌ಗಳನ್ನು ಮಾಡಿರುವ ರಾಹುಲ್ ಗಾಂಧಿ,ಪ್ರಿಯಾಂಕಾ ಗಾಂಧಿ ವಾದ್ರಾ,ಶಶಿ ತರೂರ್ ಮತ್ತು ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವಾರು ಕಾಂಗ್ರೆಸ್ ನಾಯಕರು ಬಿಜೆಪಿಯ ನೀತಿಗಳ ವಿರುದ್ಧ ಧ್ವನಿಯೆತ್ತುವಂತೆ ಜನರನ್ನು ಆಗ್ರಹಿಸಿದ್ದಾರೆ.

ಒಂದರ ನಂತರ ಒಂದರಂತೆ ವಿನಾಶಕಾರಿ ನೀತಿಗಳ ಮೂಲಕ ಬಿಜೆಪಿಯು ಕೋಟ್ಯಂತರ ಭಾರತೀಯರ ಜೀವನೋಪಾಯಗಳನ್ನು ಕಿತ್ತುಕೊಂಡಿದೆ ಮತ್ತು ಯುವಜನರ ಭವಿಷ್ಯವನ್ನು ಅಂಧಕಾರದಲ್ಲಿ ತಳ್ಳಿದೆ ಎಂದು ಟ್ವೀಟಿಸಿರುವ ಕಾಂಗ್ರೆಸ್,ಪಕ್ಷದ ಅಭಿಯಾನದಲ್ಲಿ ಪಾಲ್ಗೊಂಡು ಬಿಜೆಪಿಯ ದುಸ್ಸಾಹಸಗಳ ವಿರುದ್ಧ ಧ್ವನಿಯೆತ್ತುವಂತೆ ಜನರನ್ನು ಕೋರಿದೆ.

ರಾಷ್ಟ್ರವ್ಯಾಪಿ ದಿಢೀರ್ ಲಾಕ್‌ಡೌನ್ ಹೇರಿಕೆ,ಜಿಡಿಪಿ ಕುಸಿತ ಮತ್ತು ಉದ್ಯೋಗ ನಷ್ಟ ಸೇರಿದಂತೆ ಸರಕಾರದ ವಿವಿಧ ವೈಫಲ್ಯಗಳನ್ನು ಪಟ್ಟಿ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು,‘ಮೋದಿ ಸರಕಾರದ ನೀತಿಗಳು ಕೋಟ್ಯಂತರ ಉದ್ಯೋಗಗಳ ನಷ್ಟ ಮತ್ತು ಜಿಡಿಪಿಯಲ್ಲಿ ಐತಿಹಾಸಿಕ ಕುಸಿತಕ್ಕೆ ಕಾರಣವಾಗಿವೆ. ಅದು ದೇಶದ ಯುವಜನರ ಭವಿಷ್ಯಕ್ಕೆ ಹಾನಿಯನ್ನುಂಟು ಮಾಡಿದೆ. ಸರಕಾರವು ನಮ್ಮ ಧ್ವನಿಗೆ ಕಿವಿಗೊಡುವಂತೆ ಮಾಡೋಣ ’ಎಂದು ಟ್ವೀಟಿಸಿದ್ದಾರೆ.

ಸರಕಾರವು ನಿರುದ್ಯೋಗಿಗಳಿಗೆ ಮತ್ತು ಬಡ ಕುಟುಂಬಗಳಿಗೆ 12 ತಿಂಗಳುಗಳಿಗೆ 6,000 ರೂ.ಗಳನ್ನು ನೀಡುವ ಮೂಲಕ ಅವರಿಗೆ ನ್ಯಾಯವನ್ನೊದಗಿಸಬೇಕು,ಸರಕಾರಿ ಉದ್ಯೋಗಗಳ ಕಡಿತವನ್ನು ನಿಲ್ಲಿಸಬೇಕು ಹಾಗೂ ಸಣ್ಣ,ಕಿರು ಮತ್ತು ಮಧ್ಯಮ ಉದ್ಯಮಗಳನ್ನು ಬೆಂಬಲಿಸಬೇಕು ಇತ್ಯಾದಿ ಬೇಡಿಕೆಗಳನ್ನು ಕಾಂಗ್ರೆಸ್ ಮಂಡಿಸಿದೆ.

‘ಹೆಚ್ಚುತ್ತಿರುವ ಖಾಸಗೀಕರಣ,ಸರಕಾರಿ ವೆಚ್ಚಗಳಲ್ಲಿ ಕಡಿತ ಮತ್ತು ಬಿಜೆಪಿ ಸರಕಾರದ ಕೆಟ್ಟ ಆರ್ಥಿಕ ನೀತಿಗಳಿಂದಾಗಿ ಉದ್ಯೋಗಗಳು ಒತ್ತಡದಲ್ಲಿ ಸಿಲುಕಿವೆ. ಖಾಲಿ ಹುದ್ದೆಗಳಿಗೆ ನೇಮಕಾತಿಯನ್ನು ಸರಕಾರವು ನಿಲ್ಲಿಸಿದೆ. ನಾನು ಇದರ ವಿರುದ್ಧ ಮಾತನಾಡುತ್ತಿದ್ದೇನೆ,ನೀವೂ (ಪ್ರಜೆಗಳು) ಇದರ ವಿರುದ್ಧ ಮಾತನಾಡುವ ಅಗತ್ಯವಿದೆ ’ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟಿಸಿದ್ದರೆ,ಬಿಜೆಪಿಯು ತನ್ನ ಕೈಗಾರಿಕೋದ್ಯಮಿ ಸ್ನೇಹಿತರಿಗೆ ನೆರವಾಗುವ ಮೂಲಕ ಅಸಂಘಟಿತ ಕ್ಷೇತ್ರವನ್ನು ನಾಶಗೊಳಿಸುತ್ತಿದೆ ಎಂದು ಪಕ್ಷದ ವಕ್ತಾರ ಪವನ ಖೇರಾ ಆರೋಪಿಸಿದ್ದಾರೆ.

2016ರಲ್ಲಿ ನೋಟು ನಿಷೇಧ ಸಂದರ್ಭದಲ್ಲಿಯೇ ಉದ್ಯೋಗ ನಷ್ಟವು ಆರಂಭಗೊಂಡಿತ್ತು ಮತ್ತು ಕಳೆದ ಆರು ತಿಂಗಳೊಂದರಲ್ಲೇ 2.10 ಕೋ.ಜನರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ.

ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಇಕಾನಮಿಯ ವರದಿಯನ್ನು ಉಲ್ಲೇಖಿಸಿರುವ ಖರ್ಗೆ,ಎಪ್ರಿಲ್‌ನಲ್ಲಿ 14 ಕೋ.ಉದ್ಯೋಗ ನಷ್ಟವಾಗಿರುವ ಸಾಧ್ಯತೆಯಿದೆ ಮತ್ತು ಈ ಪೈಕಿ ಮೂರು ಕೋಟಿ ಯುವಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News