ಅಯೋಧ್ಯೆ ರಾಮಮಂದಿರ ಟ್ರಸ್ಟ್‌ನ ಖಾತೆಯಿಂದ ನಕಲಿ ಚೆಕ್ ಮೂಲಕ 6 ಲಕ್ಷ ರೂ. ವರ್ಗಾವಣೆ: ವರದಿ

Update: 2020-09-10 16:16 GMT

ಹೊಸದಿಲ್ಲಿ, ಸೆ.10: ಅಯೋಧ್ಯೆ ರಾಮಂದಿರ ಟ್ರಸ್ಟ್‌ನ ಖಾತೆಯಿಂದ ನಕಲಿ ಚೆಕ್ ಬಳಸಿ 6 ಲಕ್ಷ ರೂ. ಹಣವನ್ನು ಬೇರೆ ಖಾತೆಗೆ ವರ್ಗಾಯಿಸಲಾಗಿದೆ ಎಂದು ಅಯೋಧ್ಯೆಯ ಸರ್ಕಲ್ ಆಫೀಸರ್ ರಾಜೇಶ್ ಕುಮಾರ್ ರಾಯ್ ಹೇಳಿರುವುದಾಗಿ ‘theprint.in’ ವರದಿ ಮಾಡಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಯಾ ಘಾಟ್ ಶಾಖೆಯಲ್ಲಿರುವ ಟ್ರಸ್ಟ್‌ನ ಖಾತೆಯಿಂದ (ಖಾತೆ ಸಂಖ್ಯೆ 39200235062) ಹಣ ವರ್ಗಾಯಿಸಲಾಗಿದೆ. ಟ್ರಸ್ಟ್‌ನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟೀ ಡಾ ಅನಿಲ್ ಮಿಶ್ರ ಈ ಖಾತೆಗೆ ಸಂಬಂಧಿಸಿದ ಅಧಿಕೃತ ಸಹಿದಾರರು.

ಸೆ.1ರಂದು ಚೆಕ್ ಸಂಖ್ಯೆ 740799ರ ಮೂಲಕ 2,50,000 ರೂ. ಮೊತ್ತವನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿದ್ದ ಖಾತೆಗೆ ಮತ್ತು ಸೆ.8ರಂದು 3,50,000 ರೂ. ಮೊತ್ತವನ್ನು ಇದೇ ಖಾತೆಗೆ ವರ್ಗಾಯಿಸಲಾಗಿದೆ. ಫೋರ್ಜರಿ ಮೂಲಕ ಹಣ ವರ್ಗಾಯಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಇದೇ ರೀತಿ, ಸೆ.9ರಂದು 9,86,000 ರೂ. ಮೊತ್ತದ ಚೆಕ್ ಅನ್ನು ( ಚೆಕ್ ಸಂಖ್ಯೆ 740798) ಬ್ಯಾಂಕ್ ಆಫ್ ಬರೋಡಾಗೆ ಸಲ್ಲಿಸಲಾಗಿತ್ತು. ಮೊತ್ತ ಹೆಚ್ಚಿರುವ ಹಿನ್ನೆಲೆಯಲ್ಲಿ ಬ್ಯಾಂಕ್‌ನ ಅಧಿಕಾರಿಗಳು ಸಹಿಯ ಪರಿಶೀಲನೆಗಾಗಿ ಚಂಪತ್ ರಾಯ್‌ರನ್ನು ಕರೆಸಿದ್ದಾರೆ. 740798 ಸಂಖ್ಯೆಯ ಚೆಕ್ ಹಾಳೆ ತನ್ನ ಬಳಿಯೇ ಇದೆ ಎಂದು ರಾಯ್ ತಿಳಿಸಿದ ಹಿನ್ನೆಲೆಯಲ್ಲಿ, ಬುಧವಾರ ರಾತ್ರಿ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ನಕಲಿ ಚೆಕ್ ಬಳಸಿ ಹಣ ವರ್ಗಾಯಿಸಿರುವ ಬಗ್ಗೆ ಪ್ರಾಥಮಿಕ ವಿಚಾರಣೆ ನಡೆಸುತ್ತಿದ್ದೇವೆ. ಬ್ಯಾಂಕ್ ಶಾಖೆಯ ಸಿಸಿಟಿವಿ ಫೂಟೇಜ್ ಪರಿಶೀಲಿಸಿ ತನಿಖೆ ಮುಂದುವರಿಸಿದ್ದೇವೆ. ಟ್ರಸ್ಟ್‌ನ ಸದಸ್ಯರಿಗೆ ಅತ್ಯಂತ ನಿಕಟವಾಗಿರುವ ಮತ್ತು ಅವರೊಂದಿಗೆ ನಿರಂತರ ಸಂಪರ್ಕದಲ್ಲಿರುವ ವ್ಯಕ್ತಿ ಈ ಕೃತ್ಯದ ಹಿಂದೆ ಇರುವ ಸಾಧ್ಯತೆಯಿದೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News